ಕ್ರೀಡೆ

ದನಿಶ್ ಪಡೆಗೆ ಆಸೀಸ್ ಭೀತಿ

Published On :

ಐಪೋ: ಯುವ ಆಟಗಾರರಿಂದ ಕೂಡಿರುವ ಭಾರತ ಹಾಕಿ ತಂಡಕ್ಕೆ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ. ಪಂದ್ಯಾವಳಿಯಲ್ಲಿ ಶನಿವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಐದು ಬಾರಿ ಆಜ್ಲಾನ್ ಶಾ ಪ್ರಶಸ್ತಿ ಗೆದ್ದಿರುವ ಭಾರತ ತಂಡಗಳು ಪಂದ್ಯದಲ್ಲಿ ಪರಸ್ಪರ ಎದುರಾಗುತ್ತಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಭಾರತದ ಮುಖ್ಯ ತರಬೇತುದಾರ ಮೈಕೆಲ್ ನಾಬ್ಸ್ ಉತ್ತಮ ತರಬೇತಿ ಪಡೆದ ತಂಡದೊಂದಿಗೆ ಇಲ್ಲಿಗೆ ಆಗಮಿಸಿದ್ದಾರೆ. ನಾಯಕ ಸರ್ದಾರ್ ಸಿಂಗ್ ಸೇರಿದಂತೆ ತಂಡದ ಆರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ದನಿಶ್ ಮುಜ್ತಾಬಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಉತ್ತಮ ಯುವ ತಂಡವನ್ನು ರಚಿಸುವ ಉದ್ದೇಶ ಹೊಂದಿರುವ ನಾಬ್ಸ್, ಸರ್ದಾರ್, ಎಸ್.ವಿ ಸುನಿಲ್ ಹಾಗೂ ವಿ.ಆರ್ ರಘುನಾಥ್‌ಗೆ ವಿಶ್ರಾಂತಿ ನೀಡುವ ಮೂಲಕ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ.
ಭಾರತ ಕಿರಿಯರ ಹಾಕಿ ತಂಡದ ತರಬೇತುದಾರ ಬಲ್ಜಿತ್ ಸಿಂಗ್ ಸೈನಿ ಸಹ ತಂಡದೊಂದಿಗೆ ಆಗಮಿಸಿದ್ದಾರೆ. ಹೀಗಾಗಿ ಆಜ್ಲಾನ್ ಶಾ ಕಪ್ ನಂತರ ಭವಿಷ್ಯದ ಪಂದ್ಯಾವಳಿಗಳನ್ನು ತಂಡದ ಆಡಳಿತ ಮಂಡಳಿ ಗುರಿಯಾಗಿಸಿಕೊಂಡಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಉದ್ಘಾಟನಾ ಹಾಕಿ ಇಂಡಿಯಾ ಲೀಗ್‌ನಲ್ಲಿ ಉತ್ತಮ ಸಾಧನೆ ಮಾಡಿದ ಮನ್‌ದೀಪ್ ಸಿಂಗ್, ಮಲಕ್ ಸಿಂಗ್, ಗುರ್ಜಿಂದರ್ ಸಿಂಗ್, ಗುರ್ಮೈಲ್ ಸಿಂಗ್, ಅಮಿತ್ ರೋಹಿದಾಸ್, ಪಿಟಿ ರಾವ್ ಹಾಗೂ ಸುಶಾಂತ್ ಟಿರ್ಕಿಗೆ ಈ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಅನುಭವ ದೊರಕಲಿದೆ.
'ಆಜ್ಲಾನ್ ಶಾ ಹಾಕಿ ಪಂದ್ಯಾವಳಿಗೆ ತಂಡವನ್ನು ಆಯ್ಕೆ ಮಾಡುವಾಗ ನಾವು ಕೆಲ ಉದ್ದೇಶಗಳನ್ನು ಇಟ್ಟುಕೊಂಡಿದ್ದೆವು. ಕಿರಿಯರ ವಿಶ್ವಕಪ್ ಪಂದ್ಯಾವಳಿಗೆ ಬಲಿಷ್ಠ ತಂಡವನ್ನು ಕಟ್ಟುವುದು ನಮ್ಮ ಮುಖ್ಯ ಗುರಿ. ಹೀಗಾಗಿ ಕಿರಿಯ ಆಟಗಾರರಿಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಗತ್ಯ ಅನುಭವ ಸಿಗುವಂತೆ ನೋಡಿಕೊಳ್ಳುವ ಮೂಲಕ ಇದನ್ನು ನಾವು ಸಾಧಿಸಬಹುದಾಗಿದೆ' ಎಂದಿದ್ದಾರೆ ನಾಬ್ಸ್.
'ಇನ್ನು ಕೆಲವು ಕಿರಿಯ ಆಟಗಾರರಿಗೆ ಅವಕಾಶ ನೀಡುವುದು ಭಾರತ ಹಾಕಿ ತಂಡದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಅಲ್ಲದೆ ತಂಡದಲ್ಲಿ ಇದು ಸೌಹಾರ್ದ ಸ್ಪರ್ಧೆಯ ವಾತಾವರಣವನ್ನು ನಿರ್ಮಿಸುತ್ತದೆ' ಎಂದರು.
ಪಾಕಿಸ್ತಾನದ ವಿರುದ್ಧ ತವರಿನಲ್ಲಿ ಮತ್ತು ಪಾಕ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಬಿಟ್ಟರೆ, ಆಜ್ಲಾನ್ ಶಾ ಕಪ್ ಮಾತ್ರ ಭಾರತಕ್ಕೆ ಸದ್ಯಕ್ಕಿರುವ ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ ಹಿರಿಯರು ಮತ್ತು ಕಿರಿಯ ಆಟಗಾರರು ಮಿಶ್ರಿತ ಸಮರ್ಥ ತಂಡವನ್ನು ಅಂಗಣಕ್ಕಿಳಿಸಿದೆ. ಆಸ್ಟ್ರೇಲಿಯಾ ಸಹ ಪಂದ್ಯಾವಳಿಯಲ್ಲಿ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ದೊರಕಿಸಿಕೊಟ್ಟಿರುವುದನ್ನು ಇದು ತೋರಿಸುತ್ತದೆ. ಕಳೆದ ವರ್ಷ ಪ್ರಶಸ್ತಿಯಿಂದ ವಂಚಿತವಾಗಿರುವ ಆಸ್ಟ್ರೇಲಿಯಾ ಶುಭಾರಂಭ ಮಾಡಲು ಎದುರು ನೋಡುತ್ತಿದೆ.
ಆಜ್ಲಾನ್ ಶಾ ಕಪ್‌ನ 21ನೇ ಆವೃತ್ತಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೋರಾಟದೊಂದಿಗೆ ಆರಂಭವಾಗಲಿದೆ. ನಂತರ ಭಾರತ ಮತ್ತು ಆಸೀಸ್ ನಡುವೆ ಹಾಗೂ ಆತಿಥೇಯ ಮಲೇಷ್ಯಾ ಮತ್ತು ಕೊರಿಯಾ ನಡುವೆ ಪಂದ್ಯಗಳು ನಡೆಯಲಿವೆ.
ಭಾರತ ತಂಡದ ವೇಳಾಪಟ್ಟಿ
ಮಾರ್ಚ್ 9: ಆಸ್ಟ್ರೇಲಿಯಾ ವಿರುದ್ಧ
ಮಾರ್ಚ್ 10: ಕೊರಿಯಾ ವಿರುದ್ಧ
ಮಾರ್ಚ್ 12: ಪಾಕಿಸ್ತಾನ ವಿರುದ್ಧ
ಮಾರ್ಚ್ 14: ನ್ಯೂಜಿಲೆಂಡ್ ವಿರುದ್ಧ
ಮಾರ್ಚ್ 16: ಮಲೇಷ್ಯಾ ವಿರುದ್ಧ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.