ಸೂರ್ಯಂಗೂ ಚಂದ್ರಂಗೂ....

Updated on: 

ಖ್ಯಾತ ಗಾಲ್ಫ್ ಆಟಗಾರ ಆಡಮ್ ಸ್ಕಾಟ್ಸ್‌ನ ಪ್ರೇಯಸಿ ಮಾಡೆಲ್ ಆನಾ ಇವಾನಿವಿಕ್ ಅವರ ಸಂಬಂಧ ಮುರಿದುಬಿದ್ದ ಸುದ್ದಿ ಸದ್ಯಕ್ಕೆ ಬ್ರೇಕಿಂಗ್ ನ್ಯೂಸ್ ಆಗಿ ಕ್ರೀಡಾವಲಯದಲ್ಲಿ ಹೆಚ್ಚು ಹರಿದಾಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಒಟ್ಟಿಗಿದ್ದವರು ಇವರು. ಆದರೆ, ಅದೇನಾಯ್ತೋ ಗೊತ್ತಿಲ್ಲ. ಈ ವರ್ಷದ ಆರಂಭದಲ್ಲೇ ಇವರ ಜೋಡಿ ಮುರಿದುಬಿದ್ದಿದೆಯಂತೆ. ಅವರನ್ನು ಹತ್ತಿರದಿಂದ ಬಲ್ಲವರೂ ಈ ಸುದ್ದಿ ಕೇಳಿ ಆಶ್ಚರ್ಯ ಚಕಿತರಾಗಿದ್ದಾರಂತೆ. ಆನಾ ಇವಾನಿವಿಕ್ ಹಾಗೂ ಆಡಮ್ ಸ್ಕಾಟ್ ಇಬ್ಬರೂ ಕಳೆದ ವರ್ಷಾತ್ಯದ ಕ್ರಿಸ್ಮಸ್ ಸಂದರ್ಭದಲ್ಲಿ ಒಟ್ಟೊಟ್ಟಾಗಿಯೇ ಶಾಪಿಂಗ್ ಮಾಡಿದ್ದನ್ನು ನೋಡಿದವರಿದ್ದಾರೆ. ಕ್ರಿಸ್ಮಸ್ ಮುಗಿದ ಮೇಲೆ ಈ ಇಬ್ಬರೂ ವಿದೇಶ ಪ್ರವಾಸ ಕೈಗೊಂಡು ಸಖತ್ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ, ಹೊಸ ವರ್ಷದ ಸ್ವಾಗತವನ್ನೂ ಈ ಜೋಡಿ ಭರ್ಜರಿಯಾಗಿಯೇ ಆಚರಿಸಿತಂತೆ. ಆದರೆ, ಏನಾಯ್ತೋ ಏನೋ ಗೊತ್ತಿಲ್ಲ. ಅದಾಗಿ ಹದಿನೈದು ದಿನ ಕಳೆಯುವಷ್ಟರಲ್ಲೇ ಇಬ್ಬರೂ ದೂರವಾಗಿದ್ದಾರೆ. ತಮಗೆ ಸೇರಬೇಕಾದ ಬಟ್ಟೆಬರೆಯಿಂದ ಹಿಡಿದು, ಕಾರು, ಕಂಪ್ಯೂಟರ್ ಎಲ್ಲವನ್ನೂ ತೆಗೆದುಕೊಂಡು ಆನಾ ಹೊರಟೇ ಹೋಗಿದ್ದಾಳಂತೆ. ಸದ್ಯಕ್ಕೆ ಅವರ ಹತ್ತಿರದವರು, 'ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು...' ಅಂತ ಇಂಗ್ಲೀಷಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ.

ಬಿಡಲಾರೆ ನಾ ಸಿಗರೇಟು...
ಲೀವೀಸ್ ಹ್ಯಾಮಿಲ್ಟನ್ ಗೊತ್ತಲ್ವಾ ?  ಫಾರ್ಮುಲಾ ಒನ್‌ನ ಕ್ರೀಡಾಳು. ಆತನ ಪ್ರೇಯಸಿ ನಿಕೋಲ್ ಶಿವೆಂಜರ್‌ಗೆ ವಿಚಿತ್ರ ದುಶ್ಚಟ ಅಂಟಿಕೊಂಡಿದೆಯಂತೆ. ಇತ್ತೀಚೆಗೆ ಆಕೆ ಸಿಕ್ಕಾಪಟ್ಟೆ ಸಿಗರೇಟು ಸೇದುತ್ತಾಳೆ ಅಂತ ಸ್ವತಃ ಹ್ಯಾಮಿಲ್ಟನ್ ತನ್ನ ಆಪ್ತ ಸ್ನೇಹಿತರ ಬಳಿ ಅಳಲು ತೋಡಿಕೊಂಡಿದ್ದಾನೆ ಎಂದು ಗುಸುಗುಸು ಹಬ್ಬಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅದೆಲ್ಲಾ ಕಾಮನ್ ಎಂದೆಲ್ಲಾ ಹೇಳಬಹುದಾದರೂ, ನಿಕೋಲ್ ಹಾಗಿರಲಿಲ್ಲ. ಆಕೆ ಬದುಕು ಯಾವುದೇ ದುಶ್ಚಟಗಳಿಗೆ ಒಳಗಾಗಿರಲಿಲ್ಲ. ಹಾಗಾಗಿಯೇ, ಆಕೆಯನ್ನು ಲೀವೀಸ್ ಮೆಚ್ಚಿಕೊಂಡಿದ್ದಂತೆ. ಆದರೆ, ವರ್ಷಗಳ ತರುವಾಯ ಅದು ಉಲ್ಟಾ ಆಗಿದೆ. ಯಾವುದೋ ಫ್ಯಾಷನ್ ನಿಯತಕಾಲಿಕೆಯೊಂದರ ಮುಖಪುಟ ಫೋಟೋಗಾಗಿ ಪೋಸು ನೀಡುವಾಗ ಸಿಗರೇಟ್ ಹಿಡಿದ್ದಳಂತೆ ನಿಕೋಲ್. ಈಗ ಅದು ಆಕೆಯ ಕೈಗೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದೆ ಅಲ್ಲದೇ, ಆಕೆಯ ಕೈ ಹಿಡಿದಿದ್ದ ಪತಿಯ ಮನಸ್ಸನ್ನು ಸುಟ್ಟಿದೆ. ಆತ, ನಿಂಗ್ಯಾಕೆ ಸಿಗರೇಟ್ ಸೇದೋದು ಬಿಟ್ಬಿಡು ಎಂದೆಲ್ಲಾ ಬಗೆಬಗೆಯಾಗಿ ಹೇಳಿಕೊಂಡರೂ ಆಕೆ ಕೇಳ್ತಾ ಇಲ್ವಂತೆ. ಇಂಥಾ ಸಂದರ್ಭದಲ್ಲಿ ನಮ್ಮ ಲಕ್ಷ್ಣಣರಾಯರ 'ಬಿಡಲಾರೆ ನಾ ಸಿಗರೇಟು... ಹುಡುಗಿ(ಹುಡುಗ) ನಿನ್ನಂತೆಯೇ ಅದು ಥೇಟು' ಎಂಬ ಹಾಡನ್ನು ಯಾರಾದರೂ ಆಕೆಯ ಕೇಳಿಸಿ, ಅದರ ಅರ್ಥ ತಿಳಿಸಬೇಕಾಗಿ ವಿನಂತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com