ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಗೌರವ ತಂದುಕೊಟ್ಟ ಜುಡೋ ಅಥ್ಲೀಟ್‌ಗಳನ್ನು ಅವರ ಕೋಚ್‌ಗಳೇ ಥಳಿಸಿರುವ ಅಮಾನವೀಯ ಘಟನೆ, ಜಪಾನ್‌ನಲ್ಲಿ ನಡೆದಿರುವುದು ಬಧವಾರ ಬಹಿರಂಗವಾಗಿದೆ. ಬಾಸ್ಕೆಟ್‌ಬಾಲ್ ಆಟಗಾರನಾಗಿದ್ದ ಶಾಲಾ ವಿದ್ಯಾರ್ಥಿಯೊಬ್ಬ ಕೋಚ್ ನೀಡಿದ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದು ಇತ್ತೀಚೆಗೆ ಜಪಾನ್‌ನಲ್ಲಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿತ್ತು.
ತಂಡದ ಮುಖ್ಯ ಕೋಚ್ ನಮಗೆ ಕಳೆದ ತಿಂಗಳು ದೈಹಿಕ ಶಿಕ್ಷೆ ನೀಡಿದರು ಎಂದು 15 ಸದಸ್ಯರನ್ನೊಳಗೊಂಡ ಜುಡೋ ಆಟಗಾರ್ತಿಯರ ತಂಡ ಜಪಾನ್ ಒಲಿಂಪಿಕ್ಸ್ ಸಮಿತಿಗೆ ದೂರು ನೀಡಿದೆ.
ನಮ್ಮ ಮುಖ್ಯ ಕೋಚ್ ಆಗಿರುವ ರೂಜಿ ಸೋನಾಡಾ ಅವರು ನಮ್ಮನ್ನು ನಿತ್ಯ ನಿಂದಿಸುತ್ತಿರುತ್ತಾರೆ. ಅಲ್ಲದೆ ಕಪಾಳಕ್ಕೆ ಹೊಡೆಯುತ್ತಾರೆ. ಜಪಾನ್‌ನ ಮಾರ್ಷಿಯಲ್ ಆರ್ಟ್ ಕೆಂಡೋದಲ್ಲಿ ಬಳಸುವ ದಪ್ಪನಾದ ಕಟ್ಟಿಗೆಯನ್ನು ಬಳಸಿ ಹೊಡೆದಿದ್ದಾರೆ ಎಂದು ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಪಾನ್ ಪ್ರತಿನಿಧಿಸಿದ ಅಥ್ಲೀಟ್‌ಗಳು ಸೇರಿದ ತಂಡ ಹೇಳಿಕೊಂಡಿದೆ.
ಗಾಯಗೊಂಡ ಸಂದರ್ಭದಲ್ಲೇ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನಮಗೆ ಒತ್ತಾಯಿಸಲಾಗುತ್ತದೆ ಎಂದು ಸಹ ಕೆಲ ಅಥ್ಲೀಟ್‌ಗಳು ದೂರಿದ್ದಾರೆ.
'ಅಥ್ಲೀಟ್‌ಗಳ ದೂರನ್ನು ಪರಿಗಣಿಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಅಖಿಲ ಜಪಾನ್ ಜುಡೋ ಫೆಡರೇಷನ್‌ಗೆ (ಎಜೆಜೆಎಫ್)ಗೆ ಹೇಳಿದ್ದೇವೆ. ಒಂದು ವೇಳೆ ಅಥ್ಲೀಟ್‌ಗಳು ಮಾಡಿರುವ ಆರೋಪಗಳು ನಿಜವಾಗಿದ್ದರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಸೂಚಿಸಿದ್ದೇವೆ' ಎಂದು ಜಪಾನ್ ಒಲಿಂಪಿಕ್ಸ್ ಅಸೋಸಿಯೇಷನ್ (ಜೆಒಸಿ) ಹೇಳಿಕೊಂಡಿದೆ.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಪಾನ್ ಮಹಿಳೆಯರು ಜುಡೋ ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡು ತವರಿಗೆ ಮರಳಿದ್ದರು.
ಬಾಸ್ಕೆಟ್‌ಬಾಲ್ ಕೋಚ್ ಒಬ್ಬರು ನೀಡಿದ ಹಿಂಸೆಯನ್ನು ತಾಳಲಾರದೇ ಜಪಾನ್‌ನ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಾದ ನಂತರ ಕೋಚ್‌ಗಳು ಹಿಂಸೆ ನೀಡುತ್ತಿರುವಂತಹ ಪ್ರಕರಣಗಳು ಬಹಿರಂಗವಾಗುತ್ತಿವೆ.
ಜಪಾನ್‌ನಲ್ಲಿ ಶಿಕ್ಷಕರು ಅಥವಾ ಕೋಚ್ ತಮ್ಮ ಶಿಶ್ಯಂದಿರಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ. ಆದರೆ, ಅಂತಹ ತಪ್ಪಗಳನ್ನು ಮಾಡಿದವರಿಗೆ ಜಪಾನ್‌ನಲ್ಲಿ ಯಾವುದೇ ರೀತಿಯ ಶಿಕ್ಷೆಯನ್ನು ನಿಗದಿಪಡಿಸಿಲ್ಲ.
ಜಪಾನ್‌ನ ಕ್ರೀಡಾ ಕ್ಷೇತ್ರದಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. ತರಬೇತಿ ಪಡೆಯುತ್ತಿದ್ದ ಸುಮೋ ಕುಸ್ತಿಪಟುವೊಬ್ಬನನ್ನು ಕಟ್ಟಿ ಥಳಿಸಿದ ಹಿನ್ನೆಲೆಯಲ್ಲಿ ಮೃತಪಟ್ಟ ಘಟನೆ 2007ರಲ್ಲಿ ಜಪಾನ್‌ನಲ್ಲಿ ನಡೆದಿತ್ತು.