ಕ್ರೀಡೆ

ಆಂಗ್ಲರಿಗೆ ಆಘಾತ ನೀಡಿದ ಕಿವೀಸ್

ಆಂಗ್ಲರಿಗೆ ಆಘಾತ ನೀಡಿದ ಕಿವೀಸ್
Published On :

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಗೆದ್ದು ಹುಮ್ಮಸ್ಸಿನಲ್ಲಿದ್ದ ಆಂಗ್ಲರಿಗೆ, ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ 3 ವಿಕೆಟ್‌ಗಳ ಜಯ ದಾಖಲಿಸುವುದರೊಂದಿಗೆ ಆಘಾತ ನೀಡಿದೆ.
ಈ ಮೂಲಕ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ತಂಡ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಂಗ್ಲರು 49.3 ಓವರ್‌ಗಳಿಗೆ 258 ರನ್‌ಗಳಿಸಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡಿತು.
ಆಂಗ್ಲರ ನಾಯಕ ಅಲಸ್ಟೇರ್ ಕುಕ್ ಹಾಗೂ ಇಯಾನ್ ಬೆಲ್ ಆರಂಭಿಕರಾಗಿ ಕಣಕ್ಕಿಳಿದರು. ನಾಯಕ ಕುಕ್ ತಂಡದ ಮೊತ್ತ 11 ರನ್ ಆಗಿದ್ದಾಗ ಮೆಕ್ಲೆನಗನ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಎಡವಿದರು.
ನಂತರ ಬಂದ ಟ್ರಾಟ್, ಇಯಾನ್ ಬೆಲ್ ಜತೆಗೂಡಿ ತಂಡಕ್ಕೆ 84 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 64 ರನ್‌ಗಳಿಸಿದ್ದ ಬೆಲ್, ಫ್ರಾಂಕ್ಲಿನ್ ಎಸೆತದಲ್ಲಿ ಮೆಕಲಂಗೆ ಕ್ಯಾಚ್ ನೀಡುವ ಮೂಲಕ ಔಟಾದರು.
ನಂತರ ಬಂದ ರೂಟ್, ಟ್ರಾಟ್ ಜತೆಗೂಡಿದರು. ಈ ಜೋಡಿ 89 ರನ್‌ಗಳ ಜತೆಯಾಟ ನೀಡಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು. ಈ ವೇಳೆ ಎಚ್ಚರಿಕೆಯ ಆಟದಿಂದ 68 ರನ್‌ಗಳಿಸಿದ್ದ ಟ್ರಾಟ್ ಅವರು ಮಿಲ್ಸ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು.
ಇತ್ತ ರೂಟ್ ಕೂಡ 56 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ವೇಳೆ ಫ್ರಾಂಕ್ಲಿನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಮಾರ್ಗನ್ 1, ಬಟ್ಲರ್ 21, ವೊಕ್ಸ್ 17, ಬ್ರಾಡ್ 1, ಸ್ವಾನ್ 16 ಹಾಗೂ ಫಿನ್ 0 ರನ್‌ಗಳಿಸಿದರು.
ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸತತವಾಗಿ ವಿಕೆಟ್ ಒಪ್ಪಿಸಿದ ಹಿನ್ನಲೆಯಲ್ಲಿ, ಇಂಗ್ಲೆಂಡ್ ತಂಡ 258 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ನಿರೀಕ್ಷಿತ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಇನ್ನು ನ್ಯೂಜಿಲೆಂಡ್ ತಂಡದ ಪರ ಮೆಕ್ಲೆನಗನ್ 4, ಫ್ರಾಂಕ್ಲಿನ್ 3 ಹಾಗೂ ಮಿಲ್ಸ್ 2 ವಿಕೆಟ್ ಪಡೆದು ಯಶಸ್ವಿಯಾದರು.
ಈ ಸ್ಫರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ತಂಡ 48.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 259 ರನ್‌ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಆರಂಭದಲ್ಲಿ ಕೇವಲ 2 ರನ್‌ಗಳಿಗೆ ವಾಟ್ಲಿಂಗ್ ಅವರ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ತಂಡ, ಆರಂಭಿಕ ಆಘಾತ ಎದುರಿಸಿತು. ಈ ವೇಳೆ 6ನೇ ಓವರ್‌ನಲ್ಲಿ ಗಾಯಗೊಂಡ ಗುಪ್ಟಿಲ್ ಮೈದಾನದಿಂದ ಹೊರ ನಡೆದರು.
ನಂತರ ತಂಡಕ್ಕೆ ಆಸರೆಯಾಗಿ ನಿಂತ ವಿಲಿಯಮ್ಸ್ ಹಾಗೂ ಟೇಲರ್ ತಂಡದ ಮೊತ್ತವನ್ನು 75ರ ವರೆಗೆ ಕೊಂಡೊಯ್ದರು. ಈ ವೇಳೆ 22 ರನ್‌ಗಳಿಸಿದ್ದ ಟೇಲರ್ ವೊಕ್ಸ್ ಎಸೆತದಲ್ಲಿ ಫಿನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಎಲಿಯಟ್ ಕೂಡ 22ರನ್‌ಗಳಿಸಿ ವೊಕ್ಸ್ ಎಸೆತದಲ್ಲಿ ಮಾರ್ಗನ್‌ಗೆ ಕ್ಯಾಚ್ ನೀಡಿದರು. ಈ ವೇಳೆ 99 ಎಸೆತಗಳನ್ನು ಎದುರಿಸಿ 74 ರನ್‌ಗಳಿಸಿದ್ದ ವಿಲಿಯಮ್ಸನ್ ರನೌಟ್ ಆದರು. ನಂತರ ಬಂದ ನಾಯಕ ಬ್ರಂಡನ್ ಮೆಕಲಂ ತಮ್ಮ ನಾಯಕನ ಆಟ ಪ್ರದರ್ಶಿಸಿದರು.
ಮತ್ತೊಂದೆಡೆ ಫ್ರಾಂಕ್ಲಿನ್ 3, ನಾಥನ್ ಮೆಕಲಂ 14 ಹಾಗೂ ಎಲ್ಲಿಸ್ 13 ರನ್‌ಗಳಿಸಿ ಔಟಾದರು. ಈ ವೇಳೆ ಗಾಯದಿಂದ ಹೊರಗುಳಿದಿದ್ದ ಗುಪ್ಟಿಲ್ ಮತ್ತೆ ಬ್ಯಾಟಿಂಗ್‌ಗೆ ಇಳಿದರು. ಮೆಕಲಂ ಹಾಗೂ ಗುಪ್ಟಿಲ್ ಜತೆಗೂಡಿ ತಂಡಕ್ಕೆ ಮುರಿಯದ 41 ರನ್ ಜತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.