

ರಾಂಚಿ: ರಾಂಚಿಯ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 155 ರನ್‌ಗಳಿಗೆ ಆಲೌಟ್ ಆಗಿದೆ.
3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಆಂಗ್ಲ ಬ್ಯಾಟ್ಸಮನ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡದ ದಾಂಡಿಗರು ಭಾರತದ ಸ್ಪಿನ್ ದಾಳಿಯ ಎದುರು ಮಂಕಾಗಿದ್ದರು. ಪಂದ್ಯದ ಆರಂಭದಿಂದಲೂ ಇಂಗ್ಲೆಂಡ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋದಂತಿತ್ತು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ನಿಧಾನವಾಗಿ ರನ್‌ಗಳನ್ನು ಕಲೆಹಾಕುತ್ತಿದ್ದರು. ಈ ಹಂತದಲ್ಲಿ ದಾಳಿಗಿಳಿದ ಭಾರತದ ವೇಗಿ ಶಮಿ ಅಹಮದ್ ಅವರು 7 ರನ್‌ಗಳಿಸಿ ಆಟವಾಡುತ್ತಿದ್ದ ಕುಕ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಕುಕ್ ಔಟಾದಾಗ ಇಂಗ್ಲೆಂಡ್ ತಂಡದ ಮೊತ್ತ 24ರನ್‌ಗಳಾಗಿತ್ತು.
ನಂತರ ಬಂದ ಕೆವಿನ್ ಪೀಟರ್‌ಸೆನ್ ಮತ್ತು ಆರಂಭಿಕ ಆಟಗಾರ ಇಯಾನ್ ಬೆಲ್ ಜೋಡಿ ಭಾರತದ ಬೌಲರ್‌ಗಳನ್ನು ಕಾಡಿದರು. ಮಾರಕವಾಗಿ ಪರಿಣಮಿಸುತ್ತಿದ್ದ ಇಂಗ್ಲೆಂಡ್ ತಂಡ ಬ್ಯಾಟ್ಸಮನ್ ಪೀಟರ್‌ಸೆನ್ ಅವರು ಇಶಾಂತ್ ಶರ್ಮಾ ಎಸೆದ ಮಾರಕ ಎಸೆತವನ್ನು ಕೆಣಕಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು. ಪೀಟರ್‌ಸೆನ್ ಹಿಂದೆಯೇ ಆಕರ್ಷಕವಾಗಿ ಆಡುತ್ತಿದ್ದ ಇಯಾನ್‌ಬೆಲ್ ಸಹ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅನಂತರ ಬಂದ ಇಂಗ್ಲೆಂಡ್ ತಂಡದ ಯಾವೊಬ್ಬ ಬ್ಯಾಟ್ಸಮನ್ ಕೂಡ ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಲ್ಲುವ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 155ರನ್‌ಗಳಿಸಿ, ಭಾರತಕ್ಕೆ ಗೆಲ್ಲಲು 156ರನ್‌ಗಳ ಸಾಧಾರಣ ಗುರಿ ನೀಡಿದೆ.
ಭಾರತದ ಪರ ರವೀಂದ್ರ ಜಡೇಜಾ 19ರನ್ ನೀಡಿ 3 ವಿಕೆಟ್‌ಗಳಿಸಿದರು. ಉಳಿದಂತೆ ಅಶ್ವಿನ್ 2 ವಿಕೆಟ್, ಇಶಾಂತ್ ಶರ್ಮಾ 2ವಿಕೆಟ್, ಭುವನೇಶ್ವರ್ ಕುಮಾರ್, ಶಮಿ ಅಹ್ಮದ್, ಸುರೇಶ್ ರೈನಾ ತಲಾ 1 ವಿಕೆಟ್ ಪಡೆದರು.