ಕ್ರೀಡೆ

ಆಸೀಸ್ ಮಡಿಲಿಗೆ ವಿಶ್ವಕಪ್

ಆಸೀಸ್ ಮಡಿಲಿಗೆ ವಿಶ್ವಕಪ್
Published On :

ಮುಂಬೈ: ತೀವ್ರ ಕುತೂಹಲ ಕೆರಳಿದ್ದ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಈ ಮೂಲಕ, ಕಾಂಗರೂ ಪಡೆ ಆರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ 259 ರನ್‌ಗಳನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್, 43.1 ಓವರ್‌ಗಳಲ್ಲಿ 145 ರನ್ ಪೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.  
ಟಾಸ್ ಗೆದ್ದದ್ದು ಲಾಭವಾಯಿತು: ಟಾಸ್ ಗೆದ್ದ ಆಸೀಸ್ ನಾಯಕಿ ಜೂಡಿ ಫೀಲ್ಡ್ಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ, ಆಸೀಸ್ ಇನಿಂಗ್ಸ್ ಆರಂಭಿಸಿದ ಮೆಗಾನ್ ಲ್ಯಾನಿಂಗ್ ಹಾಗೂ ರಾಚೆಲ್ ಹೇನ್ಸ್ ಇಬ್ಬರೂ ಉತ್ತಮ ಆರಂಭ ಒದಗಿಸಿದರು.
ಮೊದಲ ವಿಕೆಟ್‌ಗೆ ಈ ಜೋಡಿ 52 ರನ್‌ಗಳ ಜೊತೆಯಾಟವಾಡಿತು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಜೋಡಿಯನ್ನು ವಿಂಡೀಸ್‌ನ ಟೇಲರ್ ಅವರು ಮುರಿದರು.
ಕಿಶೋನಾ ಎಂ. ನೈಟ್‌ಗೆ ಕ್ಯಾಚ್ ನೀಡಿದ ಲ್ಯಾನಿಂಗ್, ವಿಕೆಟ್ ಒಪ್ಪಿಸಿ ಹೊರನಡೆದರು. 41 ಎಸೆತಗಳಲ್ಲಿ 6 ಬೌಂಡರಿ ಸಹಿತ 31 ರನ್ ಗಳಿಸಿದ್ದ ಲ್ಯಾನಿಂಗ್ ಅವರು ಹೊರನಡೆದ ನಂತರ, ಕ್ರೀಸ್‌ಗೆ ಬಂದಿದ್ದು ಕ್ಯಾಮೆರೂನ್. ನಂತರ, ಹೇನ್ಸ್- ಕ್ಯಾಮೆರೂನ್ ಜೋಡಿ 2ನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿತು. ಕ್ವಿಂಟೈನ್ ಮಾಡಿದ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಕಿಶೋನಾ ಅವರಿಗೆ ಕ್ಯಾಚ್ ನೀಡಿದ ಹೇನ್ಸ್ ವಿಕೆಟ್ ಒಪ್ಪಿಸಿ ಹೊರಡೆದರು.
ಒಟ್ಟು 74 ಎಸೆತಗಳನ್ನು ಎದುರಿಸಿದ್ದ ಅವರು, 52 ರನ್ ಗಳಿಸಿದ್ದರು. 88 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು 6 ಬೌಂಡರಿಗಳನ್ನು ಬಾರಿಸಿದ್ದರು. ಹೇನ್ಸ್ ಹೊರನಡೆದ ನಂತರ, ದಿಟ್ಟತನ ಬ್ಯಾಟಿಂಗ್ ಪ್ರದರ್ಶಿಸಿದ ಕ್ಯಾಮೆರೂನ್, 76 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸೇರಿದಂತೆ 75 ರನ್ ಗಳಿಸಿದರು. ಇನಿಂಗ್ಸ್‌ನ 36ನೇ ಓವರ್‌ನಲ್ಲಿ ಡೇಲೇ ಬೌಲಿಂಗ್‌ನಲ್ಲಿ ಕ್ಯಾಮೆರೂನ್ ಅವರು ಕಿಶೋನಾ ಎ. ನೈಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು, ಮಧ್ಯಮ ಕ್ರಮಾಂಕದ ಬ್ಲಾಕ್‌ವೆಲ್ (3), ಸ್ಟಾಲೇಕರ್ (12), ಕಾಯ್ಟ್ (7), ಆಸ್ಬೋರ್ನ್ (7) ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು.
