ಕ್ರೀಡೆ

ಕ್ರಾಂತಿಯತ್ತ ಶ್ರೀಕಾಂತ್

ಕ್ರಾಂತಿಯತ್ತ ಶ್ರೀಕಾಂತ್
Published On :

ಕ್ರಿಕೆಟ್‌ಗೊಬ್ಬ ಹೊಡೆಬಡಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಸಿಕ್ಕ ಹಾಗೆ ಬ್ಯಾಡ್ಮಿಂಟನ್‌ಗೂ ಒಬ್ಬ ಶ್ರೀಕಾಂತ್ ಸಿಕ್ಕಿದ್ದಾನೆ. ಕಿಡಂಬಿ ಶ್ರೀಕಾಂತ್!
ಈಗಾಗಲೇ ಮಿರ ಮಿರ ಮಿಂಚುತ್ತಿರುವ ಭಾರತದ ಬ್ಯಾಡ್ಮಿಂಟನ್ ಪಾಳಯದಲ್ಲಿ ಮತ್ತೊಬ್ಬ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾನೆ ಈ ಗುಂಟೂರಿನ ಭಂಟ. ಥಾಯ್ಲೆಂಡ್ ಓಪನ್ ಗೆಲ್ಲುವವರೆಗೂ 20ರ ಈ ಉತ್ಸಾಹಿ ತರುಣನನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಏಪ್ರಿಲ್‌ನಲ್ಲಿ ನಡೆದ ಯೂನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್ ಸೂಪರ್ ಸೀರಿಸ್‌ನಲ್ಲಿ ವಿಶ್ವದ ಆರನೇ ಸೀಡ್ ಡೆನ್ಮಾರ್ಕ್‌ನ ಜಾನ್ ಓ ಜಾರ್ಜನ್‌ಸನ್ 21-12, 21-12 ಅವರಿಗೆ ಅಂತರದಲ್ಲಿ ಸೋಲಿನ ರುಚಿ ತೋರಿದಾಗ ಎಲ್ಲರಿಗೂ ಅಚ್ಚರಿ.
ಸಾಮಾನ್ಯವಾಗಿ ಎಳೆಯ ಆಟಗಾರನಿಗೆ ಫೈನಲ್ ಆಡುವಾಗ ಸಣ್ಣ ನಡುಕ ಇದ್ದೇ ಇರುತ್ತದೆ. ಫೈನಲ್ ಫೋಬಿಯಾವೋ ಇಲ್ಲಾ ಇಷ್ಟು ಸಾಕು ಎಂಬ ತೃಪ್ತ ಭಾವವೋ ಹೆಚ್ಚಿನ ಪ್ರತಿಭಾವಂತ ಆಟಗಾರರು ಅಂತಿಮ ಹಂತದಲ್ಲಿ ಎಡವಿ ರನ್ನರ್ ಅಪ್ ಪ್ರಶಸ್ತಿಗೋ ಇಲ್ಲಾ ಬೆಳ್ಳಿ, ಕಂಚಿನೊಂದಿಗೆ ಮರಳುವುದಿದೆ. ಆದರೆ ಈತನ ಆಟದಲ್ಲಿ ಎಳ್ಳಷ್ಟೂ ಭಯ ಇದ್ದಂತೆ ತೋರಲಿಲ್ಲ. ಫೈನಲ್‌ನಲ್ಲಿ ಶ್ರೀಕಾಂತ್ ಆಡಿದ ಪರಿಗೆ ಜಾನ್ ಬೆಚ್ಚಿ ಬಿದ್ದಿದ್ದರು. 21-16, 21-12 ಅಂತರದಿಂದ ಗೆಲವು ಸಾಧಿಸಿದ ಭಾರತೀಯ ಯುವತಾರೆ ಡೆನ್ಮಾರ್ಕ್‌ನ ಪ್ರಬುದ್ಧ ಆಟಗಾರನನ್ನು ತನ್ನ ಬಲಿಷ್ಠ ಡಬಲ್ ಸ್ಟ್ರೋಕ್‌ಗಳಿಂದ ತಬ್ಬಿಬ್ಬುಗೊಳಿಸಿದ್ದರು.
'ಪಂದ್ಯದ ಪ್ರಾರಂಭದಲ್ಲಿ ಕೊಂಚ ಹೆದರಿದ್ದು ನಿಜ. ಗೆಲ್ಲುವುದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಉತ್ತಮ ಆಟ ಪ್ರದರ್ಶಿಸುವ ಬಗ್ಗೆಯಷ್ಟೇ ಆಲೋಚಿಸಿದ್ದೆ.' ಎಂಬ ಮಾತೇ ಸಾಕು ಆತ ಯಾಕೆ ಉಳಿದವರಿಗಿಂತ ಡಿಫರೆಂಟ್ ಎಂಬುದನ್ನು ಅಳೆಯುವುದಕ್ಕೆ.

