ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾದ ರಾಷ್ಟ್ರೀಯ ಫೆಡರೇಷನ್ ಕಪ್ ಬಾಸ್ಕೆಟ್ಬಾಲ್ ಪಂದ್ಯಾವಳಿಯ ಮೊದಲ ದಿನ ಪುರುಷರ ವಿಭಾಗದಲ್ಲಿ ಉತ್ತರಾಂಚಲದ ಒಎನ್ಜಿಸಿ ಮತ್ತು ಚೆನ್ನೈನ ಓವರ್ಸೀಸ್ ಬ್ಯಾಂಕ್ ತಂಡಗಳು ಶುಭಾರಂಭ ಮಾಡಿದವು.
ಒಎನ್ಜಿಸಿ ತಂಡ ಸಿಕಂದರ್ಬಾದ್ನ ದಕ್ಷಿಣ ರೇಲ್ವೆ ತಂಡವನ್ನು 83-56 ಅಂಕಗಳಿಂದ ಪರಾಭವಗೊಳಿಸಿತು. ಮೊದಲ ಕ್ವಾರ್ಟರ್ 21-21 ಮತ್ತು ದ್ವಿತೀಯ ಕ್ವಾರ್ಟರ್ನಲ್ಲಿ 16-18 ಅಂಕಗಳೊಂದಿಗೆ ಪಂದ್ಯ ಸಮಬಲದಲ್ಲಿ ಸಾಗಿತ್ತು. ಆದರೆ, ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್ಗಳಲ್ಲಿ 20-09, 20-08 ಪಾರಮ್ಯ ಮರೆದ ಒಎನ್ಜಿಸಿ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಪಂದ್ಯದಲ್ಲಿ ಚೆನ್ನೈನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ತಂಡ ಹರ್ಯಾಣದ ಜಿಂದ್ ಡಿಸ್ಟ್ ತಂಡವನ್ನು 96-48 ಅಂಕಗಳಿಂದ ಪರಾಭವಗೊಳಿಸಿತು. ಪಂದ್ಯದಲ್ಲಿ ಮೊದಲ ಕ್ವಾರ್ಟರ್ 28-21 ಕೊಂಚ ಪೈಪೋಟಿಂದ ಕೂಡಿತ್ತು. ಆದರೆ ನಂತರ ಮೂರು ಕ್ವಾರ್ಟರ್ಗಳಲ್ಲಿ ಚೆನ್ನೈ ಪಾರಮ್ಯ ಮೆರೆದು ಜಯ ಕಂಡುಕೊಂಡಿತು. ಇನ್ನು ಮಹಿಳೆಯರ ವಿಭಾಗದ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡ ಆಂಧ್ರಪ್ರದೇಶವನ್ನು 60-20 ಭಾರಿ ಅಂತರದಿಂದ ಸೋಲಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಚತ್ತಿಸ್ಗಡವನ್ನು 73-62 ಅಂತರಿಂದ ಸೋಲಿಸಿತು. ಮೊದಲ ಕ್ವಾರ್ಟರ್ನಲ್ಲಿ 19-17ರಿಂದ ಮುನ್ನಡೆ ಸಾಧಿಸಿದ್ದ ಚತ್ತೀಸ್ಗಡ ನಂತರ ಎರಡನೇ ಮತ್ತು 3ನೇ ಕ್ವಾರ್ಟರ್ಗಳಲ್ಲಿ 18-22, 08-21ರಿಂದ ಹಿನ್ನಡೆ ಅನುಭವಿಸಿತು. 4ನೇ ಮತ್ತು ಅಂತಿಮ ಕ್ವಾರ್ಟರ್ನಲ್ಲಿ 17-13ರಿಂದ ಕೊಂಚ ಪ್ರತಿರೋಧ ನೀಡಿತಾದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಮಹಿಳೆಯರ ವಿಭಾಗದ ದಿನದ ಮೂರನೇ ಪಂದ್ಯದಲ್ಲಿ ಕೇರಳ ತಂಡ ಕರ್ನಾಟಕವನ್ನು 85-79 ಅಂಕಗಳ ಅಂತರದಿಂದ ಸೋಲಿಸಿತು. ಪಂದ್ಯದ ಎರಡನೇ ಕ್ವಾರ್ಟರ್ನಲ್ಲಿ 18-33 ಮಾತ್ರ ಉತ್ತಮ ಹೋರಾಟ ನಡೆಸಿದ ಕರ್ನಾಟಕ ಮೊದಲ ಮತ್ತು ಕೊನೆಯ ಎರಡು ಕ್ವಾರ್ಟರ್ಗಳಲ್ಲಿ ಹಿನ್ನಡೆ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು.