ಬೆಟ್ಟಿಂಗ್ ಬೆನ್ನೇರಿ

ವಿವಾದದೊಂದಿಗೆ ಉದಯವಾದ ಐಪಿಎಲ್ ಈಗ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಜಾಲಗಳ ಬಹಿರಂಗದಿಂದಾಗಿ ಮತ್ತಷ್ಟು ಮುಖ ಕಪ್ಪು ಮಾಡಿಕೊಂಡಿದೆ. ಕ್ರೀಡಾಸ್ಫೂರ್ತಿಯನ್ನು ಕೊಂಚ ಹೆಚ್ಚಾಗಿಯೇ ಹೊಂದಿರುವ ಭಾರತದಲ್ಲಿ ಕೇವಲ ಈ ಪ್ರಕರಣದ್ದೇ ಮಾತು. ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ತಡೆಯಬೇಕಾದರೆ, ಪ್ರಬಲ ಕಾನೂನಿನ ಅಗತ್ಯವಿದೆ ಎಂದು ಹಲವರು ಒತ್ತಾಯಿಸಿದರೆ, ಮತ್ತೆ ಕೆಲವರು ಬೆಟ್ಟಿಂಗಿನ ಬೆನ್ನು ತಟ್ಟುತ್ತಿದ್ದಾರೆ.
ಪ್ರಮುಖವಾಗಿ ಭಾರತದ ಮಾಜಿ ಫುಟ್ಬಾಲ್ ತಾರೆ ಭೈಚುಂಗ್ ಭುಟಿಯಾ, ಉದ್ಯಮಿ ವಿಜಯ್ ಮಲ್ಯ ಭಾರತದಲ್ಲಿ ಬೆಟ್ಟಿಂಗ್ಗೆ ಅನುಮತಿ ನೀಡುವ ಬಗ್ಗೆ ಬೆಂಬಲಿಸಿದರೆ, ಇನ್ನೊಂದು ಒಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸಚಿವ ಫಾರೂಖ್ ಅಬ್ದುಲ್ಲಾ 'ವಿಶ್ವದಾದ್ಯಂತ ನಡೆಯುತ್ತಿದೆ, ಭಾರತದಲ್ಲೇಕೆ ನಡೆಯಬಾರದು?' ಎಂದು ಖಡಕ್ ಆಗಿಯೇ ಪ್ರಶ್ನಿಸಿದ್ದಾರೆ. ಹಾಗಾದರೆ ಬೆಟ್ಟಿಂಗ್ಗೆ ಭಾರತದಲ್ಲಿ ಕಾನೂನಾತ್ಮಕ ಅನುಮತಿ ನೀಡಿದರೆ ಫಿಕ್ಸಿಂಗ್ನಂಥ ಹಗರಣಗಳನ್ನು ನಿಲ್ಲಿಸಬಹುದೇ? ಹಾಗೊಂದು ವೇಳೆ ಅನುಮತಿ ನೀಡಿದ್ದೇ ಆದರೆ ಜನರನ್ನು ದಾರಿ ತಪ್ಪಿಸಿದಂತಾಗುವುದಿಲ್ಲವೇ? ಎಂಬ ಪರ ಮತ್ತು ವಿರೋಧ ಪ್ರಶ್ನೆಗಳು ಧುತ್ತೆಂದು ಎದ್ದು ನಿಲ್ಲುತ್ತವೆ. ಈ ಕುರಿತು ಒಂದು ವಿಶ್ಲೇಷಣೆ.
ಫಿಕ್ಸಿಂಗ್ ತಪ್ಪಿಸಬಹುದೇ?
ದೇಶದಲ್ಲಿ ಬೆಟ್ಟಿಂಗ್ಗೆ ಕಾನೂನು ಮೂಲಕ ಅನುಮತಿ ನೀಡುವುದರಿಂದ ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ತಪ್ಪಿಸಬಹುದು ಎಂಬುದು ಕೆಲ ಕಾನೂನುತಜ್ಞರ ಅಭಿಪ್ರಾಯವೂ ಆಗಿದೆ. ಆದರೆ, ಬೆಟ್ಟಿಂಗ್ಗೆ ಕಾನೂನು ಮೂಲಕ ಅನುಮತಿ ನೀಡುವ ಮೂಲಕ ಫಿಕ್ಸಿಂಗ್ ಹಗರಣಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅದೇ ಕಾನೂನು ತಜ್ಞರು. ಏಕೆಂದರೆ, ಈ ಅನುಮತಿಯಿಂದ ಜನರು ಅದರಲ್ಲೇ ಹೆಚ್ಚು ಹೆಚ್ಚು ತೊಡಗುತ್ತಾರೆ. ಸಾಕಷ್ಟು ಅವಾಂತರಗಳೂ ಸೃಷ್ಟಿಯಾಗಬಹುದು ಎಂಬುದು ತಜ್ಞರ ಸಲಹೆ. ಆದರೆ, ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸರ್ಕಾರ ಮೊದಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ನಂತರ ಬೆಟ್ಟಿಂಗ್ಗೆ ಅನುಮತಿ ನೀಡುವ ಬಗ್ಗೆ ಯೋಚಿಸಲಿ ಎಂಬುದು ಹಲವು ತಜ್ಞರ ಅಭಿಮತ.
ಪರಿಣಾಮ ಏನಾಗಬಹುದು?
ಈ ಅನುಮತಿಯಿಂದ ನೇರವಾಗಿ ಕೆಳವರ್ಗದ ಜನರ ಮೇಲೇ ಹೆಚ್ಚು ದುಷ್ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ ಲಾಟರಿ ಮೇಲೆ ನಿಷೇಧ ಹೇರಿದನ್ನು ನೆನಪಿಸಿಕೊಳ್ಳಬಹುದು. ದಿಢೀರನೆ ಹಣ ಗಳಿಸುವ ದಾರಿಯನ್ನು ಹುಡುಕಲು ಸಮಾಜದ ಕೆಳವರ್ಗದ ಜನರಿಗೆ ಇದು ನೂತನ ದಾರಿ ಮಾಡಿಕೊಡುತ್ತದೆ. ಅಲ್ಲದೆ ಅವರನ್ನು ಸೋಮಾರಿಗಳನ್ನಾಗಿಯೂ ಮಾಡುತ್ತದೆ. ಜನರು ದುಡಿಯುವುದನ್ನು ಬಿಟ್ಟು ಜೂಜಿನ ಕೂಪಕ್ಕೆ ಬೀಳುತ್ತಾರೆ. ಹೀಗಾಗಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಜನರೇ ತೀರ್ಮಾನಿಸಬೇಕು. ಹೀಗಾದಾಗ ಮಾತ್ರ ಜನರೂ ಮೋಸ, ವಂಚನೆಯಂಥ ಪ್ರಕರಣಗಳಿಂದ ದೂರ ಉಳಿಯಬಹುದಲ್ಲವೇ? ಇಂಥ ವಿಷಯಗಳಲ್ಲಿ ಸರ್ಕಾರಕ್ಕಿಂತ ಜನರೇ ಮುಖ್ಯವಾಗಿ ಎಚ್ಚೆತ್ತುಕೊಳ್ಳಬೇಕು. ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕಾದರೆ, ಅಲ್ಲಿ ಸ್ವಾಸ್ಥ್ಯ ಮನುಷ್ಯರಿರಬೇಕು. ಸುಂದರವಾದ ಸಮಾಜ ನಿರ್ಮಾಣ ಮಾಡಬೇಕಾದಲ್ಲಿ ಮನುಷ್ಯನೇ ದಾರಿ ತಪ್ಪಿದರೆ, ಇಡೀ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತದೆ. ಬೆಟ್ಟಿಂಗ್, ಫಿಕ್ಸಿಂಗ್ನಂಥ ಪ್ರಕರಣಗಳು ಇದಕ್ಕೆ ಹೊರತಲ್ಲ.
ಕ್ರೀಡಾಸ್ಫೂರ್ತಿ ಉಳಿಯುವುದೇ?
ಬೆಟ್ಟಿಂಗ್ಗೆ ಕಾನೂನು ಮೂಲಕ ಅನುಮತಿ ನೀಡಿದರೆ, ಜನರಲ್ಲಿ ಕ್ರೀಡಾ ಮನೋಭಾವ ಕುಂದುವುದು ನಿಶ್ಚಿತ. ಈಗ ಪಂದ್ಯಗಳನ್ನು ಕ್ರೀಡಾ ಮನೋಭಾವದಿಂದ ನೋಡುವ ಜನರು, ಬೆಟ್ಟಿಂಗ್ನಲ್ಲಿ ಸೋತವರಿಗೆ ಕ್ರೀಡೆ ಬಗ್ಗೆ ನಿರ್ಲಕ್ಷ್ಯ ಹುಟ್ಟಬಹುದು. ಆಗ ಲಾಟರಿ ಮತ್ತು ಕ್ರೀಡೆ ಒಂದು ಎಂಬ ಮನೋಭಾವನೆ ಜನರಲ್ಲಿ ಹೆಚ್ಚಾಗಬಹುದು. ನಂತರ ಕ್ರೀಡೆಗಳನ್ನೇ ನಿಲ್ಲಿಸಿ ಎಂಬ ಕೂಗೂ ಕೇಳಿಬಂದೀತು. ಕ್ರೀಡಾಕ್ಷೇತ್ರಕ್ಕೆ ಅದರದೇ ಮಹತ್ವವಿದೆ ಅದನ್ನು ಕಾಪಾಡಿಕೊಳ್ಳಬೇಕಿರುವುದು ಸರ್ಕಾರ ಮತ್ತು ಸಾರ್ವಜನಿಕರ ಹೊಣೆ. ಹೀಗಾಗಿ ಸರ್ಕಾರ ಕ್ರೀಡೆಗೆ ಕಳಂಕ ಅಂಟದ ದಾರಿಗಳನ್ನು ಹುಡುಕುವುದು ಒಳಿತು.
ಭರ್ಜರಿ ಲಾಭ
ಬೆಟ್ಟಿಂಗ್ಗೆ ಕಾನೂನಾತ್ಮಕವಾಗಿ ಅನುಮತಿ ನೀಡಿದರೆ, ಸರ್ಕಾರಕ್ಕೆ ಅಂದಾಜು ರು. 10ರಿಂದ ರು. 20 ಸಾವಿರ ಕೋಟಿ ಲಾಭವಾಗುದರಲ್ಲಿ ಅನುಮಾನವಿಲ್ಲ. ಆದರೆ, ಕಾನೂನು ಸಚಿವಾಲಯಕ್ಕೆ, ಬೆಟ್ಟಿಂಗ್ಗೆ ಅನುಮತಿ ನೀಡುವುದಕ್ಕಿಂತ ಫಿಕ್ಸಿಂಗ್ ವಿರುದ್ಧ ಕಾನೂನು ಜಾರಿ ತರುವ ಆಸಕ್ತಿ ಇದೆ. ಆದರೆ ಕ್ರೀಡಾ ಸಚಿವಾಲಯ ಮಾತ್ರ ಬೆಟ್ಟಿಂಗ್ಗೆ ಅನುಮತಿ ನೀಡುವ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಎರಡೂ ಸಚಿವಾಲಯಗಳು ಬೆಟ್ಟಿಂಗ್ ಮತ್ತು ಫಿಕ್ಸಿಂಗ್ನಂಥ ಪ್ರಕರಣಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಅಗತ್ಯವಿದೆ.
- ಮಲ್ಲಿಕಾರ್ಜುನ ಕರಿಯಪ್ಪನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


