

ಮುಂಬೈ: ಮಹಿಳಾ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಭಾರತ ವನಿತೆಯರ ತಂಡ ವೆಸ್ಟ್ ಇಂಡೀಸ್ನ್ನು ಎದುರಿಸಲಿದೆ. ಹೊನಲು ಬೆಳಕಿನಲ್ಲಿ ನಡೆಯಲಿರುವ ಪಂದ್ಯಾವಳಿಯ ಕೆಲ ಪಂದ್ಯಗಳು ಕಟಕ್ನಲ್ಲೂ ನಡೆಯಲಿವೆ. ಭದ್ರತೆಯ ಕಾರಣದಿಂದ ಪಾಕಿಸ್ತಾನ ಮಹಿಳೆಯರ ತಂಡದ ಪಂದ್ಯಗಳನ್ನು ಮುಂಬೈಯಿಂದ ಕಟಕ್ಗೆ ಸ್ಥಳಾಂತರಿಸಲಾಗಿದೆ.
ಎ ಗುಂಪಿನ ಪಂದ್ಯಗಳು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣಗಳಾದ ಮುಂಬೈನ ಬ್ರಬೋರ್ನ್ ಸ್ಟೇಡಿಯಂ, ಎಂಐಜಿ ಕ್ಲಬ್ನಲ್ಲಿ ನಡೆಯಲಿವೆ. ಬಿ ಗುಂಪಿನ ಪಂದ್ಯಗಳು ಕಟಕ್ನಲ್ಲಿ ನಡೆಯಲಿವೆ.
ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ಸೇರಿದಂತೆ ಪ್ರಬಲ ತಂಡಗಳು ಸೇರಿವೆ. ಕಳೆದ ಆವೃತ್ತಿಯಲ್ಲಿ 3ನೇ ಸ್ಥಾನ ಪಡೆದಿದ್ದ ಭಾರತ ವನಿತೆಯರು ಈ ಬಾರಿ, ಇನ್ನೆರಡು ಲೀಗ್ ಪಂದ್ಯಗಳಲ್ಲಿ ಫೆಬ್ರವರಿ 3ರಂದು ಇಂಗ್ಲೆಂಡ್ ವಿರುದ್ಧ ಮತ್ತು ಫೆಬ್ರವರಿ 5ರಂದು ಶ್ರೀಲಂಕಾ ವಿರುದ್ಧ ಸೆಣಸಲಿದ್ದಾರೆ.
ಮಿಥಾಲಿ ರಾಜ್ ಸೇರಿದಂತೆ, ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಪೂನಂ ರೌತ್ ಹಾಗೂ ವಿಕೆಟ್ ಕೀಪರ್ ಸುಲಕ್ಷಣ ನಾಯಕ್ ಅವರು ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಗೌಹಾರ ಸುಲ್ತಾನ್ ಮತ್ತು ನಿರಂಜನ ನಾಗರಾಜನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
'ಜೂಲನ್ ಗೋಸ್ವಾಮಿ, ಅಮಿತಾ ಮಿಶ್ರಾ, ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಂತಹ ಹಿರಿಯ ಆಟಗಾರ್ತಿಯರನ್ನು ನಾವು ಹೊಂದಿದ್ದೇವೆ.
ಕಳೆದ ವಿಶ್ವಕಪ್ನಲ್ಲಿ ಆಡಿ ಅನುಭವವಿರುವ ತಿರುಶ್ ಕಾಮಿನಿ ಮತ್ತು ಕಾರುಣಾ ಜೈನ್ ಸಹ ತಂಡದಲ್ಲಿದ್ದು ಗೆಲ್ಲುವ ವಿಶ್ವಾಸದಲ್ಲಿದ್ದೇವೆ' ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ಇನ್ನೊಂದೆಡೆ ವೆಸ್ಟ್ ಇಂಡೀಸ್ ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದ ತಂಡವಾಗಿದೆ. ಬಾರ್ಬಡೋಸ್ನ ಕ್ಯಾಶಿ ಮತ್ತು ಕಿಶೋನ್ ನೈಟ್ ಅವಳಿ ಸೋದರಿಯರನ್ನು ಒಳಗೊಂಡಿರುವುದು ಆ ತಂಡದ ವಿಶೇಷವಾಗಿದೆ. ಟ್ರಿನಿಡಾಡ್ನ ಮೆರಿಸ್ಸಾ ಅಗುಲ್ಲೇರಾ ಅವರು ವಿಂಡೀಸ್ ತಂಡದ ನಾಯಕತ್ವ ವಹಿಸಿದ್ದಾರೆ. 2012ರಲ್ಲಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಪಡೆದ ಸ್ಟ್ಯಾಫಿನೀ ಟೇಲರ್ ಅವರು ತಂಡದ ಉಪನಾಯಕರಾಗಿದ್ದಾರೆ.
ಫಾರ್ಮ್ನಲ್ಲಿರುವ ವಿಂಡೀಸ್ನ ಸ್ಪಿನ್ ಬೌಲರ್ ಅನಿಸಾ ಮೊಹ್ಮದ್ ಅವರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ. ಅಲ್ಲದೆ ಉಪಖಂಡದ ಪಿಚ್ಗಳು ಆಕೆಯ ಬೌಲಿಂಗ್ ಶೈಲಿಗೆ ಹೆಚ್ಚು ಹೊಂದಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಗೆದ್ದು ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಕಾತರದಲ್ಲಿವೆ ಉಭಯ ತಂಡಗಳು.
ಭಾರತ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್ಪ್ರೀತ್ ಕೌರ್ (ಉಪನಾಯಕಿ), ಇಕ್ತಾ ಬಿಷ್ಟ್, ಅಮಿತಾ ದಾಸ್, ಜೂಲನ್ ಗೋಸ್ವಾಮಿ, ಕರುಣಾ ಜೈನ್, ರೀಮಾ ಮಲ್ಹೋತ್ರಾ, ಮೋನಾ ಮೆಶ್ರಾಮ್, ತಿರುಶ್ ಕಾಮಿನಿ ಮುರುಗೇಶನ್, ಸುಲಕ್ಷಣ ನಾಯಕ್, ನಿರಂಜನ್ ನಾಗರಾಜನ್, ರಸ್ನಾರ್ ಪರ್ವಿನ್, ಪೂನಂ ರೌತ್, ಶುಭಾ ಲಕ್ಷ್ಮಿ ಶರ್ಮಾ, ಗೌಹಾರ್ ಸುಲ್ತಾನ್.
ವಿಂಡೀಸ್ ತಂಡ:ಮೆರಿಸ್ಸಾ ಅಗುಲ್ಲೇರಾ (ನಾಯಕಿ), ಸ್ಟ್ಯಾಫಿನೀ ಟೇಲರ್ (ಉಪನಾಯಕಿ), ಶಮೈನೆ ಕ್ಯಾಂಪ್ಬೆಲ್ಲೆ, ಶನಲ್ ಡಲೇ,ದೀಂದ್ರಾ ಡಾಟಿನ್, ಕ್ಯಾಶಿ ನೈಟ್, ಕಿಶೋನ್ ನೈಟ್, ನತಾಶಾ ಮೆಕ್ಲೀನ್, ಅನಿಶಾ ಮೊಹ್ಮದ್, ಸುಬ್ರಿನಾ ಮುನ್ರೋ, ಜೂಲಿಯಾನ ನೆರೊ, ಜೂನ್ ಓಗ್ಲೆ, ಶಖ್ವಾನಾ ಕ್ವಾಂಟಿನೆ, ಶಕೇರಾ ಸೆಲ್ಮಾನ್ ಹಾಗೂ ತಿರ್ಮನೆ ಟ್ರಾಟ್.