ಕ್ರೀಡೆ

ಕೊರಿಯಾಕ್ಕೂ ಭಾರತ ಶರಣು

ಕೊರಿಯಾಕ್ಕೂ ಭಾರತ ಶರಣು
Published On :

ಆಜ್ಲಾನ್ ಶಾ ಹಾಕಿ ಕಪ್: ಸತತ ಎರಡು ಸೋಲು ಕಂಡ ಮುಜ್ತಾಬಾ ಪಡೆ
ಐಪೋ (ಮಲೇಷ್ಯಾ): ತನ್ನ ಆರಂಭಿಕ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಭಾರತ, ಭಾನುವಾರ ನಡೆದ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಕೊರಿಯಾ ವಿರುದ್ಧವೂ 1-2 ಅಂತರದಲ್ಲಿ ಪರಾಭವಗೊಂಡಿತು.
ಆಸೀಸ್ ವಿರುದ್ಧದ ಪಂದ್ಯದಲ್ಲಿ ವೀರೋಚಿತ ಹೋರಾಟವನ್ನು ನೀಡಿದ ನಂತರವೂ 3-4 ಅಂತರದಲ್ಲಿ ಸೋಲು ಕಂಡಿದ್ದ ಭಾರತ ಹಾಕಿ ತಂಡ, ಕೊರಿಯಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದೆಂಬ ಭರವಸೆ ಇಡಲಾಗಿತ್ತು. ಆದರೆ, ಕೊರಿಯಾ ಆಟಗಾರರು ಭಾರತೀಯ ಹಾಕಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಕಾಂಗ್ ಮೂನ್ ಕ್ವೆಯಾನ್ ಅವರ ಸಹಾಯದಿಂದ ಕೊರಿಯಾ ತನ್ನ ಮೊದಲ ಗೋಲು ದಾಖಲಿಸಿ, ಭಾರತಕ್ಕಿಂತ 1-0 ಅಂತರವನ್ನು ಕೊರಿಯಾ ತಂಡ ಪಡೆದುಕೊಂಡಿತು.
ಆದರೆ, ದ್ವಿತೀಯಾರ್ಧದಲ್ಲಿ ಭಾರತ ತಂಡ ಉತ್ತಮ ಪ್ರತಿರೋಧ ತೋರಿತು. 39ನೇ ನಿಮಿಷದಲ್ಲಿ ಮಾಲಕ್ ಸಿಂಗ್ ಗಳಿಸಿದ ಗೋಲು, ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತ ತಂಡ, ಸಮಬಲ ಸಾಧಿಸಲು ನೆರವಾಯಿತು. ಇದು ಭಾರತದ ಅಭಿಮಾನಿಗಳಲ್ಲಿ ಭಾರತ ಪಂದ್ಯ ಗೆಲ್ಲುವುದೆಂಬ ಭರವಸೆಯನ್ನು ಮೂಡಿಸಿತ್ತು. ಪಂದ್ಯ ಮುಗಿಯುವ 10 ನಿಮಿಷಗಳ ಮುನ್ನ ಕೊರಿಯಾದ ಕ್ವಿವೊನ್ ಅವರು ಗಳಿಸಿದ ಮತ್ತೊಂದು ಗೋಲು, ಆ ತಂಡಕ್ಕೆ ಜಯವನ್ನು ತಂದುಕೊಟ್ಟಿತು.
ಪಂದ್ಯದ ಮೊದಲಾರ್ಧದಲ್ಲಿ, ಭಾರತೀಯರು ಉತ್ತಮವಾಗಿ ಆಡಿದರಾದರೂ, ಗೋಲು ಗಳಿಸುವ ಅವಕಾಶದಿಂದ ವಂಚಿತರಾದರು. ಅತ್ತ, ಕೊರಿಯಾ ತಂಡಕ್ಕೆ ಐದು ಪೆನಾಲ್ಟಿ ಕಾರ್ನರ್‌ಗಳ ಅವಕಾಶ ಲಭ್ಯವಾಯಿತು. ಆದರೆ, ಭಾರತದ ಗೋಲ್ ಕೀಪರ್ ಪಿ. ಶ್ರೀಜೇಶ್ ಅವರ ಉತ್ತಮ ಚುರುಕುತನದಿಂದ ಗೋಲುಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಆದರೆ, ಪಂದ್ಯದ 29ನೇ ನಿಮಿಷದಲ್ಲಿ ಕೊರಿಯಾಗೆ ಸಿಕ್ಕಿದ ಮೂರನೇ ಪೆನಾಲ್ಟಿ ಕಾರ್ನರ್ ಅವಕಾಶ ಆ ತಂಡಕ್ಕೆ ಮೊದಲ ಗೋಲು ತಂದುಕೊಟ್ಟಿತು.
