ಕ್ರೀಡೆ

ಭಾರತಕ್ಕಿಲ್ಲ ಎಎಫ್‌ಸಿ ಚಾಲೆಂಜ್?

ಭಾರತಕ್ಕಿಲ್ಲ ಎಎಫ್‌ಸಿ ಚಾಲೆಂಜ್?
Published On :

ಮ್ಯಾನ್ಮಾರ್ ವಿರುದ್ಧ 1-0ದಿಂದ ಸೋತ ಭಾರತ: ಅಂತಿಮ ಸುತ್ತಿಗೆ ಅನುಮಾನ
ಯಾಗೋನ್ (ಮ್ಯಾನ್ಮಾರ್): ಭಾರತ ಫುಟ್ಬಾಲ್ ತಂಡ ಎಎಫ್‌ಸಿ ಚಾಲೆಂಜ್ ಕಪ್‌ನ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ವಿರುದ್ಧ 0-1 ಗೋಲಿನ ಅಂತರದಿಂದ ಸೋಲನುಭವಿಸಿತು.
ಹೀಗಾಗಿ ಭಾರತ ತಂಡಕ್ಕೆ 2014ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್‌ನ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ದೊರಕುವುದು ಅನುಮಾನ ಉಂಟುಮಾಡಿದೆ.
ಪಂದ್ಯದ 75ನೇ ನಿಮಿಷದಲ್ಲಿ ಅತಿಥೇಯ ಮ್ಯಾನ್ಮಾರ್ ತಂಡದ ಆಟಗಾರ ಸೋಯಿ ಮಿನ್ ಓ ಏಕೈಕ ಗೋಲು ದಾಖಲಿಸಿದರು. ಹೀಗಾಗಿ ಪಂದ್ಯದಲ್ಲಿ ಅತಿಥೇಯ ತಂಡ ನಿಯಂತ್ರಣ ಸಾಧಿಸಿತು.
ಈ ಸೋಲಿನೊಂದಿಗೆ ಭಾರತ 6 ಅಂಕಗಳನ್ನು ಗಳಿಸುವ ಮೂಲಕ ತನ್ನ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಈ ಮುನ್ನ ತೈಪೇ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 2-1 ಅಂತರದಿಂದ ಜಯ ಸಾಧಿಸಿತ್ತು. ನಂತರ ಗುವಾಮ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 4-0 ಅಂತರದಿಂದ ಜಯ ಕಂಡುಕೊಂಡಿತ್ತು.
ಆದರೆ, ಬುಧವಾರದ ಪಂದ್ಯದಲ್ಲಿ ಜಯ ಸಾಧಿಸಿದ ಮ್ಯಾನ್ಮಾರ್ ತಂಡ ಬರುವ ವರ್ಷ ಮ್ಯಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.  ಈ ಮೊದಲು ಒಂದು ಪಂದ್ಯದಲ್ಲಿ ಗೆದ್ದು ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮ್ಯಾನ್ಮಾರ್ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಆದರೆ, ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 7 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನಿ ಎನಿಸಿತು.
2014ರ ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಸುತ್ತನ್ನು 5 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಐದು ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆದ ತಂಡಗಳೊಂದಿಗೆ 2ನೇ ಸ್ಥಾನ ಪಡೆದ ಎರಡು ಶ್ರೇಷ್ಠ ತಂಡಗಳು ಅಂತಿಮ ಸುತ್ತಿನ ಪಂದ್ಯಾವಳಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಹೀಗಾಗಿ ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದಿರುವ ಭಾರತ ತಂಡಕ್ಕೆ 2014ರ ಅಂತಿಮ ಸುತ್ತಿನ ಪಂದ್ಯಾವಳಿಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವಿದೆ. ಆದರೆ, ಈ ತಿಂಗಳಾಂತ್ಯದವರೆಗೂ ಅದು ಕಾಯಬೇಕಾಗಿದೆ. ಕಾರಣ, ಎಲ್ಲ ಅರ್ಹತಾ ಸುತ್ತಿನ ಪಂದ್ಯಗಳು ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿವೆ.
ಬಿ ಮತ್ತು ಇ ಗುಂಪಿನ ಅರ್ಹತಾ ಸುತ್ತಿನ ಪಂದ್ಯಗಳು ಈ ತಿಂಗಳಾಂತ್ಯಕ್ಕೆ ಕರ್ಜಿಕಿಸ್ತಾನದ ಬಿಶ್ಕೆಕ್ ಮತ್ತು ಫಿಲಿಫಿನ್ಸ್‌ನ ಮಿಲಾನ್‌ನಲ್ಲಿ ನಡೆಯಲಿವೆ. ಇನ್ನು ಸಿ ಮತ್ತು ಡಿ ಗುಂಪಿನ ಪಂದ್ಯಗಳು ಇದೇ ಸಮಯದಲ್ಲಿ ನಡೆಯಲಿವೆ.
ವಿಮ್ ಕೋವರಮನ್ಸ್ ತಂಡದ ಆಟಗಾರರು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಫೇವರಿಟ್ ಎನಿಸಿದ್ದರು. ಕಾರಣ ತೈಪೇ ಮತ್ತು ಗುವಾಮ್ ವಿರುದ್ಧ ಭಾರತ ಜಯ ಸಾಧಿಸಿತ್ತು. ಆದರೆ, ಅದೇ ತೈಪೇ ತಂಡದ ವಿರುದ್ಧ ಮ್ಯಾನ್ಮಾರ್ 1-1 ಅಂತರದಿಂದ ಡ್ರಾ ಸಾಧಿಸಿತ್ತು. ಹೀಗಾಗಿ ಭಾರತ ಫೈನಲ್ ಪಂದ್ಯದಲ್ಲಿ ಜಯ ಕಾಣಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಂತಿಮ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮ್ಯಾನ್ಮಾರ್ ಮುಂದಿನ ವರ್ಷದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.