ಅಭ್ಯಾಸದಲ್ಲಿ ಗಾಯಗೊಂಡ ಪೂಜಾರ
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಗಾಯಗೊಂಡಿದ್ದಾರೆ.
ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ವಿಜಯ ಸಾಧಿಸಲು ನೆರವಾಗಿದ್ದ ಪೂಜಾರ, ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಸ್ಥಳೀಯ ಬೌಲರ್ಗಳನ್ನು ಎದುರಿಸುತ್ತಿದ್ದಾಗ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಪೆಟ್ಟು ಕೊಂಚ ಹೆಚ್ಚಾಗಿದ್ದರಿಂದ ಪೂಜಾರ ಅಭ್ಯಾಸ ಬಿಟ್ಟು ನೆಟ್ನಿಂದ ಹೊರನಡೆದಿದ್ದು ಕಂಡುಬಂದಿತು. ನಂತರ ಅಲ್ಲಿಗೆ ಆಗಮಿಸಿದ ವೈದ್ಯರು ಚಿಕಿತ್ಸೆ ನೀಡಿದರು. ಚಿಕಿತ್ಸೆ ನಂತರ ಪೂಜಾರ ಅಭ್ಯಾಸದಲ್ಲಿ ತೊಡಗಲಿಲ್ಲ.
ಈ ಸಂದರ್ಭದಲ್ಲಿ ಪೂಜಾರ ನೋವಿನೊಂದಿಗೆ ಅಲ್ಲಿನ ಬೆಂಚ್ ಮೇಲೆ ಕುಳಿತುಕೊಳ್ಳುವುದು ಮತ್ತು ನಿಧಾನವಾಗಿ ನಡೆದಾಡುವುದು ಕಂಡುಬಂದಿತು. ಆದರೆ, ನೆಟ್ ಪ್ರಾಕ್ಟೀಸ್ ಮುಗಿದ ನಂತರ ಪೂಜಾರ ನಡೆದುಕೊಂಡೇ ಪೆವಿಲಿಯನ್ಗೆ ತೆರಳಿದರು.
ಆದರೆ, ಪೂಜಾರ ಅವರಿಗೆ ಗಾಯದ ಪ್ರಮಾಣ ಎಷ್ಟು ಗಂಭೀರವಾಗಿದೆ ಎಂಬುದು ಇದುವರೆಗೂ ಖಚಿತಪಟ್ಟಿಲ್ಲ.
ಎಂದಿನಂತೆ ಟೀಂ ಇಂಡಿಯಾ ಮೊಹಾಲಿಯಲ್ಲಿ ಅಭ್ಯಾಸ ನಡೆಸಿತು. ನೆಟ್ ಪ್ರಾಕ್ಟೀಸ್ಗೆ ಇಳಿಯುವ ಮುನ್ನ ತಂಡದ ಆಟಗಾರರು ಫುಟ್ಬಾಲ್ ಪಂದ್ಯವನ್ನಾಡಿದರು.
ಹಿರಿಯ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಸ್ಪಿನ್ ಬೌಲರ್ಗಳಿಗೆ ಹೆಚ್ಚು ಬ್ಯಾಟಿಂಗ್ ಮಾಡುವ ಮೂಲಕ ಅಭ್ಯಾಸ ನಡೆಸಿದರು. ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಅವರೇ ಸಚಿನ್ ಅವರಿಗೆ ಬೌಲಿಂಗ್ ಮಾಡಿದರು.
ಆಡುವ 11 ಆಟಗಾರರಲ್ಲಿ ಸ್ಥಾನ ಪಡೆಯಲು ಕಾತರದಿಂದ ಕಾಯುತ್ತಿರುವ ಶಿಖರ್ ಧವನ್ ಮತ್ತು ಅಜಿಂಕ್ಯ ರಹಾನೆ ಸಹ ಅಭ್ಯಾಸದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಈ ಇಬ್ಬರು ಬ್ಯಾಟ್ಸ್ಮನ್ಗಳು ಸಾಧ್ಯವಾದಷ್ಟು ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದರು.
ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಬ್ಯಾಟಿಂಗ್ನಲ್ಲಿ ನಿರತರಾಗಿದ್ದರು. ಇನ್ನು ಇಶಾಂತ್ ಶರ್ಮಾ ಮತ್ತು ರವಿಚಂದ್ರ ಜಡೇಜಾ ಅವರು ಧೋನಿಗೆ ಬೌಲಿಂಗ್ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

