

ನವದೆಹಲಿ: ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ವಿರುದ್ಧ ದೇಶದ ಅಗ್ರ ಟೆನಿಸ್ ತಾರೆಗಳು ಬಂಡಾಯ ಎದ್ದಿರುವುದು ತಪ್ಪಲ್ಲ, ಎಂಬ ದಾಟಿಯಲ್ಲಿ ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮಾತನಾಡಿದ್ದಾರೆ. ಆದರೆ, ಆಟಗಾರರು ಮತ್ತು ಅಸೋಸಿಯೇಷನ್ ನಡುವಿನ ತಿಕ್ಕಾಟದಿಂದ ಟೆನಿಸ್‌ಗೆ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ.
ಭಾರತದ ಅಗ್ರ 11 ಟೆನಿಸ್ ಆಟಗಾರರು ದಕ್ಷಿಣ ಕೊರಿಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಏಷ್ಯಾ/ಓಸೇನಿಯಾ ಗುಂಪಿನ ಪಂದ್ಯಕ್ಕೆ ಎಐಟಿಎ ಅನನುಭವಿಗಳಿಂದ ಕೂಡಿದ ತಂಡವನ್ನು ಕಳುಹಿಸಿಕೊಟ್ಟಿದೆ.
'ಬಂಡಾಯ ಏಳುವುದು ಮಖ್ಯವಾದದ್ದು ಎಂದು ನಾನು ವೈಯಕ್ತಿಕವಾಗಿ ನಂಬಿಲ್ಲ. ಆದರೆ, ಸಂವಹನ ಯಾವಾಗಲೂ ಮುಕ್ತವಾಗಿರಬೇಕು. ನಮಗೆ ಎಲ್ಲಕ್ಕಿಂತ ಕ್ರೀಡೆ ಮುಖ್ಯ. ಅಸೋಸಿಯೇಷನ್ ಆಗಿರಲಿ, ಆಟಗಾರರಾಗಿರಲಿ ಅಥವಾ ಮಾಧ್ಯಮವಾಗಿರಲಿ ಕ್ರೀಡೆಯೇ ಎಲ್ಲಕ್ಕಿಂತ ಮುಖ್ಯವಲ್ಲವೇ' ಎಂದು ಹಿರಿಯ ಆಟಗಾರ ಪೇಸ್ ಅಭಿಪ್ರಾಯಪಟ್ಟಿದ್ದಾರೆ. 'ಯಾರದೇ ಜೀವನದಲ್ಲಿ ಅಗತ್ಯಗಳಿಗೆ ಹೋರಾಟ ನಡೆಸಬೇಕಾದ್ದು ಅನಿವಾರ್ಯವಾಗಿದೆ. ಆದರೆ, ಅದರಿಂದ ನಾವು ಏನನ್ನೋ ಕಳೆದುಕೊಳ್ಳಬಾರದು. ವಿವಾದವೊಂದರಿಂದ ಟೆನಿಸ್ ಅಥವಾ ದೇಶ ಬಳಲಬಾರದು' ಎಂದಿದ್ದಾರೆ.