ಆಸೀಸ್ಗೆ ಕ್ಲಾರ್ಕ್ ಆಸರೆ

ಚೆನ್ನೈ: ನಾಯಕ ಮೈಕಲ್ ಕ್ಲಾರ್ಕ್ ಅವರ ಅಜೇಯ ಶತಕದ ನೆರವಿನಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡ, ಭಾರತದ ವಿರುದ್ಧ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ನ ಮೊದಲ ದಿನ 316 ರನ್ಗಳನ್ನು ಕಲೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸೀಸ್, ಉತ್ತಮ ಆರಂಭ ಪಡೆಯಿತಾದರೂ, ಇನಿಂಗ್ಸ್ನ ಮಧ್ಯೆ ನಿರಂತರವಾಗಿ ವಿಕೆಟ್ಗಳನ್ನು ಕಳೆದುಕೊಂಡಿದ್ದರ ಫಲವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಈ ಗಂಡಾಂತರದ ಪರಿಸ್ಥಿತಿಯನ್ನು ಪಾರು ಮಾಡಿದ ನಾಯಕ ಕ್ಲಾರ್ಕ್, ತಮ್ಮ ಶತಕದ ಮೂಲಕ ತಂಡ ದಿನದ ಗೌರವ ಮೊತ್ತ ಪಡೆಯುವಲ್ಲಿ ನೆರವಾದರು.
ಆಸೀಸ್ ಪರವಾಗಿ ಕೋವನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಉತ್ತಮ ಆಟ ಪ್ರದರ್ಶಿಸಿದರು. ಕೋವನ್ ಅವರೊಂದಿಗೆ ಮೊದಲ ವಿಕೆಟ್ಗೆ 64 ರನ್ ಸೇರಿಸಿದ ಅವರು, ಉತ್ತಮ ಫುಟ್ವರ್ಕ್ಗಳ ಸಹಾಯದಿಂದ ಭಾರತೀಯ ಬೌಲರ್ಗಳನ್ನು ದಂಡಿಸಿದರು. ಹರ್ಭಜನ್ ಸಿಂಗ್ ಹಾಗೂ ಅಶ್ವಿನ್ ಅವರನ್ನೂ ದಂಡಿಸಿದ ವಾರ್ನರ್, ಇನಿಂಗ್ಸ್ ಆರಂಭವಾದ ಮೊದಲ ಒಂದು ಗಂಟೆಗಳ ಕಾಲ ಬಿಡದೇ ಕಾಡಿದರು. ಏತನ್ಮಧ್ಯೆ, ವಾರ್ನರ್ ನೀಡಿದ್ದ ಕ್ಯಾಚ್ ಅನ್ನು ಫಸ್ಟ್-ಸ್ಲಿಪ್ನಲ್ಲಿದ್ದ ವೀರೇಂದ್ರ ಸೆಹ್ವಾಗ್ ಕೈಚೆಲ್ಲಿದ್ದೂ ಭಾರತಕ್ಕೆ ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿತು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡ ವಾರ್ನರ್, ಅರ್ಧ ಶತಕ ಪೂರೈಸಿದರು.
ಆದರೆ, ಈ ಹಂತದಲ್ಲಿ ಭಾರತಕ್ಕೆ ನೆರವಾಗಿದ್ದು ಸ್ಪಿನ್ನರ್ ಅಶ್ವಿನ್. ಇನಿಂಗ್ಸ್ನ 15ನೇ ಓವರ್ನಲ್ಲಿ ಆರಂಭಿಕ ಕೋವನ್ ಅವರನ್ನು ಸ್ಟಂಪ್ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಅಶ್ವಿನ್, ಕೋವನ್ ನಂತರ ಕ್ರೀಸ್ಗೆ ಬಂದಿದ್ದ ಹ್ಯೂಸ್ ಅವರನ್ನು ಕ್ಲೀನ್ಬೌಲ್ಡ್ ಮಾಡಿ ಆಚೆ ಅಟ್ಟಿದರು. ಹೀಗಾಗಿ, ಆಸ್ಟ್ರೇಲಿಯಾ ತಂಡ ಮಧ್ಯಾಹ್ನ ಭೋಜನದ ಹೊತ್ತಿಗೆ 126 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಭೋಜನದ ನಂತರದ ಒಂದು ಗಂಟೆಯ ಆಟ, ಭಾರತದ ಪಾಲಿಗೆ 'ಮ್ಯಾಜಿಕಲ್' ಆಗಿ ಪರಿಣಮಿಸಿತು. ಅಶ್ವಿನ್ ಅವರು ತಮ್ಮ ಮೊನಚು ದಾಳಿಯಿಂದಾಗಿ ವ್ಯಾಟ್ಸನ್, ವಾರ್ನರ್ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ಗಳನ್ನು ಕೆಡವಿದರು.
ಹೀಗೆ, 153 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸೀಸ್ಗೆ ಆಸರೆಯಾಗಿ ನಿಂತಿದ್ದು ನಾಯಕ ಕ್ಲಾರ್ಕ್. ದುಸ್ಥಿತಿಗೆ ತಲುಪಿದ್ದ ಆಸೀಸ್ ಇನಿಂಗ್ಸ್ ಅನ್ನು ಮೇಲೆತ್ತಲು ಪ್ರಯತ್ನಿಸಿದ ಕ್ಲಾರ್ಕ್, ತಾಳ್ಮೆ ಹಾಗೂ ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿ, ತಂಡವನ್ನು ಕುಸಿತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಅವರ ಫುಟ್ವರ್ಕ್ ಹಾಗೂ ಬ್ಯಾಟ್ ಬೀಸುವ ಶೈಲಿಯನ್ನು ಗಮನಿಸಿದರೆ, ಅವರು ಗಟ್ಟಿಯಾಗಿ ನಿಂತು ಆಡುವ ಅಚಲ ನಿರ್ಧಾರದೊಂದಿಗೆ ಕ್ರೀಸ್ನೊಳಕ್ಕೆ ಕಾಲಿಟ್ಟಂತೆ ಭಾಸವಾಗುತ್ತಿತ್ತು. ತಾವು ಮಾಡಿದ 30 ಓವರ್ಗಳಲ್ಲಿ 88 ರನ್ ನೀಡಿ, 6 ವಿಕೆಟ್ಗಳನ್ನು ಕಬಳಿಸಿದ ಅಶ್ವಿನ್ ಅವರಿಗೂ ಕ್ಲಾರ್ಕ್ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅದೊಮ್ಮೆ, ವೈಯಕ್ತಿಕವಾಗಿ 39 ರನ್ ಗಳಿಸಿದ್ದ ಕ್ಲಾರ್ಕ್, ಶಾಟ್ ಲೆಗ್ನಲ್ಲಿದ್ದ ಚೇತೇಶ್ವರ ಪೂಜಾರ ಅವರಿಗೆ ಕ್ಯಾಚ್ ನೀಡಿದ್ದರು. ಬ್ಯಾಟ್ ಹಾಗೂ ಪ್ಯಾಡ್ಗಳಿಗೆ ಸವರಿಕೊಂಡು ಬಂದಿದ್ದ ಚೆಂಡನ್ನು ಹಿಡಿಯುವಲ್ಲಿ ಚೇತೇಶ್ವರ ಪೂಜಾರ ಯಶಸ್ವಿಯಾಗಿದ್ದರು. ಆದರೆ, ಅಂಪೈರ್ ಕುಮಾರ ಧರ್ಮಸೇನಾ ಅವರು ಭಾರತೀಯರ ಕ್ಯಾಚ್ ಅಹವಾಲನ್ನು ಒಪ್ಪಿಕೊಳ್ಳಲಿಲ್ಲ. ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್ಎಸ್) ಇಲ್ಲದಿರುವುದು, ಕ್ಲಾರ್ಕ್ಗೆ ವರದಾನವಾಯಿತು. ಟೆಲಿವಿಷನ್ ರಿಪ್ಲೇಗಳಲ್ಲಿ ಕ್ಲಾರ್ಕ್ ಔಟಾಗಿರುವುದು ಸ್ಪಷ್ಟವಾಗಿತ್ತು.
