ಕ್ರೀಡೆ

ಕೊಬ್ಬಿದ ಸಾಧಕ ಟಾಮ್!

ಕೊಬ್ಬಿದ ಸಾಧಕ ಟಾಮ್!
Published On :

ಟಾಮ್ ಸ್ಟ್ಯಾನಿಫೋರ್ಡ್!
ಈ ಹೆಸರು ಕೇಳಿದಾಕ್ಷಣ ಆಂಗ್ಲರ ಕಿವಿಗಳು ನೆಟ್ಟಗಾಗುತ್ತವೆ. ಕಾರಣ ಆತನ ಜೀವನೋತ್ಸಾಹ. ಸಾಧನೆಯ ಬಗೆಗಿನ ಹಪಾಹಪಿ. ಬ್ರಿಟನ್ನಿನ ಪ್ರಮುಖ ಪ್ಯಾರಾಸೈಕ್ಲಿಸ್ಟ್ ಎಂದಷ್ಟೇ ಪರಿಗಣಿಸಬಹುದಾಗಿದ್ದರೆ, ಆತನಿಗೂ ಉಳಿದ ವಿಕಲಚೇತನ ಕ್ರೀಡಾಪಟುಗಳಿಗೂ ಯಾವ ವ್ಯತ್ಯಾಸವೂ ಉಳಿಯುತ್ತಿರಲಿಲ್ಲ. ಯಾಕೆಂದರೆ ಉಳಿದವರದ್ದೊಂದು ಸಮಸ್ಯೆಯಾಗಿದ್ದರೆ, ಈತನದ್ದೇ ಮತ್ತೊಂದು ತೆರನಾದ ಸಮಸ್ಯೆ. ಅದು ವೈದ್ಯಕೀಯ ಜಗತ್ತಿಗೇ ಸವಾಲೆಸೆಯುವಂಥದ್ದು,

ಆತ ಎಂಡಿಪಿ ಸಿಂಡ್ರೋಮ್ ಪೀಡಿತ!

ಇದು ಕೊಬ್ಬಿಗೆ ಸಂಬಂಧಪಟ್ಟ ಸಮಸ್ಯೆ. ಸಾಮಾನ್ಯವಾಗಿ ಈ ಸಮಸ್ಯೆ ಹೊಂದಿರುವವರು ವಿಶ್ವದಲ್ಲಿ 8 ಮಂದಿ ಅಷ್ಟೇ. ಅದರಲ್ಲಿ ಈತನೂ ಒಬ್ಬ. ಸ್ಟ್ಯಾನಿಯ ಸಮಸ್ಯೆ ಏನೆಂದು ತಿಳಿದುಕೊಳ್ಳಲಿಕ್ಕೇ ವೈದ್ಯರು ಹರಸಾಹಸಪಟ್ಟರು. ಆತನಿಗೆ ಮಾತ್ರ ತಾನು ಅಗತ್ಯಕ್ಕಿಂತ ಹೆಚ್ಚು ದಪ್ಪಗಿದ್ದೇನೆ ಎಂಬ ಭಾವನೆ. ವಾಸ್ತವವೆಂದರೆ ಉಳಿದವರಂತೆ ಆತನ ಚರ್ಮ ಹಾಗೂ ಎಲುಬುಗಳಿಗೆ ಕೊಬ್ಬನ್ನು ಸಂಗ್ರಹಿಸಿಡುವ ಶಕ್ತಿಯಿಲ್ಲ. ಆದರೆ ರಕ್ತದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಸಂಗ್ರಹವಾಗುತ್ತಿದೆ. ದೇಹ ಕಡಿಮೆ ತೂಕದಿಂದ ಬಳಲುತ್ತಿದೆ. ಆತನ ಮುಖವನ್ನೊಮ್ಮೆ ವೀಕ್ಷಿಸಿದರೂ, ಸಮಸ್ಯೆ ನಮಗೆ ಗೊತ್ತಾಗದು. 'ಪೋಲ್ಡ್ 1' ಎಂಬ ಜೀನ್‌ನಲ್ಲಿನ ವ್ಯತ್ಯಾಸದಿಂದಾಗಿ ಬರುವ ಈ ಸಮಸ್ಯೆ ಆತನಿಗೆ 2ನೇ ವಿಧದ ಮಧುಮೇಹ ಹಾಗೂ ಕಿವುಡಿಗೂ ಕಾರಣವಾಗಿದೆ.