ಮಹತ್ವದ್ದು ಯಾಕೆ?
ಜೂನ್ 9ರಂದು ನಡೆದ ಪಂದ್ಯ ಆಂಧ್ರಪ್ರದೇಶದ ಈ ಯುವಕನ ಪಾಲಿಗೆ ಸ್ಮರಣೀಯ ಮಾತ್ರವಲ್ಲ, ಭಾರತದ ಪಾಲಿಗೆ ಮಹತ್ವದ್ದಾಗಿಯೂ ದಾಖಲಾಯಿತು. ಯಾಕೆಂದರೆ 2001ರಲ್ಲಿ ಪುಲ್ಲೇಲ ಗೋಪಿಚಂದ್ ಅಲ್ ಇಂಗ್ಲೆಂಡ್ ಪ್ರಶಸ್ತಿ ಬಾಚಿಕೊಂಡ ಬಳಿಕ ಯಾವುದೇ ಭಾರತದ ಯಾವುದೇ ಸಿಂಗಲ್ಸ್ ಆಟಗಾರ ವಿದೇಶದಲ್ಲಿ ಪ್ರಶಸ್ತಿ ಬಾಚಿರಲಿಲ್ಲ. ಅಷ್ಟೇ ಅಲ್ಲದೆ ನೇರ ಸೆಟ್‌ಗಳಲ್ಲಿ ಗ್ರಾನ್ ಪ್ರೀ ಪ್ರಶಸ್ತಿ ಬಾಚಿಕೊಂಡ ಕೇವಲ ಎರಡನೇ ಭಾರತೀಯ. ಭಾರತದ ನಂ. ಒನ್ ಆಟಗಾರ ಪಿ. ಕಶ್ಯಪ್ ಕಳೆದ ವರ್ಷ ನಡೆದ ಸಯ್ಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಮೀಟ್‌ನಲ್ಲಿ ಜಯಭೇರಿ ಬಾರಿಸಿದ್ದರಾದರೂ ಅದು ನಡೆದದ್ದು ಲಕ್ನೋದಲ್ಲಿ ಎಂಬುದು ಗಮನಿಸಬೇಕಾದ ಸಂಗತಿ.   
ಪುಲ್ಲೇಲ ಗೋಪಿಚಂದ್ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದ ಬಳಿಕ ಆಂಧ್ರಪ್ರದೇಶದಿಂದ ಫುಂಖಾನುಪುಂಖವಾಗಿ ಉನ್ನತ ದರ್ಜೆಯ ಆಟಗಾರರು ಬೆಳಕಿಗೆ ಬರುತ್ತಲೇ ಇದ್ದಾರೆ. ಸೈನಾ ನೆಹ್ವಾಲ್, ಚೇತನ್ ಆನಂದ್, ಜ್ವಾಲಾ ಗುಟ್ಟಾ, ಪರುಪಳ್ಳಿ ಕಶ್ಯಪ್, ಪಿ.ವಿ. ಸಿಂಧು, ಇದೀಗ ಗುಂಟೂರು ಸಹೋದರರಾದ ಕೆ. ನಂದಗೋಪಾಲ್ ಹಾಗೂ ಶ್ರೀಕಾಂತ್.

ಗೋಪಿ ಉವಾಚ
ಆರಂಭದ ದಿನಗಳಲ್ಲಿ ವಿಶಾಖಪಟ್ಟಣಂನಲ್ಲಿ ಸುಧಾಕರ ರೆಡ್ಡಿ ಗರಡಿಯಲ್ಲಿ ಪಳಗಿದ ಶ್ರೀಕಾಂತ್ ಇದೀಗ ಗೋಪಿಚಂದ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಗೋಪಿಚಂದ್ ಪ್ರಕಾರ ಶ್ರೀಕಾಂತ್ ಬಹಳ ಆತ್ಮವಿಶ್ವಾಸವುಳ್ಳ ಬಲಿಷ್ಠ ಆಟಗಾರ. ಡಬಲ್ಸ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದರೂ, ಸಿಂಗಲ್ಸ್‌ಗೆ ಹೇಳಿ ಮಾಡಿಸಿದ ಹೋರಾಟಗಾರ. ಡಬಲ್ಸ್ ಸ್ಟ್ರೋಕ್‌ಗಳನ್ನು ಆತ ಬಳಸುವ ರೀತಿಯಂತೂ ವರ್ಣಿಸಲಸದಳ. ಶ್ರೀಕಾಂತ್ ಸಾಮರ್ಥ್ಯ ಬಣ್ಣಿಸಲು ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಭಾರತಕ್ಕೆ ಮತ್ತೊಬ್ಬ ಬಲಿಷ್ಠ ಬ್ಯಾಡ್ಮಿಂಟನ್ ಪಟು ದಕ್ಕಿದ್ದಾನೆ. ಭಾರತಕ್ಕೋಸ್ಕರ ಒಲಿಂಪಿಕ್ ಪದಕ ಆತ ತರಬೇಕೆಂಬ ನಿರೀಕ್ಷೆ ಆತನ ಹೆತ್ತವರದು. ಇದೀಗ ನಮ್ಮದೂ ಹೌದು.

- ಗಣೇಶಪ್ರಸಾದ್ ಕುಂಬ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.