ತೆಲುಗು ಸಿನಿಮಾದಲ್ಲಿ ಜ್ವಾಲಾ ಐಟಂ ಸಾಂಗ್!

ತೆಲುಗು ಸಿನಿಮಾದಲ್ಲಿ ಜ್ವಾಲಾ ಐಟಂ ಸಾಂಗ್!
Updated on: 

ನವದೆಹಲಿ: ಬ್ಯಾಡ್ಮಿಂಟನ್‌ನಲ್ಲಿ ಯುವ ಹೃದಯಗಳಿಗೆ ಹೇಳದೇ ಕೇಳದೇ ಲಗ್ಗೆಯಿಟ್ಟಿದ್ದ ಜ್ವಾಲಾ ಗುಟ್ಟಾ ಈಗ ಮತ್ತೊಂದು ರೀತಿ ಸುದ್ದಿ ಮಾಡುವ ಸನ್ನಾಹದಲ್ಲಿದ್ದಾರೆ.
ನೇರವಾಗಿ ಮಾತನಾಡುವ ಅವರು ಆಗಾಗ ದೇಶದ ಕ್ರೀಡಾ ಸಮಸ್ಯೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿ ಮಾಡುತ್ತಿದ್ದ ಜ್ವಾಲಾ, ಬ್ಯಾಡ್ಮಿಂಟನ್ ಅಂಗಣದ ಹೊರಗೆ ಈ ರೀತಿಯಲ್ಲೂ ಸುದ್ದಿ ಮಾಡಿದ್ದುಂಟು. ಆದರೆ, ಇದೀಗ ಚಲನ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ, ಅವರು ಮತ್ತೊಂದು ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದಾಗಿದ್ದಾರೆ.  'ಗುಂಡೆ ಜಾರಿ ಗಲ್ಲಂಟಾಯಿಂದಿ' ಎಂಬ ತೆಲುಗು ಚಿತ್ರವೊಂದರ ಹಾಡಿಗೆ ನೃತ್ಯ ಮಾಡಲು ಜ್ವಾಲಾ ಗುಟ್ಟಾ ಒಪ್ಪಿಗೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಈ ನೃತ್ಯದಲ್ಲಿ ನಟ ನಿತಿನ್ ಅವರು ಜ್ವಾಲಾ ಅವರೊಂದಿಗೆ ಕುಣಿಯಲಿದ್ದಾರೆ.
ಈ ಸುದ್ದಿಯನ್ನು ಜ್ವಾಲಾ ಸಹ ಒಪ್ಪಿಕೊಂಡಿದ್ದು, ತಾವು ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜ ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ. 'ನಿತಿನ್ ಹಾಗೂ ಚಿತ್ರದ ನಿರ್ಮಾಪಕ ಇಬ್ಬರೂ ನನ್ನ ಸ್ನೇಹಿತರು. ಇತ್ತೀಚೆಗೆ ಇವರು ಈ ಚಿತ್ರದಲ್ಲಿನ ಹಾಡೊಂದರ ಬಗ್ಗೆ ನನ್ನಲ್ಲಿ ಚರ್ಚಿಸಿದ್ದರು ಹಾಗೂ ಆ ಹಾಡಿಗೆ ನಾನೇ ನೃತ್ಯ ಮಾಡಬೇಕೆಂದು ಕೇಳಿಕೊಂಡಿದ್ದರು. ಮೊದಲು ಅವರು ಕೇಳಿದಾಗ, ಅವರು ತಮಾಷೆ ಮಾಡುತ್ತಿರಬೇಕೆಂದು ಅನ್ನಿಸಿತ್ತು. ಆದರೆ, ಅವರು ನಿಜವಾಗಿಯೂ ಕೇಳಿದ್ದರು. ನಂತರ, ನಾನು ಮೊದಲು ಹಾಡು ಕೇಳಿ ನಿರ್ಧರಿಸುವುದಾಗಿ ಹೇಳಿದೆ. ಹಾಡು ಕೇಳಿದೆ. ಇಷ್ಟವಾಯಿತು. ಹಾಗಾಗಿ, ನಾನು ಚಿತ್ರದಲ್ಲಿ ನೃತ್ಯ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ' ಎಂದು ತಿಳಿಸಿದರು.  
ಈ ಹಿಂದೆ, ಕಾಮನ್ವೆಲ್ತ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಜ್ವಾಲಾ, ಈಗ ಮತ್ತೇನು ಮೋಡಿ ಮಾಡುತ್ತಾರೋ ಕಾದು ನೋಡಬೇಕಿದೆ. ತಮ್ಮ ಹೆಸರಿನಲ್ಲೇ, ಹೆಸರಿನಲ್ಲೇ 'ಜ್ವಾಲೆ' ಇಟ್ಟುಕೊಂಡಿರುವ ಗುಟ್ಟಾ ಈಗ ಬ್ಯಾಡ್ಮಿಂಟನ್ ಹೊರಗಡೆ ಅದ್ಯಾವ ರೀತಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲಕಾರಿ ವಿಷಯವಾಗಿದೆ. ಅಂದಹಾಗೆ, ಜ್ವಾಲಾ ಅವರು ನೃತ್ಯ ಮಾಡುತ್ತಿರುವ ಚಿತ್ರವನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com