ಕಟಕ್: ನಯಿನ್ ಅಬಿದಿ ಹಾಗೂ ಬಿಸ್ಮಾ ಮಾರೂಫ್ ಇಬ್ಬರ ಶತಕಾರ್ಧಗಳಿಂದಾಗಿ ಮಂಗಳವಾರ ನಡೆದ ಒಡಿಶಾ ಇಲೆವೆನ್ ವಿರುದ್ಧ ಮಹಿಳಾ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡ 95 ರನ್‌ಗಳ ದೊಡ್ಡ ಅಂತರದ ಗೆಲುವು ಪಡೆಯಿತು.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, 48.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, 240 ರನ್ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಒಡಿಶಾ ಇಲೆವೆನ್ ತಂಡ, 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 145 ರನ್ ಮಾತ್ರ ಗಳಿಸಿತು. ಇದರಿಂದಾಗಿ, ಪಾಕಿಸ್ತಾನ ಈ ಪಂದ್ಯದಲ್ಲಿ 95 ರನ್‌ಗಳ ದೊಡ್ಡ ಅಂತರದ ಗೆಲುವು ದಾಖಲಿಸಿದೆ.
ಉತ್ತಮ ಮೊತ್ತ: ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕದ ನಯಿನ್ ಅಬಿದಿ (73) ಹಾಗೂ ಬಿಸ್ಮಾ ಮಾರೂಫ್ (76) ನೆರವಾದರು. ಇವರ ಉತ್ತಮ ಪ್ರದರ್ಶನದಿಂದಾಗಿ ಪಾಕಿಸ್ತಾನ 240 ರನ್‌ಗಳ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.
ಕುಸಿದ ಒಡಿಶಾ: ತನ್ನ ಇನಿಂಗ್ಸ್‌ನಲ್ಲಿ 240ರ ಮೊತ್ತವನ್ನು ಪೇರಿಸಿದ್ದ ಪಾಕಿಸ್ತಾನ, ಬೌಲಿಂಗ್‌ನಲ್ಲೂ ಒಡಿಶಾಗೆ ಸವಾಲೆಸೆಯಿತು. ಅಸ್ಮಾವಿಯಾ ಇಕ್ಬಾಲ್ ಅವರು ಆರಂಭಿಕರಾದ ಮಾಧುರಿ ಮೆಹ್ತಾ ಹಾಗೂ ಮಧುಸ್ಮಿತ ಬೆಹೆರಾ ಅವರೂ ಸೇರಿದಂತೆ, ಮಧ್ಯಮ ಕ್ರಮಾಂಕದ ಪ್ರಗ್ಯಾನ್ ಮೊಹಾಂತಿ ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಅಸ್ಮಾವಿಯಾ ಅವರ ದಾಳಿಗೆ ಕೈ ಜೋಡಿಸಿದ, ಸಾದಿಯಾ ಯೂಸುಫ್ ಹಾಗೂ ಸಾನಾ ಮಿರ್ ಇಬ್ಬರೂ ತಲಾ ಎರಡು ವಿಕೆಟ್ ಕಬಳಿಸಿ, ಒಡಿಶಾದ ಗೆಲುವಿನ ಹಾದಿ ತಪ್ಪಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 240 (48.4 ಓವರ್)
ಬಿಸ್ಮಾ ಮಾರೂಫ್ 76 (92), ನಯಿನ್ ಅಬಿದಿ 73 (94)
ಬೌಲಿಂಗ್: ಸುಜಾತಾ ಮಲ್ಲಿಕ್ 43/3, ಗಂಗೋತ್ರಾ ಬೆಹರಾ 18/3
ಒಡಿಶಾ: 145/8 (50 ಓವರ್)
ಮಧುಸ್ಮಿತಾ ಬೆಹರಾ 53 (111), ಗಂಗೋತ್ರಾ ಬೆಹರಾ 31 (43)
ಬೌಲಿಂಗ್: ಅಸ್ಮಾವಿನಾ ಇಕ್ಬಾಲ್ 20/3, ಸಾದಿಯಾ ಯೂಸುಫ್ 9/2