ಕ್ರೀಡೆ

ಸ್ಪಿನ್ ಬಿರುಗಾಳಿಗೆ ಆಸೀಸ್ ಧೂಳೀಪಟ

ಸ್ಪಿನ್ ಬಿರುಗಾಳಿಗೆ ಆಸೀಸ್ ಧೂಳೀಪಟ
Published On :

ಹೈದರಾಬಾದ್: ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರ ಸ್ಪಿನ್ ಬಿರುಗಾಳಿಗೆ ತರಗೆಲೆಗಳಂತೆ ಧೂಳೀಪಟವಾದ ಆಸ್ಟ್ರೇಲಿಯಾ, ಭಾರತ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 135 ರನ್‌ಗಳ ಅಂತರದಲ್ಲಿ ಶರಣಾಗಿದೆ. ಈ ಗೆಲುವಿನಿಂದಾಗಿ, ಟೀಂ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯ ಮುನ್ನಡೆಯನ್ನು ಸಾಧಿಸಿದೆ.  
ಆಸ್ಟ್ರೇಲಿಯಾದ ದ್ವಿತೀಯ ಇನಿಂಗ್ಸನ್ನು ಕೆಡವುವಲ್ಲಿ ಪ್ರಮುಖ ಪಾತ್ರವಹಿಸಿದ ಅಶ್ವಿನ್ ಅವರು 63 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 33 ರನ್ ನೀಡಿ 3 ವಿಕೆಟ್ ಪಡೆದರು. ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದ ಆಸ್ಟ್ರೇಲಿಯಾ, 67 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು.
ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ, ಬೆಳಗ್ಗೆ ಇನಿಂಗ್ಸ್ ಮುಂದುವರೆಸಿದ ಆಸ್ಟ್ರೇಲಿಯಾ, ಕೇವಲ ಎರಡೇ ತಾಸುಗಳಲ್ಲಿ ಆಲೌಟ್ ಆಯಿತು.
ಸೋಮವಾರ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದ್ದ ಆಸ್ಟ್ರೇಲಿಯಾಕ್ಕೆ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 167 ರನ್‌ಗಳ ಅವಶ್ಯಕತೆಯಿತ್ತು. ಆದರೆ, ಮಂಗಳವಾರ ಇನಿಂಗ್ಸ್ ಮುಂದುವರೆಸಿದ ನಂತರ, ಆಸ್ಟ್ರೇಲಿಯಾ ತನ್ನ ಮೊತ್ತಕ್ಕೆ ಕೇವಲ 57 ರನ್ ಸೇರಿಸುವಷ್ಟರಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಶರಣಾಯಿತು.
67ನೇ ಓವರ್‌ನ ಕೊನೆಯ ಎಸೆತದಲ್ಲಿ ಇಶಾಂತ್ ಶರ್ಮಾ ಅವರು, ಆಸೀಸ್‌ನ ಕೊನೆಯ ಬ್ಯಾಟ್ಸ್‌ಮನ್ ಪ್ಯಾಟಿನ್ಸನ್ ಅವರ ವಿಕೆಟ್ ಪತನಗೊಳ್ಳುತ್ತಲೇ, ಕ್ರೀಡಾಂಗಣದಲ್ಲಿದ್ದ ಸುಮಾರು 10 ಸಾವಿರ ಪ್ರೇಕ್ಷಕರ ಸಮೂಹ ತಮ್ಮ ಆಸನಗಳಿಂದ ಎದ್ದುನಿಂತು ಭಾರತದ ವಿಜಯವನ್ನು ಆಚರಿಸಿತು.
ನಿರೀಕ್ಷೆಯಂತೆ, ದ್ವಿಶತಕ ಗಳಿಸಿದ್ದ ಚೇತೇಶ್ವರ ಪೂಜಾರ 'ಪಂದ್ಯಶ್ರೇಷ' ಗೌರವ ಪಡೆದರು.
ಭಾರತ-ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾ. 14ರಿಂದ ಆರಂಭವಾಗಲಿದೆ. ಅಲ್ಲಿಯವರೆಗೆ, ಭಾರತ ತಂಡಕ್ಕೆ ಎಂಟು ದಿನಗಳ ಕಾಲ ವಿಶ್ರಾಂತಿ ಲಭಿಸಿದೆ.
ದೌರ್ಬಲ್ಯ ಸಾಬೀತು: ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ತಂಡ ಆಡುವುದಿಲ್ಲ ಎಂಬ ಮಾತು ಹಲವಾರು ದಿನಗಳಿಂದ ಚಾಲ್ತಿಯಲ್ಲಿತ್ತು. ಇದು ಈಗ ಪುನಃ ಸಾಬೀತಾಗಿದೆ. ಆದರೆ, ಅದಕ್ಕಿಂತಲೂ ಶೋಚನೀಯ ವಿಚಾರವೆಂದರೆ, ಅದು ಕನಿಷ್ಠಪಕ್ಷ ಎದುರಾಳಿ ತಂಡದ ವಿರುದ್ಧ ಹೋರಾಟ ಮಾಡುವ ಛಾತಿಯನ್ನೂ ಕಳೆದುಕೊಂಡಿರುವುದು.
ಸ್ಪಿನ್ ದಾಳಿಯೆಂದುರು ಕಂಗಾಲಾಗಿದ್ದ ಆಸೀಸ್‌ನ ಬ್ಯಾಟ್ಸ್‌ಮನ್‌ಗಳು 10 ಓವರ್‌ಗಳಲ್ಲಿ ತಮ್ಮ ತಂಡದ ಮೊತ್ತಕ್ಕೇ ಕೇವಲ 1 ರನ್ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಆಸೀಸ್ ತಂಡದ ದುಃಸ್ಥಿತಿಯನ್ನು ಮನದಟ್ಟು ಮಾಡಿಕೊಡುತ್ತದೆ. ತಂಡದ ಈ ದೌರ್ಬಲ್ಯದ ಫಲವಾಗಿಯೇ, ಐದು ದಿನಗಳಲ್ಲಿ ಮುಗಿಯಬೇಕಿದ್ದ ದ್ವಿತೀಯ ಟೆಸ್ಟ್ ಪಂದ್ಯ ಕೇವಲ ಮೂರುವರೆ ದಿನಗಳಲ್ಲೇ ಮುಕ್ತಾಯಗೊಂಡಿತಲ್ಲದೇ, ಭಾರತದ ಗೆಲುವಿನ ಹಾದಿಯನ್ನು ಮತ್ತಷ್ಟು ಸರಳವಾಗಿಸಿತು.
ಬೇಗನೇ ಮುಗಿದ ಕ್ಲಾರ್ಕ್ ಕಾಟ: ವ್ಯಾಟ್ಸನ್ ಹೊರನಡೆದ ನಂತರ, ಕ್ರೀಸ್‌ಗೆ ಬಂದ ಮೈಕಲ್ ಕ್ಲಾರ್ಕ್, ನಿಧಾನವಾಗಿ ಕ್ರೀಸ್‌ನಲ್ಲಿ ತಳವೂರಲು ಪ್ರಯತ್ನಿಸಿದರು. ಚೆನ್ನೈ ಟೆಸ್ಟ್ ಸೇರಿದಂತೆ, ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ ಭಾರತೀಯ ಬೌಲರ್‌ಗಳನ್ನು ದಂಡಿಸುವಲ್ಲಿ ಯಶಸ್ವಿಯಾಗಿದ್ದ ಕ್ಲಾರ್ಕ್, ಈ ಬಾರಿಯೂ ಕ್ರೀಸ್ ಬರುತ್ತಲೇ ರವೀಂದ್ರ ಜಡೇಜಾ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ, ಭಾರತದ ಪಾಳಯಕ್ಕೆ ಒಂದು ಎಚ್ಚರಿಕೆ ಸಂದೇಶವನ್ನೂ ಕಳಿಸಿದರು. ಆದರೆ, ಇನಿಂಗ್ಸ್‌ನ 46ನೇ ಓವರ್‌ನಲ್ಲಿ ಅವರ ವಿಕೆಟ್ ಕೆಡವಿದ ರವೀಂದ್ರ ಜಡೇಜಾ, ಭಾರತಕ್ಕೆ ಒಂದು ನೆಮ್ಮದಿಯ ನಿಟ್ಟುಸಿರು ತಂದುಕೊಟ್ಟರು. ಈ ಬಾರಿ ಕ್ಲಾರ್ಕ್ ಗಳಿಸಿದ್ದು ಕೇವಲ 16 ರನ್ ಮಾತ್ರ.
ಕ್ಲಾರ್ಕ್ ವಿಕೆಟ್ ಪಡೆದ ನಂತರ, ಉತ್ತೇಜಿತರಾದಂತೆ ಕಂಡು ಬಂದ ರವೀಂದ್ರ ಜಡೇಜಾ, ಆಸೀಸ್ ತಂಡದ ವಿರುದ್ಧ ಸಮರ ಸಾರಿದರು.
ಕ್ಲಾರ್ಕ್ ಅವರನ್ನು ಆಚೆ ಕಳಿಸಿದ ಕೆಲವೇ ನಿಮಿಷಗಳಲ್ಲಿ ಎಡ್ವರ್ಡ್ ಕೋವನ್ ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಬರೀ ಬೌಲಿಂಗ್‌ನಲ್ಲಷ್ಟೇ ಅಲ್ಲ, ಫೀಲ್ಡಿಂಗ್‌ನಲ್ಲಿದ್ದಾಗಲೂ ಚೆಂಡಿನೊಂದಿಗೆ ಯಶಸ್ವಿಯಾದ ಜಡೇಜಾ, ಇನಿಂಗ್ಸ್‌ನ 49ನೇ ಓವರ್‌ನಲ್ಲಿ ವಿಕೆಟ್‌ಗೆ ನೇರವಾಗಿ ಚೆಂಡು ಎಸೆಯುವ ಮೂಲಕ ಹೆನ್ರೀಕೆಸ್ ಅವರನ್ನು ರನೌಟ್ ಮಾಡಿದರು. ಹೆನ್ರೀಕೆಸ್ ವಿಕೆಟ್ ಉರುಳಿದಾಗ, ಆಸೀಸ್ 111 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದಾದ ನಂತರ, ಮ್ಯಾಕ್ಸ್‌ವೆಲ್, ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಒಳಗಾದರು. ನಂತರ, ಎಂಟನೇ ವಿಕೆಟ್ ರೂಪದಲ್ಲಿ ಪೀಟರ್ ಸಿಡ್ಲ್ ಔಟಾದರೆ, ಮ್ಯಾಥ್ಯೂ ವೇಡ್ ಒಂಭತ್ತನೇ ವಿಕೆಟ್ ರೂಪದಲ್ಲಿ ಪೆವಿಲಿಯನ್‌ಗೆ ಹಿಂದಿರುಗಿದರು.
ಅವಧಿ ವಿಸ್ತರಣೆ: ಈ ಸಂದರ್ಭದಲ್ಲಿ, ಆಸೀಸ್ ಇನಿಂಗ್ಸ್ ಪೂರ್ತಿಗೊಳ್ಳಲು ಇನ್ನೊಂದೇ ವಿಕೆಟ್ ಬಾಕಿಯಿದ್ದುದರಿಂದ ಮೈದಾನದಲ್ಲಿದ್ದ ಉಭಯ ಅಂಪೈರ್‌ಗಳು ಚರ್ಚಿಸಿ, ನಿಯಮಗಳನುಸಾರ ದಿನದಾಟದ ಮೊದಲ ಅವಧಿಯನ್ನು ಅರ್ಧ ಗಂಟೆಯವರೆಗೆ ವಿಸ್ತರಿಸಿಸುವ ನಿರ್ಧಾರ ಕೈಗೊಂಡರು.
ಹೀಗೆ, ವಿಸ್ತರಣೆಗೊಂಡ ಅವಧಿಯಲ್ಲಿ ಆಸೀಸ್ ತನ್ನ 10ನೇ ವಿಕೆಟ್ (ಪ್ಯಾಟಿನ್ಸನ್) ಕಳೆದುಕೊಂಡು, ಅಂತಿಮವಾಗಿ, 131 ರನ್‌ಗಳಿಗೆ ಸರ್ವಪತನ ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.