ಈ ಜೀವದಾನ ಪಡೆದ ನಂತರ, ಕ್ಲಾರ್ಕ್ ಹಿಂದಿರುಗಿ ನೋಡಲಿಲ್ಲ. ಉತ್ತಮ ಬ್ಯಾಟಿಂಗ್ನಿಂದಾಗಿ ಆಸೀಸ್ ಇನಿಂಗ್ಸ್ ಮೇಲೆತ್ತುವ ಕಾಯಕದಲ್ಲಿ ನಿರತರಾದರು. ವೈಯಕ್ತಿಕವಾಗಿ 11 ರನ್ ಗಳಿಸಿದ್ದಾಗ, ಕ್ಲಾರ್ಕ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 7000 ರನ್ ಗಡಿ ದಾಟಿದ ಸಾಧನೆ ಮಾಡಿದರು.
ಕ್ಲಾರ್ಕ್ ಅವರ ಈ ಪ್ರದರ್ಶನಕ್ಕೆ ಸಾಥ್ ನೀಡಿದ್ದು ಹೆನ್ರೀಕೆಸ್. ಮ್ಯಾಥ್ಯೂ ವೇಡ್ ಔಟಾದ ಮೇಲೆ ಕ್ರೀಸ್ಗೆ ಕಾಲಿಟ್ಟಿದ್ದ ಹೆನ್ರೀಕೆಸ್ ಸಹಾ ಶತಕಾರ್ಧ ದಾಖಲಿಸಿದರು. ಈ ಜೋಡಿ, 6ನೇ ವಿಕೆಟ್ಗೆ 151 ರನ್ಗಳ ಜೊತೆಯಾಟವಾಡಿತು. ಇನಿಂಗ್ಸ್ನ 90ನೇ ಓವರ್ನಲ್ಲಿ ಅಶ್ವಿನ್ ಅವರು ಹೆನ್ರೀಕೆಸ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಮುರಿದರು. ಆಗ, ಕ್ರೀಸ್ಗೆ ಕಾಲಿಟ್ಟಿದ್ದು ಮಿಚೆಲ್ ಸ್ಟಾರ್ಕ್.
ಆದರೆ, ಈ ಜೋಡಿ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನಿಂಗ್ಸ್ನ 91ನೇ ಓವರ್ನಲ್ಲಿ ಸ್ಟಾರ್ಕ್, ಜಡೇಜಾ ಬೌಲಿಂಗ್ನಲ್ಲಿ ಔಟಾದರು. ದಿನಾಂತ್ಯಕ್ಕೆ ಕ್ಲಾರ್ಕ್ ಅವರು ಶತಕ ದಾಖಲಿಸಿ, ಅಜೇಯರಾಗಿ ಉಳಿದರು. ಅವರೊಂದಿಗೆ ಮೂರು ರನ್ ಗಳಿಸಿರುವ ಪೀಟರ್ ಸಿಡ್ಲ್ ಅವರು ಕ್ರೀಸ್ನಲ್ಲಿದ್ದರು.
ನಿರಾಸೆ ಪ್ರದರ್ಶನ: ಮೊದಲ ದಿನದಾಟದಲ್ಲಿ ಅಶ್ವಿನ್ ಹೊರತುಪಡಿಸಿದಂತೆ, ಭಾರತದ ಯಾವೊಬ್ಬ ಬೌಲರ್ಗಳೂ ಮೊನಚು ಬೌಲಿಂಗ್ ಪ್ರದರ್ಶಿಸಲಿಲ್ಲ.
ತಮ್ಮ ನೂರನೇ ಟೆಸ್ಟ್ ಆಡುತ್ತಿರುವ ಹರ್ಭಜನ್ ಸಹಾ ಯಾವುದೇ ವಿಕೆಟ್ ಗಳಿಸಲಿಲ್ಲ. ಅತ್ತ, ಹೊಸಬರಾದ ಭುವನೇಶ್ವರ್ ಕುಮಾರ್ ಸಹ ವಿಕೆಟ್ ಪಡೆಯಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


