ಮೆಲ್ಬರ್ನ್: ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೋಮವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮಹೇಶ್ ಭೂಪತಿ ಹಾಗೂ ಡೇನಿಯಲ್ ನೆಸ್ಟರ್ ಜೋಡಿ, ಸೈಮನ್ ಬೊಲೇಲಿ ಹಾಗೂ ಫ್ಯಾಬಿಯೋ ಫೋಗ್ನಿನಿ ವಿರುದ್ಧ ಸೋಲು ಕಂಡು ಪಂದ್ಯಾವಳಿಯಿಂದ ಆಚೆ ನಡೆಯಿತು.
ವಿಶ್ವದ ಐದನೇ ಶ್ರೇಯಾಂಕದಲ್ಲಿರುವ ಮಹೇಶ್ ಭೂಪತಿ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ ಜೋಡಿ, ಇಟಲಿಯ ಜೋಡಿಯಾದ ಸೈಮನ್ ಬೊಲೇಲಿ ಹಾಗೂ ಫ್ಯಾಬಿಯೋ ವಿರುದ್ಧ 3-6, 6-4, 3-6 ಅಂತರದಲ್ಲಿ ಪರಾಭವಗೊಂಡಿತು.
ಸಾನಿಯಾ - ಬಾಬ್‌ಗೆ ಗೆಲುವು: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತೀಯರಿಗೆ ನಿರಾಸೆಯಾಗಿದ್ದರೂ, ಮಿಶ್ರ ಡಬಲ್ಸ್‌ನಲ್ಲಿ ಭಾರತೀಯ ಕನಸು ಜೀವಂತವಾಗಿದೆ. ಸಾನಿಯಾ ಮಿರ್ಜಾ ಹಾಗೂ ಅಮೆರಿಕಾದ ಬಾಬ್ ರ್ಯಾಡಿಕ್ ಜೋಡಿ ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟಿದೆ.
ಅಲ್ಲದೇ, ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ತೈಪೈನ ಸು-ವೆಯ್ ಹ್ಸಿಯ್ ಜೋಡಿ ಸಹ ಎಂಟರಘಟ್ಟಕ್ಕೆ ಕಾಲಿಟ್ಟಿದೆ.
ಸೋಮವಾರ ನಡೆದ ಮಿಶ್ರ ಡಬಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಜೋಡಿಯಾದ ಅಬೈಗೇಲ್ ಸ್ಪಿಯರ್ಸ್ ಹಾಗೂ ಸ್ಕಾಟ್ ಲಿಪ್ಸ್‌ಕಿ ಜೋಡಿಯನ್ನು ಸಾನಿಯಾ-ಬಾಬ್ ಜೋಡಿ 4-6, 6-1, 10-4 ಅಂತರದಲ್ಲಿ ಸೋಲಿಸಿ ಎಂಟರ ಘಟ್ಟಕ್ಕೆ ಕಾಲಿಟ್ಟಿತು.
ಬೋಪಣ್ಣ ಜೋಡಿಗೆ ಗೆಲುವು: ಅತ್ತ, ಪ್ರೀ ಕ್ವಾರ್ಟರ್ ಫೈನಲ್‌ನ ಮತ್ತೊಂದು ಪಂದ್ಯದಲ್ಲಿ ಬೋಪಣ್ಣ ಹಾಗೂ ಸು- ವೆಯ್ ಜೋಡಿ, ಸ್ಲೋವಾಕಿಯಾದ ಡೇನಿಯಲ್ ಹುಂಟುಚೋವಾ ಹಾಗೂ ಇಟಲಿಯ ಫ್ಯಾಬಿಯೋ ಫೋಗಿನಿ ಜೋಡಿಯನ್ನು 6-1, 7-5 ಅಂತರದಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟಿದೆ.