ಕ್ರೀಡೆ

ಸೈಕ್ಲಿಂಗ್: ದೆಬೋರಾ, ಮನೋರಮಾಗೆ ಬೆಳ್ಳಿ

Published On :

ನವದೆಹಲಿ: ಭಾರತೀಯ ಸೈಕ್ಲಿಸ್ಟ್‌ಗಳಾದ ಮನೋರಮಾ ದೇವಿ ಹಾಗೂ ದೆಬೋರಾ ಅವರು ಇಲ್ಲಿ ನಡೆಯುತ್ತಿರುವ ಹೀರೋ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಸ್ಪರ್ಧೆಗಳಲ್ಲಿ ತಲಾ ಒಂದು ಬೆಳ್ಳಿ ಪದಕ ಗಳಿಸಿದರು. ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಈವರೆಗೆ ಭಾರತದ ಶ್ರೇಷ್ಠ ಸಾಧನೆ ಇದಾಗಿದೆ.
ಕೀರನ್ ವಿಭಾಗದಲ್ಲಿ ಮನೋರಮಾ ದೇವಿ ಬೆಳ್ಳಿ ಗಳಿಸಿದರೆ, ಜೂನಿಯರ್ ಮಹಿಳಾ ಸ್ಪ್ರಿಂಟ್ ರೇಸ್ ವಿಭಾಗದಲ್ಲಿ ದೆಬೋರಾ ರಜತ ಪದಕದ ಗೌರವಕ್ಕೆ ಪಾತ್ರರಾದರು.
ಮನೋರಮಾ ಉತ್ತಮ ಪ್ರದರ್ಶನ: ಇಂದಿರಾಗಾಂಧಿ ವೆಲೋಡ್ರಮ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದ ಎಂಟು ಲ್ಯಾಪ್‌ಗಳ ಕೀರನ್ ಸ್ಪರ್ಧೆಯಲ್ಲಿ ಮನೋರಮಾ ದೇವಿ ಹಾಗೂ ದೆಬೋರಾ ಇಬ್ಬರೂ ಭಾರತವನ್ನು ಪ್ರತಿನಿಧಿಸಿದ್ದರು. ಇಬ್ಬರ ಮೇಲೂ ಪದಕ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಯನ್ನು ಮುಟ್ಟಿದ್ದು ಮನೋರಮಾ ಮಾತ್ರ.
5ನೇ ಸ್ಥಾನದಿಂದ ಸ್ಪರ್ಧೆಗಳಿದಿದ್ದ ಅವರು, ದ್ವಿತೀಯ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾದರು. ಈ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತೈಪೇನ ಯು ಶಿವೌ ಚೆಂಗ್ ಅವರಿಗಿಂತ ಕೇವಲ 0.131 ಸೆಕೆಂಡ್‌ಗಳ ಹಿನ್ನಡೆಯೊಂದಿಗೆ ಗುರಿ ಮುಟ್ಟಿದ ಮನೋರಮಾ   ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯ್ತು. ಕೊರಿಯಾದ ಯೊನ್ಹೀ ಜಾಂಗ್ ಅವರು ಕಂಚಿನ ಪದಕ ಪಡೆದರು.
ಒಟ್ಟು ಆರು ಕ್ರೀಡಾಳುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ದೆಬೋರಾ ಅವರು ಕೊನೆಯ ಸ್ಥಾನ ಪಡೆದು ನಿರಾಸೆ ತಂದರು. ಕೊರಿಯಾದ ಕ್ರೀಡಾಳುಗಳ ತೀವ್ರ ಸ್ಪರ್ಧೆಯಲ್ಲಿ ಅವರು ಹಿಂದುಳಿದರು.
ಸ್ಪ್ರಿಂಟ್‌ನಲ್ಲಿ ಬೆಳ್ಳಿ: ಸೋಮವಾರ ನಡೆದ ಜೂನಿಯರ್ ಮಹಿಳಾ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಕೊರಿಯಾದ ಯೆವೊನ್‌ಹೀ ಜಾಂಗ್ ಅವರೊಂದಿಗೆ ಸ್ಪರ್ಧಿಸಿದ್ದ ದೆಬೋರಾ ಅವರು ಚಿನ್ನ ಗೆಲ್ಲುತ್ತಾರೆಂಬ ಭರವಸೆ ಹುಸಿಯಾಯಿತು.
ಮೂರು ಲ್ಯಾಪ್‌ಗಳ ಮೊದಲ ಹೀಟ್ಸ್‌ನ ಆರಂಭದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಯೆವೊನ್‌ಹೀ ಅವರನ್ನು ಹಿಂದಿಕ್ಕಿದ್ದ ದೆಬೋರಾ ವೇಗವಾಗಿ ಗುರಿಯೆಡೆಗೆ ಕ್ಷಿಪ್ರವಾಗಿ ಸಾಗಿದ್ದರು. ಮೊದಲೆರಡು ಲ್ಯಾಪ್‌ಗಳಲ್ಲಿ ದೆಬೋರಾ ಮುನ್ನಡೆಯನ್ನು ಸಾಧಿಸಿದ್ದರು. ಆದರೆ, ಕೊನೆಯ ಲ್ಯಾಪ್‌ನಲ್ಲಿ ವೇಗವಾಗಿ ಪೆಡಲ್ ಮಾಡಿದ ಯೆವೊನ್‌ಹೀ, ದೆಬೋರಾ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಕೊನೆಯ ಘಟ್ಟದಲ್ಲಿ ದೆಬೋರಾ ಅವರನ್ನು ಕೇವಲ 0.108 ಸೆಕೆಂಡ್ ಅಂತರದಲ್ಲಿ ಹಿಂದಿಕ್ಕಿ ಯೆವೊನ್‌ಹೀ ಗುರಿ ಮುಟ್ಟಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.