ಕ್ರೀಡೆ

ನ್ಯೂಜಿಲೆಂಡ್ ಎದುರು ಇಂಗ್ಲೆಂಡ್ ಫೇವರಿಟ್

Published On :

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡ ಬುಧವಾರದಿಂದ ಆರಂಭವಾಗಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಫೇವರಿಟ್ ತಂಡವಾಗಿ ಕಾಣುತ್ತಿದೆ.
ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಇಲೆವೆನ್ ತಂಡದ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದರೂ ಇಂಗ್ಲೆಂಡ್ ತಂಡ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಬಿಂಬಿತವಾಗಿದೆ. ಇಂಗ್ಲೆಂಡ್ ತಂಡ ಪ್ರಸ್ತುತ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ದ್ವಿತಿಯ ಸ್ಥಾನದಲ್ಲಿದ್ದರೆ, ಆತಿಥೇಯ ನ್ಯೂಜಿಲೆಂಡ್ ತಂಡ ಎಂಟನೇ ಸ್ಥಾನದಲ್ಲಿದೆ.
ಇದೇ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನಾಡಲಿದ್ದು, ಈ ಹಿನ್ನಲೆಯಲ್ಲಿ ಈ ಸರಣಿ ಆಂಗ್ಲರಿಗೆ ಹೆಚ್ಚು ಮಹತ್ವದ್ದಾಗಿದೆ.
ನ್ಯೂಜಿಲೆಂಡ್ ತಂಡ 1999ರಿಂದ ಈಚೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹಾಗೆಯೇ 1984ರಲ್ಲಿ ನ್ಯೂಜಿಲೆಂಡ್ ತಂಡ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.
ಅಲ್ಲದೇ ನ್ಯೂಜಿಲೆಂಡ್ ತಂಡ ಕಳೆದ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ಅನುಭವಿಸಿತ್ತು.
 ಅಲ್ಲದೇ ಆಗಿನ ನಾಯಕ ರಾಸ್ ಟೇಲರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ನಂತರ ವಿಕೆಟ್ ಕೀಪರ್ ಬ್ರೆಂಡನ್ ಮೆಕಲಂಗೆ ನಾಯಕತ್ವದ ಜವಾಬ್ದಾರಿ ನೀಡಲಾಯಿತು.
ನ್ಯೂಜಿಲೆಂಡ್ ತಂಡ ಪ್ರವಾಸಿಗರ ಎದುರು ಏಕದಿನ ಹಾಗೂ ಟಿ20 ಎರಡೂ ಸರಣಿಯಲ್ಲೂ 2-1 ಅಂತರದಲ್ಲಿ ಪರಾಭವಗೊಂಡಿದ್ದು, ಟೆಸ್ಟ್ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂದು ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ತಮ್ಮ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ದುರ್ಬಲವಾಗಿರುವುದನ್ನು ಒಪ್ಪಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು ಪ್ರಸ್ತುತ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳ ಹಿಂದಿದ್ದೇವೆ. ನಾವು ಸೀಮಿತ ಓವರ್ ಮಾದರಿಯಲ್ಲಿ ಹೊಂದಿರುವ ಸಾಮರ್ಥ್ಯ, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಂದಿಲ್ಲ. ಹಾಗಾಗಿ ಈ ಸರಣಿಯಲ್ಲಿ ಸರಿಯಾದ ಆಟಗಾರರನ್ನು ಆಯ್ಕೆ ಮಾಡಿ ಅವರಲ್ಲಿ ನಂಬಿಕೆ ಇಟ್ಟು ಉತ್ತಮ ಪ್ರದರ್ಶನ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸರಣಿ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಲಿರುವ ಹಮೀಶ್ ರೂಥರ್‌ಫೋರ್ಡ್ ಹಾಗೂ ಪೀಟರ್ ಫುಲ್ಟಾನ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕಣಕ್ಕಿಳಿಯಲಿದ್ದು, ಮಾರ್ಟಿನ್ ಗುಪ್ಟಿಲ್ ಗಾಯಕ್ಕೊಳಗಾಗಿರುವ ಹಿನ್ನಲೆಯಲ್ಲಿ ಬ್ರೆಂಡನ್ ಮೆಕಲಂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ತಂಡದ ಹಿರಿಯ ಆಟಗಾರರಾದ ವೆಟೋರಿ, ಕ್ರಿಸ್ ಮಾರ್ಟಿನ್ ಮತ್ತು ಮಕ್ಲೆಗನ್ ಕೂಡ ಗಾಯಳು ಪಟ್ಟಿಯಲ್ಲಿ ಸೇರಿದ್ದು, ವೇಗಿ ಡಗ್ ಬ್ರಾಸ್‌ವೆಲ್ ಕೂಡ ಗಾಯದ ಸಮಸ್ಯೆಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ.
ಇತ್ತ ಇಂಗ್ಲೆಂಡ್ ಪರ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟೀವನ್ ಫಿನ್ ತಂಡಕ್ಕೆ ಮರಳಿದ್ದು, ಬೌಲಿಂಗ್ ಪಡೆ ಮತ್ತಷ್ಟು ಬಲವಾಗಲಿದೆ.
ಹೀಗಾಗಿ ಮೇಲ್ನೋಟಕ್ಕೆ ಇಂಗ್ಲೆಂಡ್ ಎಷ್ಟು ಬಲಶಾಲಿಯಾಗಿ ಕಾಣುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಕಿವೀಸ್ ಪಡೆ ದುರ್ಬಲವಾಗಿ ಕಾಣುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.