ಇವಿಷ್ಟೂ ಸಾಲದೆಂಬಂತೆ... ಸೈಕ್ಲಿಂಗ್ ತರಬೇತಿ ಸಮಯದಲ್ಲಿ ಎಡವಟ್ಟು ಮಾಡಿಕೊಂಡ. ಅದು ನಡೆದದ್ದು 2006ರಲ್ಲಿ. ಬಾಲ್ಯದಿಂದಲೂ ಎಂಡಿಪಿ ಸಿಂಡ್ರೋಮ್ ಪೀಡಿತನಾಗಿದ್ದ ಟಾಮ್‌ನ ಮನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಛಲವಿತ್ತು. ದೇಹ ಸರಿಯಾಗಿ ಸಹಕರಿಸದಿದ್ದರೂ ತನ್ನಿಷ್ಟದ ಸೈಕ್ಲಿಂಗ್ ಅನ್ನೇ ಸಾಧನೆಯ ಮೆಟ್ಟಿಲಾಗಿ ಸ್ವೀಕರಿಸಲು ತಯಾರಾದ ಛಲದಂಕ ಮಲ್ಲ 2005ರಲ್ಲಿ ತಾಲೀಮು ನಡೆಸಲು ರಸ್ತೆಗಿಳಿದೇ ಬಿಟ್ಟ. ಮುಂದಿನ ವರ್ಷವೇ ಅಂದರೆ 2006ರಲ್ಲೇ ತರಬೇತಿ ಸಂದರ್ಭ ಕಾರೊಂದು ಡಿಕ್ಕಿ ಹೊಡೆಯಿತು. ಪರಿಣಾಮ ಕಣ್ಣಿಗೆ ಏಟಾಯಿತು. ಅಷ್ಟೇ ಏಕೆ, ತಲೆ ಬುರುಡೆ ಒಡೆದು ಮೆದುಳಿನಲ್ಲಿ ರಕ್ತಸ್ರಾವವಾಯಿತು. ಹಲ್ಲು, ಭುಜದ ಎಲುಬು, ಪಕ್ಕೆಲುಬು, ಶ್ವಾಸಕೋಶ, ಮೊಣಕಾಲುಗಳಿಗೆಲ್ಲಾ ತೀವ್ರ ಪೆಟ್ಟಾಯಿತು. ಆಸ್ಪತ್ರೆಗೆ ಸಾಗಿಸುವಾಗಲೇ ಅವನ ಹೃದಯ ಎರಡು ಬಾರಿ ನಿಂತಿತ್ತು! ಹೆಚ್ಚೂ ಕಡಿಮೆ ಮಾರಣಾಂತಿಕ ಹೊಡೆತ. ಎಲ್ಲರೂ ಆತ ಬದುಕುಳಿಯುವುದೇ ಕಷ್ಟ ಎಂದು ಭಾವಿಸಿದ್ದರು. ವೈದ್ಯರ ಸಾಹಸದಿಂದಾಗಿ ಟಾಮ್‌ಗೆ ಪುನರ್ಜನ್ಮ ದೊರಕಿತೆಂದೇ ಹೇಳಬೇಕು.

ಎಕ್ಸಿಟ್ ವಿವಿಯ ವೈದ್ಯಕೀಯ ಸಂಶೋಧಕ ಪ್ರೊಫೆಸರ್ ಆ್ಯಂಡ್ರ್ಯೂ ಹಾಟಸ್ಲಿ ಹೇಳುವುದಿಷ್ಟು; 'ಟಾಮ್‌ನ ಸಮಸ್ಯೆ ನಮ್ಮ ಪಾಲಿಗೆ ಬಿಡಿಸಲಾರದ ಕಗ್ಗಂಟು. ಈ ರೀತಿ ಸಮಸ್ಯೆ ಇರುವ ಬೇರೆ ಕೆಲವರ ಡಿಎನ್‌ಎ ಪರೀಕ್ಷೆಯನ್ನು ನಡೆಸಿದೆವು. ದೇಹದಲ್ಲಿ ಕೊಬ್ಬಿನಂಶ ನಿಲ್ಲದಿರುವುದಕ್ಕೆ ಕಾರಣ ಏನೆಂದೇ ತಿಳಿಯುತ್ತಿಲ್ಲ. ಇದಕ್ಕೆ ಪರಿಹಾರ ಹುಡುಕುತ್ತಿದ್ದೇವೆ'.
ಪ್ರಪಂಚ ಏನೇ ಹೇಳಲಿ, ಟಾಮ್ ಆಲೋಚನೆಗಳೇ ಬೇರೆ...'ನನ್ನ ಸಮಸ್ಯೆ ಏನೆಂದು ಹುಡುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನನ್ನ ಹಾಗೆಯೇ ಇರುವ ಇತರರೂ  ಎಲ್ಲರಂತೆ ಜೀವನ ನಡೆಸಬಹುದು ಎಂಬುದನ್ನು ತಿಳಿಸಬೇಕಿದೆ'.

ಯಾವ ಹೊಡೆತವೂ ಆತನ ಧೀಶಕ್ತಿಯನ್ನು ಕುಗ್ಗಿಸಿಲ್ಲ. ಕಳೆದುಹೋದ ಬದುಕನ್ನು ಸೈಕ್ಲಿಂಗ್‌ನಲ್ಲೇ ಮರಳಿ ಪಡೆಯಲು ಹೊರಟಿದ್ದಾನೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಿಂಚುತ್ತಿದ್ದಾನೆ. ಬದುಕಿನಲ್ಲಿ ಇಷ್ಟೆಲ್ಲಾ ನಡೆದಿದ್ದರೂ ಆತನಿಗಿನ್ನೂ 23 ವರ್ಷವಷ್ಟೇ! ಸೂಕ್ತ ಚಿಕಿತ್ಸೆ ಪಡೆದು 2016ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಆತನದ್ದು...

- ಗಣೇಶ್ ಪ್ರಸಾದ್ ಕುಂಬ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.