

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಹಿರಿಯರು ಮೆಚ್ಚುವಂತಹ ಸಾಧನೆ ಮಾಡುತ್ತಿರುವ ಮಲ್ಲಿಕಾಳದು ವಾಲಿಬಾಲ್ನಲ್ಲಿ ಮಿಂಚಿನಾಟ. ವಾಲಿಬಾಲ್ ಪ್ರತಿಸ್ಪರ್ಧಿಗಳ ಅಂಕಣದಿಂದ ಪುಟಿದು ಬರುತ್ತಿದ್ದರೆ ಹೊಂಚು ಹಾಕಿ ಬಾಲ್ ಹೊಡೆದು ಎದುರಿನವರು ನಿಬ್ಬೆರಗಾಗುವಂತಹ ಕುಶಲತೆಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ.
ತನಗೆ ಸಿಕ್ಕ ಅವಕಾಶಗಳನ್ನು ಸಮಯೋಚಿತವಾಗಿ ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ತಂಡವನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಮಲ್ಲಿಕಾ ಅವರ ಆಟಕ್ಕೆ ಸಾಟಿಯೇ ಇಲ್ಲ. ಮನೆಯಲ್ಲಿ ಕಡುಬಡತನ, ತನಗಾಗಿ ಅಮ್ಮ ಕಷ್ಟಪಡುತ್ತಿರುವುದು ಗೊತ್ತಿದೆ. ಈ ಎಲ್ಲ ಕಷ್ಟಗಳನ್ನು ಸಾಧನೆಯಿಂದ ಮಾತ್ರ ಅಳಿಸಿ ಹಾಕಲು ಸಾಧ್ಯ ಎಂಬ ಅಚಲ ಧೈರ್ಯವಂತೆ ಈಕೆ. ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾ ವಸತಿನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಮಲ್ಲಿಕಾ ತನ್ನ ಗುರು ಅಶೋಕ ಅವರು ಹೇಳಿಕೊಟ್ಟ ತಂತ್ರ- ಪ್ರತಿತಂತ್ರಗಳನ್ನು ಸರಿಯಾಗಿಯೇ ಬಳಸಿ ಸಾಧನೆಯ ಶಿಖರ ಏರುತ್ತಿದ್ದಾರೆ.
ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದವರಾದ ಮಲ್ಲಿಕಾ, ಚಿಕ್ಕ ವಯಸ್ಸಿನಲ್ಲಿ ತಂದೆ ಕಳೆದುಕೊಂಡರು. ತಾಯಿ ಸುಮುತಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಮಲ್ಲಿಕಾಗೆ ಅವಳಿ ತಮ್ಮಂದಿರಾದ ಅನಿಲ್- ಸುನಿಲ್, ತಂಗಿ ಸಾರಿಕಾ ಇದ್ದಾರೆ. ಇಡೀ ಕುಟುಂಬವನ್ನು ತಾಯಿಯೇ ಪೊರೆಯುತ್ತಿದ್ದು ಮುಂದೆ ನಾನು ಕೂಡ ಕುಟುಂಬವನ್ನು ನಡೆಸುವಂತಾಗಬೇಕು. ಅದಕ್ಕಾಗಿ ಈಗಿನಿಂದಲೇ ಕಷ್ಟಪಟ್ಟು ಸಾಧನೆ ಮಾಡಿದರೆ ಫಲ ಲಭಿಸುತ್ತದೆ ಎಂಬ ಏಕೈಕ ಮಂತ್ರದಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಸದ್ಯ ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಓದುತ್ತಿರುವ ಇವರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ವಾಲಿಬಾಲ್ ತರಬೇತಿ ಪಡೆಯುತ್ತಿದ್ದಾರೆ. 2009ರಲ್ಲಿ ಗೋವಾದಲ್ಲಿ ನಡೆದ ಜೂನಿಯರ್ ನ್ಯಾಷನಲ್ ಟೂರ್ನಿಯಲ್ಲಿ ಕಂಚಿನ ಪದಕ, 2010ರಲ್ಲಿ ಭುವನೇಶ್ವರದಲ್ಲಿ ನಡೆದ ಜೂನಿಯರ್ ನ್ಯಾಷನಲ್ ಟೂರ್ನಿಯಲ್ಲಿ ಬೆಳ್ಳಿ ಪದಕ, 2010ರಲ್ಲಿ ಚೆನ್ನೈನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಟೂರ್ನಿಯಲ್ಲಿ ಕಂಚಿನ ಪದಕ, ಮಂಗಳೂರಿನಲ್ಲಿ ನಡೆದ ಪಿಯು ನ್ಯಾಷನಲ್ ಟೂರ್ನಿಯಲ್ಲಿ ಚಿನ್ನದ ಪದಕ ಪಡದೆ ಗೆಲವಿನ ನಗೆ ಬೀರಿದ್ದಾರೆ.
ಶಿಕ್ಷಣಾಭ್ಯಾಸದ ನಂತರ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ನಾನು ದುಡಿಯದಿದ್ದರೆ ಕುಟುಂಬ ಅರೆಹೊಟ್ಟೆಯಲ್ಲಿರುವುದು ಖಂಡಿತ. ಹಾಗಾಗಿ ಪದವಿ ಪೂರೈಸುತ್ತಿದ್ದಂತೆ ಸರ್ಕಾರ ಅಥವಾ ಕಂಪನಿಗಳು ಕೆಲಸ ನೀಡಿದರೆ ಶ್ರಮಪಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂಬುದು ಮಲ್ಲಿಕಾ ಶೆಟ್ಟಿ ಅವರ ಮಾತು.
= ಜೆ. ಮಹದೇವ