ಮೆಲ್ಬರ್ನ್: ಖ್ಯಾತ ಟೆನಿಸ್ ತಾರೆ ಮಾರಿಯಾ ಶರಪೊವಾ ಅವರು ಆಸ್ಟ್ರೇಲಿಯನ್ ಓಪನ್ನ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ಅವರು ಮಂಗಳವಾರ ನಡೆದ ಪಂದ್ಯದಲ್ಲಿ ರಷ್ಯಾದ ಎಕಾಟೇರಿಯಾ ಮಕಾರೋವಾ ಅವರ ವಿರುದ್ಧ 6-2, 6-2 ಅಂತರದಲ್ಲಿ ಸೋಲಿಸಿ, ಸೆಮಿಫೈನಲ್ಗೆ ಲಗ್ಗೆಯಿಟ್ಟರು.
ಮೊದಲ ಸೆಟ್ನ ಆರಂಭದಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಶರಪೊವಾ ಅವರು, ಮಿಂಚಿನ ಆಟ ಪ್ರದರ್ಶಿಸಿದರು. ಅತ್ತ, ಮಕಾರೋವಾ ಅವರೂ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅವರೂ ಶರಪೊವಾ ಅವರಿಗೆ ಅಲ್ಲಲ್ಲಿ ತಿರುಗೇಟು ನೀಡಿದರು. ಆದರೆ, ಅವರ ಆಟ ಶರಪೊವಾ ಅವರ ಆಟದಷ್ಟು ಮೊನಚಾಗಿರಲಿಲ್ಲ. ಅಂತಿಮವಾಗಿ ಮಕಾರೋವಾ ಅವರು ಶರಪೊವಾ ವಿರುದ್ಧ 6-2 ಅಂತರದಲ್ಲಿ ಸೋತರು.
ಇನ್ನು, ದ್ವಿತೀಯ ಸೆಟ್ನಲ್ಲಿ ಶರಪೊವಾ ಅವರದ್ದೇ ಕೈ ಮೇಲಾಯಿತು. ಪ್ರತಿ ಹಂತದಲ್ಲೂ ಮಕಾರೋವಾ ಅವರಿಗೆ ಸವಾಲಾಗಿ ಪರಿಣಮಿಸಿದ ಶರಪೊವಾ, ತಮ್ಮ ಎಂದಿನ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಅತ್ತ ಮಕಾರೋವಾ ಅವರ ಕಡೆಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಕೊನೆಗೆ, ಈ ಸೆಟ್ನಲ್ಲಿ ಶರಪೊವಾ ಬೇಗನೇ ಜಯ ಸಾಧಿಸಿದರು.
ಸೆಮೀಸ್ನಲ್ಲಿ ಲೀ ಎದುರಾಳಿ: ಸೆಮಿಫೈನಲ್ನಲ್ಲಿ ಮಾರಿಯಾ ಶರಪೊವಾ ಅವರಿಗೆ ಚೀನಾದ ಲೀ ಅವರು ಎದುರಾಳಿಯಾಗಲಿದ್ದಾರೆ. ಮಂಗಳವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಅಗ್ನಿಸ್ಕಾ ರಾಡ್ವಾನ್ಸ್ಕಾ ಅವರನ್ನು ಸೋಲಿಸಿ, ಸೆಮಿಫೈನಲ್ಗೆ ಕಾಲಿಟ್ಟಿದ್ದಾರೆ.