

ದುಬೈ: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಏಕದಿನ ರ್ಯಾಕಿಂಗ್ನಲ್ಲಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ರೈನಾ ಅವರ ವೃತ್ತಿಜೀವನದಲ್ಲೇ ಶ್ರೇಷ್ಠ ಸಾಧನೆಯಾಗಿದೆ.
ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸುರೇಶ್ ರೈನಾ, 92.33 ಸರಾಸರಿಯೊಂದಿಗೆ 277 ರನ್ ಗಳಿಸುವ ಮೂಲಕ 669 ರೇಟಿಂಗ್ ಪಾಯಿಂಟ್ಗಳೊಂದಿಗೆ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಭಾಗವಹಿಸುವ ಮೂಲಕ 87 ರನ್ ಗಳಿಸಿದ ರೋಹಿತ್ ಶರ್ಮಾ 2 ಸ್ಥಾನ ಬಡ್ತಿ ಪಡೆದಿದ್ದು, 54ನೇ ಸ್ಥಾನದಲ್ಲಿದ್ದಾರೆ. ಇನ್ನು ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಅವರು 1 ಸ್ಥಾನ ಬಡ್ತಿ ಪಡೆದಿದ್ದು ಟಾಪ್ 10 ಪಟ್ಟಿಯಲ್ಲಿ 7ನೇ ಸ್ತಾನದಲ್ಲಿದ್ದಾರೆ. ಭಾರತದ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಹಷೀಂ ಆಮ್ಲಾ ಅಗ್ರ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಇನ್ನೊಬ್ಬ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ 2ನೇ ಸ್ಥಾನದಲ್ಲಿದ್ದಾರೆ.
ಭಾರತದ ಬೌಲರ್ಗಳಲ್ಲಿ 17 ಸ್ಥಾನ ಬಡ್ತಿ ಪಡೆದಿರುವ ಇಶಾಂತ್ ಶರ್ಮಾ 50ನೇ ಸ್ಥಾನದಲ್ಲಿದ್ದರೆ, ಭುವನೇಶ್ವರ ಕುಮಾರ್ 31 ಸ್ಥಾನ ಬಡ್ತಿ ಪಡೆದು 73ನೇ ಸ್ಥಾನದಲ್ಲಿದ್ದಾರೆ.