ಆದರೂ, ಜೂಡಿ ಫೀಲ್ಡ್ಸ್ (ಅಜೇಯ 36) ಹಾಗೂ ಪೆರ್ರಿ (25) ನೆರವಿನಿಂದಾಗಿ, ಆಸೀಸ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು.ಭಾರತದ ವಿರುದ್ಧ 2005ರಲ್ಲಿ ಆಸೀಸ್ 215 ರನ್ ಪೇರಿಸಿತ್ತು. ಈ ಮೊತ್ತ, ಏಕದಿನ ಇನಿಂಗ್ಸ್ ಒಂದರಲ್ಲಿ ಆಸೀಸ್ ತಂಡ ದಾಖಲಿಸಿದ್ದ ಗರಿಷ್ಠ ಮೊತ್ತವಾಗಿತ್ತು.
ವಿಂಡೀಸ್ ಪತನ: ಆಸೀಸ್ ನೀಡಿದ್ದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ಗೆ ಕಿಸಿನಾ ನೈಟ್ ಹಾಗೂ ಮೆಕ್‌ಲೀನ್ ಇಬ್ಬರೂ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 32 ರನ್ ಮಾತ್ರ ಸೇರಿಸಿತು. 10ನೇ ಓವರ್‌ನಲ್ಲಿ ಕಿಸಿಯಾ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಮುರಿಯಿತು. ಅದಾದ ನಂತರ, ಕ್ರೀಸ್‌ಗೆ ಬಂದ ಮೂರನೇ ಕ್ರಮಾಂಕದ ಟೇಲರ್, ವೈಯಕ್ತಿಕವಾಗಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.  ಆನಂತರ, ಪೆವಿಲಿಯನ್‌ಗೆ ಹಿಂದಿರುಗುವ ಸರದಿ ಮೆಕ್‌ಲೀನ್ ಅವರದ್ದಾಯಿತು. ಇನ್ನು, ಟೇಲರ್ ಅವರ ನಂತರ ಬ್ಯಾಟಿಂಗ್‌ಗೆ ಇಳಿದಿದ್ದ ಕಿಶೋನಾ ಎ. ನೈಟ್ ಅವರು ವೈಯಕ್ತಿಕವಾಗಿ 21 ರನ್ ಗಳಿಸಿ, ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ಇದು ವಿಂಡೀಸ್‌ಗೆ ಮತ್ತೊಂದು ಶಾಕ್ ನೀಡಿತು. ಆರಂಭಿಕರು ಹೀಗೆ ವೈಫಲ್ಯಕ್ಕೊಳಗಾದರೂ, ಮಧ್ಯಮ ಕ್ರಮಾಂಕದ ಆ್ಯಂಗುಲಿರಾ ಹಾಗೂ ಡಾಟಿನ್ ಇಬ್ಬರೂ ಕುಸಿತದಿಂದ ತಂಡವನ್ನು ಪಾರು ಮಾಡಲು ಪ್ರಯತ್ನಪಟ್ಟರು.
ಆದರೆ, ಅದು ಕೈಗೂಡಲಿಲ್ಲ. 4ನೇ ವಿಕೆಟ್‌ಗೆ ಈ ಇಬ್ಬರೂ ನೀಡಿದ 31 ರನ್‌ಗಳ ಜೊತೆಯಾಟ ವಿಂಡೀಸ್ ಇನಿಂಗ್ಸ್‌ನ ಅತಿದೊಡ್ಡ ಜೊತೆಯಾಟವಾಗಿ ಹೊರಹೊಮ್ಮಿತು. 27ನೇ ಓವರ್‌ನಲ್ಲಿ ಆ್ಯಂಗುಲಿರಾ ವಿಕೆಟ್ ಬೀಳುತ್ತಲೇ, ಒಂದೊಂದಾಗಿ ವಿಂಡೀಸ್ ವಿಕೆಟ್‌ಗಳು ಉರುಳುತ್ತಾ ಸಾಗಿದವು.
ಕ್ಯಾಂಪ್‌ಬೆಲ್ (11), ಡೇಲೇ (2), ಕ್ವಿಂಟೈನ್ (2), ಮಹಮ್ಮದ್ (14), ಸ್ಮಾರ್ಟ್ (0) ಎಲ್ಲರೂ ಬೇಗಬೇಗನೇ ಪೆವಿಲಿಯನ್‌ಗೆ ಹಿಂದಿರುಗಿದರು.
ಅಂತಿಮವಾಗಿ, ವಿಂಡೀಸ್ 145 ರನ್‌ಗಳಿಗೆ ಆಲೌಟ್ ಆಯಿತು.
ಬಹುಮಾನ: ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ರು. 40, 74, 277 ಬಹುಮಾನ ಪಡೆದರೆ, ರನ್ನರ್- ಅಪ್ ಆಗಿರುವ ವೆಸ್ಟ್ ಇಂಡೀಸ್ ತಂಡ ರು. 16, 29, 711 ಮೊತ್ತವನ್ನು ಗೆದ್ದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.