ಕ್ರೀಡೆ

ಕಂಚು ತಪ್ಪಿಸಿಕೊಂಡ ಜಶನ್‌ಪ್ರೀತ್

Published On :

ನವದೆಹಲಿ: ಭಾರತದ ಯುವ ಸೈಕ್ಲಿಸ್ಟ್ ಕ್ರೀಡಾಳು ಜಶನ್‌ಪ್ರೀತ್ ಕೌರ್, ಶುಕ್ರವಾರ ನಡೆದ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ 2 ಕಿ. ಮೀ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡರು.
2 ಕಿ.ಮೀ. ದೂರದ ಅಂತರವನ್ನು 2: 41.024 ಅವಧಿಯಲ್ಲಿ ಕ್ರಮಿಸಿದ ಅವರು ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನಗಳಿಸಿದರೆ, ಇದೇ ದೂರವನ್ನು 2: 40.395 ಅವಧಿಯಲ್ಲಿ ಕ್ರಮಿಸಿದ ಕಝಕಿಸ್ತಾನದ ಯುರೈಟಿಸ್ ಅವರು ಮೂರನೇ ಸ್ಥಾನ ಪಡೆದರು.
ಬಿರುಸಿನ ಸ್ಪರ್ಧೆ: ಎಂಟು ಲ್ಯಾಪ್‌ಗಳ ಈ ರೇಸ್‌ನ ಆರಂಭದಿಂದಲೂ ಯುರೈಟಿಸ್‌ಗಿಂತಲೂ ಜಶನ್‌ಪ್ರೀತ್ ಕೌರ್ ಅವರು, ಮುನ್ನಡೆ ಪಡೆದಿದ್ದರು. ಮೊದಲ 1000 ಮೀ.ವರೆಗಿನ ದೂರವನ್ನು 2: 20.686 ಅವಧಿಯಲ್ಲಿ ಕ್ರಮಿಸಿದ್ದ ಜಶನ್‌ಪ್ರೀತ್ ಕೌರ್ ಅವರು, ಇದೇ ದೂರವನ್ನು 2: 20.686 ಅವಧಿಯಲ್ಲಿ ಕ್ರಮಿಸಿದ್ದ ಯುರೈಟಿಸ್‌ಗಿಂತ ಮುಂದಿದ್ದರು.  ಆದರೆ, ಕೊನೆಯ ಎರಡು ಲ್ಯಾಪ್‌ಗಳಲ್ಲಿ ಹೆಚ್ಚು ಪರಿಶ್ರಮ ಹಾಕಿದ ಯುರೈಟಿಸ್, ಅಂತಿಮ ಗೆರೆಗೆ ಬರುವಷ್ಟರಲ್ಲಿ ಕೌರ್ ಅವರನ್ನು ಕೂದಲೆಳೆಯಲ್ಲಿ ಹಿಂದಿಕ್ಕಿದರು. ಶುಕ್ರವಾರದ ರೇಸ್‌ನಲ್ಲಿ ಜಶನ್‌ಪ್ರೀತ್ ಕ್ರಮಿಸಿದ ಅವಧಿ, ಅವರ ಇದುವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ. ಈ ವಿಭಾಗದಲ್ಲಿ, ಚಿನ್ನದ ಪದಕ ಹಾಂಗ್‌ಕಾಂಗ್‌ನ ಯಾವೋ ಪಾಂಗ್ (2: 34.534) ಪಾಲಾದರೆ, ಬೆಳ್ಳಿ ಪದಕ ಚೀನಾದ ಯಿ ಜು ಲಿನ್ (2: 39.880) ಅವರಿಗೆ ದಕ್ಕಿದೆ.
ಮತ್ತೊಂದು ಅವಕಾಶ: ಶುಕ್ರವಾರದ ಸ್ಪರ್ಧೆಯಲ್ಲಿ ತನಗಾದ ನಷ್ಟವನ್ನು ತುಂಬಿಸಿಕೊಳ್ಳಲು ಜಶನ್‌ಪ್ರೀತ್‌ಗೆ ಮತ್ತೊಂದು ಅವಕಾಶವಿದೆ. ಮಾ. 11ರಂದು ಭಾರತ ಮಹಿಳೆಯರ ತಂಡ, ಕಝಕಿಸ್ತಾನ ತಂಡದ ಜೊತೆ, ಪಂದ್ಯಾವಳಿಯ 4 ಕಿ. ಮೀ. ವಿಭಾಗದಲ್ಲಿ ಸ್ಪರ್ಧಿಸಲಿದೆ. ಅಲ್ಲಿ, ಜಶನ್ ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲಬಹುದಾಗಿದೆ.
ತಂಡದ ವಿಭಾಗದಲ್ಲಿ ಕಂಚು: ಮಹಿಳೆಯರ ತಂಡಗಳ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ, ದೆವೊರಾ, ಎನ್. ಗೀತುರಾಣಿ ಹಾಗೂ ಬಿಂದ್ಯಲಕ್ಷ್ಮಿ ದೇವಿ ಅವರುಳ್ಳ ಭಾರತ ತಂಡ, ಖ್ಯಾತ ಸೈಕ್ಲಿಸ್ಟ್ ಯೆಕಾಟೇರಿನಾ ಅವರುಳ್ಳ ಕಜಕಿಸ್ತಾನ ಮಹಿಳೆಯರ ತಂಡವನ್ನು ಸೋಲಿಸಿದ ಭಾರತ ತಂಡ ಕಂಚು ಗೆದ್ದಿದೆ. ನಿಗದಿತ ದೂರವನ್ನು 5: 18.925 ಅವಧಿಯಲ್ಲಿ ಕ್ರಮಿಸಿದ ಭಾರತ ತಂಡ ಕಂಚು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಅಮರ್‌ಜೀತ್, ಅಲಾನ್ ಕ್ವಾರ್ಟರ್ ಫೈನಲ್‌ಗೆ
ಭಾರತದ ಸೈಕ್ಲಿಸ್ಟ್‌ಗಳಾದ ಅಮರ್‌ಜೀತ್ ಹಾಗೂ ಅಲಾನ್ ಬೇಬಿ 200 ಮೀ. ಸ್ಪ್ರಿಂಟ್ (ಎಲೈಟ್) ಹಾಗೂ ಜೂನಿಯರ್ ವಿಭಾಗದ ಸ್ಪರ್ಧೆಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನೀರಸ ಪ್ರದರ್ಶನ: ಶುಕ್ರವಾರದ ಸ್ಪರ್ಧೆಗಳಲ್ಲಿ ಭಾರತ ನೀರಸ ಪ್ರದರ್ಶನದಿಂದ ದಿನವನ್ನು ಆರಂಭಿಸಿತ್ತು. ಬೆಳಗ್ಗೆ ನಡೆದಿದ್ದ ಪುರುಷರ 4 ಕಿ.ಮೀ. ದೂರದ ರೇಸ್‌ನಲ್ಲಿ, ಶಾಬಾಜ್ ಸಿಂಗ್, ಹರ್‌ಪ್ರೀತ್ ಸಿಂಗ್, ಅಮಿತ್ ಕುಮಾರ್ ಹಾಗೂ ದೀಪಕ್ ಕುಮಾರ್ ಅವರಿದ್ದ ಭಾರತ ತಂಡ ಏಳನೇ ಸ್ಥಾನ ಪಡೆಯಿತು. ಮಹಿಳೆಯರ 4 ಕಿ.ಮೀ. ರೇಸ್‌ನಲ್ಲೂ, ಮಹಿತಾ ಮೋಹನ್, ಸುನಿತಾ ದೇವಿ, ರೇಖಾ ರಾಣಿ ಹಾಗೂ ಅಂಜನಾ ಎಂ.ಎಸ್. ಅವರಿದ್ದ ಭಾರತ ತಂಡ ಏಳನೇ ಸ್ಥಾನ ಪಡೆಯಿತು. ಈ ಎರಡೂ ಸ್ಪರ್ಧೆಗಳ ನಂತರ ನಡೆದ 30 ಕಿ.ಮೀ. ಪಾಯಿಂಟ್ ರೇಸ್‌ನಲ್ಲಿ, ಭಾರತದ ಅತುಲ್ ಕುಮಾರ್ ಅವರು 30ನೇ ಲ್ಯಾಪ್‌ನಲ್ಲೇ ಸ್ಪರ್ಧೆಯಿಂದ ಆಚೆ ಸರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.