

ಈ ಚರ್ಚೆಗಳ ಜತೆಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತ ತಂಡದ ಮುಂದಿನ ಕೋಚ್ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದ್ದು, ಕೋಚ್ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧ ಎಂದು ಗಂಗೂಲಿ ಈ ಹಿಂದೆ ತಿಳಿಸಿದ್ದರು. 2000ರಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಭಾರತ ತಂಡ ವಿದೇಶಿ ಪಿಚ್‌ಗಳಲ್ಲಿ ಸರಣಿ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತನ್ನು ಗಂಗೂಲಿ ತಮ್ಮ ಕಾಲದಲ್ಲಿ ಸುಳ್ಳು ಮಾಡಿದರು. ಕೇವಲ ಭಾರತೀಯ ಪಿಚ್‌ಗಳಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದ, ಭಾರತ ತಂಡ ಗಂಗೂಲಿ ನಾಯಕತ್ವದಲ್ಲಿ ವಿದೇಶಿ ನೆಲದಲ್ಲೂ ಗೆಲುವಿನ ರುಚಿ ಕಾಣಲಾರಂಭಿಸಿತು. ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುವ ಗಂಗೂಲಿ ತಂಡದ ಆಟಗಾರರನ್ನು ಒಟ್ಟಾಗಿ ಸೇರಿಸಿ ಉತ್ತಮ ಪ್ರದರ್ಶನ ನೀಡುವಂತೆ ಮಾಡುತ್ತಾರೆ. ಹೀಗಾಗಿ ಭಾರತ ತಂಡಕ್ಕೆ ಸೌರವ್ ಗಂಗೂಲಿ ಅವರು ಮುಂದಿನ ಕೋಚ್ ಸ್ಥಾನ ತುಂಬಬಲ್ಲ ಸಮರ್ಥ ವ್ಯಕ್ತಿ ಎಂಬುದು ಬಹಳ ಮಂದಿಯ ಅಭಿಪ್ರಾಯವಾಗಿದೆ.