ಸ್ವಿಸ್ ಓಪನ್: ಸೆಮಿಫೈನಲ್ಗೆ ಸೈನಾ ನೆಹ್ವಾಲ್ ಲಗ್ಗೆ

ಬಾಸೆಲ್: ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಅವರು ಈ ಬಾರಿಯ ಸ್ವಿಸ್ ಓಪನ್ನಲ್ಲಿ ಮತ್ತೊಮ್ಮೆ ಪ್ರಶಸ್ತಿಯ ಸನಿಹಕ್ಕೆ ಸಾಗಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗ ಕ್ವಾರ್ಟರ್ ಫೈನಲ್ನಲ್ಲಿ ಅವರು, ತೈಪೇನ ತ್ಸು ಯಿಂಗ್ ಅವರನ್ನು ಸೋಲಿಸಿ ಪಂದ್ಯಾವಳಿಯ ಸೆಮಿಫೈನಲ್ಗೆ ಸೈನಾ ಕಾಲಿಟ್ಟಿದ್ದಾರೆ.
ಕೇವಲ 29 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ, ಪಂದ್ಯಾವಳಿಯ 6ನೇ ಕ್ರಮಾಂಕದ ಯಿಂಗ್ ಅವರನ್ನು 21-11, 21-12 ಅಂತರದಲ್ಲಿ ಸೋಲಿಸಿ, ಉಪಾಂತ್ಯಕ್ಕೆ ಲಗ್ಗೆಯಿಟ್ಟರು.
ಶಿಕ್ಸಿಯಾನ್ ಎದುರಾಳಿ: ಪಂದ್ಯಾವಳಿಯ ನಾಲ್ಕನೇ ಶ್ರೇಯಾಂಕಿತೆ ಚೀನಾದ ಶಿಕ್ಸಿಯಾನ್ ಅವರು, ಸೆಮಿಫೈನಲ್ನಲ್ಲಿ ಸೈನಾ ನೆಹ್ವಾಲ್ ಅವರ ಎದುರಾಳಿ. ಕಳೆದ ಬಾರಿಯ ಪಂದ್ಯಾವಳಿಯ ಫೈನಲ್ನಲ್ಲಿ ಈ ಇಬ್ಬರೂ ಮುಖಾಮುಖಿಯಾಗಿದ್ದರು. ಆಗ, ಸೈನಾ ಅವರು ಶಿಕ್ಸಿಯಾನ್ ವಿರುದ್ಧ ಜಯಗಳಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಶುಕ್ರವಾರ ನಡೆದ ಸ್ವಿಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಸೈನಾ ಅವರ ಆಟ ರೋಷಾವೇಶದಿಂದ ಕೂಡಿತ್ತು. ತೀವ್ರ ಪೈಪೋಟಿಯ ಆಟ ನೀಡಿದ ಸೈನಾ ಅವರ ಮುಂದೆ ಮಂಕಾದ ಯಿಂಗ್, ಬೇಗನೇ ಪಂದ್ಯವನ್ನು ಬಿಟ್ಟುಕೊಟ್ಟರು.
ಮೊದಲ ಗೇಮ್ನ ಆರಂಭದಿಂದಲೇ ಎದುರಾಳಿ ಮೇಲೆ ಬೊಬ್ಬಿರಿದ ಸೈನಾ, ಕೆಲವೇ ನಿಮಿಷಗಳಲ್ಲಿ 10-3ರ ಮುನ್ನಡೆ ಸಾಧಿಸಿದರು. ತಾವಿನ್ನೂ ಅಂಗಣದಲ್ಲಿ ಹೊಂದಿಕೊಳ್ಳುವ ಮೊದಲ ತಮಗಿಂತ ದೊಡ್ಡ ಮುನ್ನಡೆ ಪಡೆದಿದ್ದ ಸೈನಾ ಆಟವನ್ನು ಕಟ್ಟಿಹಾಕುವಲ್ಲಿ ಸತತ ಪರಿಶ್ರಮ ವಹಿಸಿದ ಯಿಂಗ್, ತೀವ್ರವಾಗಿ ಪ್ರಯತ್ನಪಟ್ಟು ಒಂದು ಹಂತದಲ್ಲಿ ಈ ಅಂತರವನ್ನು 14-10ಕ್ಕೆ ಇಳಿಸಿದರು.
ಆದರೆ, ಸೈನಾ ಅವರು ಎದುರಾಳಿಗೆ ಪ್ರಾಬಲ್ಯ ಮೆರೆಯಲು ಅವಕಾಶವನ್ನೇ ನೀಡಲಿಲ್ಲ. ಅಂಕಗಳ ಅಂತರ ಕುಗ್ಗಿದ ಕೂಡಲೇ ಮತ್ತಷ್ಟು ಆರ್ಭಟಿಸಿದ ಅವರು, ಸತತವಾಗಿ ಐದು ನೇರ ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೇಮ್ ಅನ್ನು ಗೆದ್ದುಕೊಂಡರು.
ಎರಡನೇ ಗೇಮ್ನಲ್ಲೂ ಇಬ್ಬರ ನಡುವೆ ಇದೇ ರೀತಿಯ ಆಟ ಮುಂದುವರೆಯಿತು. ಆದರೆ, ಈ ಬಾರಿ ಗೇಮ್ನ ಆರಂಭದಿಂದಲೂ ಸೈನಾ ವಿರುದ್ಧ ಮುಗಿಬಿದ್ದ ