ಕ್ರೀಡೆ

ಆಸೀಸ್ ತಂಡದಲ್ಲಿ ತಳಮಳ

ಆಸೀಸ್ ತಂಡದಲ್ಲಿ ತಳಮಳ
Published On :

ಮೋಹಾಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ತನ್ನ ಉಪ ನಾಯಕ ಶೇನ್ ವ್ಯಾಟ್ಸನ್ ಸೇರಿದಂತೆ ಇತರ ಮೂವರು ಆಟಗಾರರಿಗೆ ಕೊಕ್ ನೀಡಿದೆ. 3ನೇ ಟೆಸ್ಟ್‌ಗೆ ತಂಡದಿಂದ ಕೈಬಿಟ್ಟ ಸುದ್ದಿ ತಿಳಿದ ತಕ್ಷಣ ಮುನಿಸಿಕೊಂಡ ವ್ಯಾಟ್ಸನ್ ಒಂದು ಗಂಟೆ ನಂತರ ತವರಿಗೆ ಮರಳಿದ್ದಾರೆ. ತವರಿಗೆ ಮರಳುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ್ ನಿವೃತ್ತಿ ಹೇಳಲು ವ್ಯಾಟ್ಸನ್ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2ರಲ್ಲಿ ಸೋತಿರುವ ಆಸ್ಟ್ರೇಲಿಯಾ, ಈಗ ಪ್ರಮುಖ ಬದಲಾವಣೆಗಳನ್ನು ಮಾಡಿರುವುದಲ್ಲಿ ತಳಮಳಉಂಟಾಗಲು ಕಾರಣವಾಗಿದೆ.
ಹೈದರಾಬಾದ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 135 ರನ್‌ಗಳ ಅಂತರದಿಂದ ಸೋತ ಹಿನ್ನೆಲೆಯಲ್ಲಿ, ವ್ಯಾಟ್ಸನ್, ವೇಗಿ ಜೇಮ್ಸ್ ಪ್ಯಾಟಿನ್ಸನ್, ಮಿಚೆಲ್ ಜಾನ್ಸನ್ ಹಾಗೂ ಬ್ಯಾಟ್ಸ್‌ಮನ್ ಉಸ್ಮಾನ್ ಖಾವಾಜಾ ಅವರನ್ನು ತಂಡದಿಂದ ಕೈಬಿಡಲಾಗಿದೆ.
ತಂಡದಿಂದ ಕೈಬಿಟ್ಟ ಸುದ್ದಿಯನ್ನು ತಿಳಿದ ತಕ್ಷಣ ವ್ಯಾಟ್ಸನ್ ಹೋಟೆಲ್ ಕೊಠಡಿ ತೆರವುಗೊಳಿಸಿ ಸಿಡ್ನಿಗೆ ತೆರಳಿದ್ದಾರೆ. ಇದು ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ಆದರೆ, ತಂಡದಿಂದ ಕೈಬಿಟ್ಟ ಕಾರಣಕ್ಕೇ ವ್ಯಾಟ್ಸನ್ ತವರಿಗೆ ಮರಳಿದ್ದಾರೆ ಎಂಬ ವದಂತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಿದೆ.
 ವ್ಯಾಟ್ಸನ್ ಪತ್ನಿ ಲೀ ಫೂರ್ಲಾಂಗ್ ಗರ್ಭವತಿಯಾಗಿದ್ದು, ತಮ್ಮ ಮೊದಲ ಕಂದನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ತವರಿಗೆ ಮರಲಿದ್ದಾರೆ ಎಂದು ಹೇಳಿದೆ. ಆದರೆ, 4ನೇ ಟೆಸ್ಟ್‌ಗೂ ಮುನ್ನ ಅವರು ಭಾರತಕ್ಕೆ ಮರಳಲಿದ್ದಾರೆ ಅಥವಾ ಇಲ್ಲ ಎಂಬುದು ಖಚಿತಪಟ್ಟಿಲ್ಲ ಎಂದು ಸಹ ಅದು ಹೇಳಿದೆ. 'ಆಟಗಾರರಿಗೆ ತಮ್ಮ ಪ್ರದರ್ಶನದಲ್ಲಿ ಚೇತರಿಸಿಕೊಳ್ಳಲು ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಲಾಗಿದೆ' ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಮಿಕಿ ಆರ್ಥರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರಣಿಯಲ್ಲಿ 0-2 ಅಂತರದಿಂದ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ಅಚ್ಚರಿಯ ತೀರ್ಮಾನ ತೆಗೆದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಗುರುವಾರದಿಂದ ಆರಂಭವಾಗಲಿದೆ.
'ಹೈದರಾಬಾದ್ ಸೋಲಿನ ನಂತರ ಇಡೀ ತಂಡಕ್ಕೆ ತುಂಬಾ ನೋವಾಗಿದೆ. ಸರಣಿಯಲ್ಲಿ ತಿರುಗೇಟು ನೀಡಲು ನಾವು ಎದುರು ನೋಡುತ್ತಿದ್ದೇವೆ. ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡಬೇಕು ಮತ್ತು ಸರಣಿಯಲ್ಲಿ ಹೇಗೆ ಮರಳಿ ಲಯ ಪಡೆದುಕೊಳ್ಳಬೇಕು ಎಂಬ ಬಗ್ಗೆ ನಮಗೆ ಅರಿವಿದೆ. ಉತ್ತಮ ಪ್ರದರ್ಶನ ಕಂಡುಕೊಳ್ಳಲು ನೀಡಲಾಗಿದ್ದ ಗಡುವನ್ನು ಮೀರಿದ ಹಿನ್ನೆಲೆಯಲ್ಲಿ ನಾಲ್ವರು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಅಲ್ಲದೆ, ಅಂತಹ ಆಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಮೂಲಕ ತಂಡದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ಅಗತ್ಯವಿತ್ತು' ಎಂದಿದ್ದಾರೆ ತಂಡದ ತರಬೇತುದಾರ ಆರ್ಥರ್.
'ಅನವಶ್ಯಕವಾಗಿ ನಾಲ್ವರೂ ಆಟಗಾರರು ನೀಡಿದ ಗಡುವಿನಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ನಾವು ತೆಗೆದುಕೊಂಡಿರುವ ಕ್ರಮದ ಬಗ್ಗೆ ನಮಗೆ ಹೆಮ್ಮೆ ಇದೆ. ಅಲ್ಲದೆ ಆಟಗಾರರ ಪ್ರದರ್ಶನದಲ್ಲಿ ಬದಲಾವಣೆ ತಂದಕೊಳ್ಳಲು ಸಾಕಷ್ಟು ಸಮಯಾವಕಾಶನ್ನೂ ನೀಡಿದ್ದೇವೆ' ಎಂದರು.
ನಿಗದಿತ ಸಮಯದಲ್ಲಿ ಚೇತರಿಸಿಕೊಳ್ಳದ ಕಾರಣ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಇದೇ ಮೊದಲ ಬಾರಿಯಾಗಿದೆ. ಇನ್ನು ಆಸೀಸ್ ತಂಡದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಗಾಯಗೊಂಡಿದ್ದು, ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಹೀಗಾಗಿ ಅವರ ಸ್ಥಾನದಲ್ಲಿ ಬ್ರಾಡ್ ಹಾಡಿನ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಮ್ಯಾಥ್ಯೂ ವೇಡ್ ಬಲಗಾಲು ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದಾರೆ. ಖಾವಾಜಾ ಅವರು ಫಿಲ್ ಹ್ಯೂಸ್ ಸ್ಥಾನವನ್ನು ತುಂಬುವ ನಿರೀಕ್ಷೆಗಳಿದ್ದವು. ಆದರೆ, ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯೂಸ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ತಂಡದಿಂದ ಕೈಬಿಡಲಾಗಿರುವ ನಾಲ್ವರು ಆಟಗಾರರಲ್ಲಿ ಮಿಚೆಲ್ ಜಾನ್ಸನ್ ಇದುವರೆಗೂ ಒಂದು ಪಂದ್ಯವನ್ನು ಸಹ ಆಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.