ಇನ್ನು, ದ್ವಿತೀಯಾರ್ಧದ ಆಟದಲ್ಲಿ ಭಾರತ ತಂಡದ ಆಟ ಮೊದಲಾರ್ಧದಲ್ಲಿ ಇದ್ದಿದ್ದಕ್ಕಿಂತ ಹೆಚ್ಚು ಚುರುಕಾಗಿತ್ತು. 39ನೇ ನಿಮಿಷದಲ್ಲಿ ಮನದೀಪ್ ಸಿಂಗ್ ಅವರಿಂದ ಪಾಸ್ ಪಡೆದ ಚೆಂಡನ್ನು ಮಾಲಕ್ ಸಿಂಗ್ ಅವರು ಕೊರಿಯಾದ ಗೋಲು ಪೆಟ್ಟಿಗೆಯೊಳಗೆ ತಳ್ಳುವಲ್ಲಿ ಯಶಸ್ವಿಯಾದರು.
ಇದಾದ ನಂತರ, ಪಂದ್ಯದ 44ನೇ ನಿಮಿಷದಲ್ಲಿ ಭಾರತದ ಆಕಾಶ್‌ದೀಪ್ ಸಿಂಗ್ ಅವರಿಗೆ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ಆದರೆ, ಕೊರಿಯಾದ ಗೋಲ್‌ಕೀಪರ್ ಲೀ ಮೆಂಯಂಗ್ ಹೋ ಅವರು ಇದಕ್ಕೆ ಅವಕಾಶ ನೀಡಲಿಲ್ಲ. 48ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಗಳಿಸುವ ಸುವರ್ಣಾವಕಾಶ ಎದುರಾಗಿತ್ತು. ಆಗಲೂ, ಕೊರಿಯಾದ ಗೋಲ್ ಕೀಪರ್ ಮೆಯಂಗ್ ಅದಕ್ಕೆ ಅಡ್ಡಿಯಾದರು.
55ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಪೆನಾಲ್ಟಿ ಕಾರ್ನರ್ ಅವಕಾಶ ಲಭ್ಯವಾಯಿತು. ಆದರೆ, ರೂಪಿಂದರ್ ಸಿಂಗ್ ಪಾಲ್ ಅವರು ಗೋಲು ಗಳಿಸುವಲ್ಲಿ ವಿಫಲರಾದರು.
ಇದರಿಂದ ಭಾರತ ತಂಡ ನಿರುತ್ಸಾಹ ಹೊಂದಲಿಲ್ಲ. ತನ್ನ ಆಕ್ರಮಣಕಾರಿ ಆಟವನ್ನು ಮುಂದುವರೆಸಿತು. ಆದರೆ, ಭಾರತ ತಂಡದ ಏಕಾಗ್ರತೆ ಪಂದ್ಯದ ಅಂತಿಮ ಹಂತಕ್ಕೆ ಬಂದಾಗ ಮಾಯವಾಗಿತ್ತು. ಅವರ ಆಟದಲ್ಲಿ ಸಡಿಲತೆ ಕಾಣಿಸಿಕೊಂಡಿತು. ಇದರ ಲಾಭ ಪಡೆದ ಕೊರಿಯಾದ ಆಟಗಾರರು ಪಂದ್ಯದ 60ನೇ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕ್ವಿಯಾನ್ ಅವರು ಈ ಗೋಲು ಗಳಿಸುವ ಮೂಲಕ, ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.ಫೈನಲ್ ಅನುಮಾನ: ಈ ಪರಾಜಯದೊಂದಿಗೆ, ಭಾರತ ತಂಡ ಈ ಬಾರಿಯ ಆಜ್ಲಾನ್ ಶಾ ಪಂದ್ಯಾವಳಿಯ ಫೈನಲ್ ತಲುಪುವುದು ಅನುಮಾನವಾಗಿದೆ. ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು, ರೌಂಡ್ ರಾಬಿನ್ ಆಧಾರದ ಮೇಲೆ, ಪಂದ್ಯಗಳು ನಡೆಯುತ್ತಿರುವುದರಿಂದ ಶ್ರೇಷ್ಠ ಪ್ರದರ್ಶನ ನೀಡುವ ಮೊದಲೆರಡು ತಂಡಗಳು ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.