ರ್ಯಾಂಕಿಂಗ್: ಪೂಜಾರ, ಅಶ್ವಿನ್ ಶ್ರೇಷ್ಠ ಸಾಧನೆ

ದುಬೈ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಮತ್ತು ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ವೃತ್ತಿಶ್ರೇಷ್ಠ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಈ ಇಬ್ಬರು ನೀಡುತ್ತಿರುವ ಆಕರ್ಷಕ ಪ್ರದರ್ಶನ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆಯಲು ಪ್ರಮುಖ ಕಾರಣವಾಗಿದೆ.
ಹೈದರಾಬಾದ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಪೂರೈಸಿದ ಪೂಜಾರ 12 ಸ್ಥಾನ ಬಡ್ತಿ ಪಡೆದಿದ್ದು, 11ನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇನ್ನು ಅಶ್ವಿನ್ ಅವರು 104 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ 3 ಸ್ಥಾನ ಬಡ್ತಿ ಪಡೆದು, 8ನೇ ಸ್ಥಾನಕ್ಕೇರಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 2 ಸ್ಥಾನ ಕುಸಿದಿದ್ದು, ವೆಸ್ಟ್ ಇಂಡೀಸ್ನ ಡಾರೆನ್ ಬ್ರಾವೋ ಅವರೊಂದಿಗೆ 19ನೇ ಸ್ಥಾನದಲ್ಲಿದ್ದಾರೆ.
ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಶತಕ ಪೂರೈಸಿದ ಭಾರತ ತಂಡದ ಇನ್ನೊಬ್ಬ ಬ್ಯಾಟ್ಸ್ಮನ್ ಮುರಳಿ ವಿಜಯ್, 27 ಸ್ಥಾನ ಬಡ್ತಿ ಪಡೆದಿದ್ದು 60ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅವರೇ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ ಅವರೊಂದಿಗೆ ಭಾರತದ ಇತರ ಬೌಲರ್ಗಳು ಸಹ ಬಡ್ತಿ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಒಂದು ಅಂಕ ಪಡೆದಿದ್ದು 25ನೇ ಸ್ಥಾನಕ್ಕೇರಿದರೆ, ರವಿಂದ್ರ ಜಡೇಜಾ 23 ಸ್ಥಾನ ಬಡ್ತಿ ಪಡೆದು 40ನೇ ಸ್ಥಾನದಲ್ಲಿದ್ದಾರೆ. ಇನ್ನು ವೇಗಿ ಭುವನೇಶ್ವರ ಕುಮಾರ್ 28 ಸ್ಥಾನ ಬಡ್ತಿ ಪಡೆದು 97ನೇ ಸ್ಥಾನದಲ್ಲಿದ್ದಾರೆ.
ಒಂದು ಸ್ಥಾನ ಹಿಂಬಡ್ತಿ ಪಡೆದಿರುವ ಪ್ರಗ್ಯಾನ್ ಓಜಾ ಅವರು 9 ಸ್ಥಾನದಲ್ಲಿದ್ದರೆ, ಜಹೀರ್ ಖಾನ್ 16ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಫ್ರಿಕಾದ ಇನ್ನೊಬ್ಬ ಆಟಗಾರ ವೆರ್ನಾನ್ ಫಿಲಾಂಡರ್ 2ನೇ ಸ್ಥಾನದಲ್ಲಿದ್ದರೆ, ಸಯೀದ್ ಅಜ್ಮಲ್ 3ನೇ ಸ್ಥಾನದಲ್ಲಿದ್ದಾರೆ.
ಇನ್ನು ತಂಡ ರ್ಯಾಂಕಿಂಗ್ನಲ್ಲಿ ದಕ್ಷಿಣ ಆಫ್ರಿಕಾ ಈಗಾಗಲೇ ಅಗ್ರಸ್ಥಾನ ಅಲಂಕರಿಸಿದೆ. ಹೀಗಾಗಿ ಐಸಿಸಿ ನೀಡಿರುವ ಏಪ್ರಿಲ್ 1ರವರೆಗಿನ ಗಡುವಿನಲ್ಲಿ ಟೆಸ್ಟ್ ಕ್ರಿಕೆಟ್ನ ಮೇಸ್ ಅನ್ನು ಅದು ಎತ್ತಿ ಹಿಡಿಯಲಿದೆ. 450,000 ಅಮೆರಿಕನ್ ಡಾಲರ್ ಬಹುಮಾನವನ್ನು ಅದು ಪಡೆಯಲಿದೆ.
ಇನ್ನು ಎರಡನೇ ಸ್ಥಾನಕ್ಕೆ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳೂ ಪೈಪೋಟಿ ನಡೆಸಿವೆ. ಸದ್ಯಕ್ಕೆ 118 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, 117 ರೇಟಿಂಗ್ ಪಾಯಿಂಟ್ ಹೊಂದಿರುವ ಇಂಗ್ಲೆಂಡ್ ಮತ್ತು 105 ರೇಟಿಂಗ್ ಪಾಯಿಂಟ್ ಹೊಂದಿರುವ ಭಾರತ 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದರೆ, ಅದು 2ನೇ ಸ್ಥಾನ ಮರಳಿ ಪಡೆಯಲಿದೆ. ಒಂದು ವೇಳೆ ನ್ಯೂಜಿಲೆಂಡ್ 1-0 ಅಂತರದಿಂದ ಗೆದ್ದರೆ, ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಅವಕಾಶ ತೆರೆದುಕೊಳ್ಳಲಿದೆ.
ಭಾರತ 2ನೇ ಸ್ಥಾನ ಪಡೆಯಬೇಕಾದರೆ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಬಾಕಿ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸುವ ಅಗತ್ಯವಿದೆ. ಒಂದು ವೇಳೆ ಉಳಿದೆರಡು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ಸಮಬಲ ಸಾಧಿಸಿದರೆ, 2ನೇ ಸ್ಥಾನ ಪಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


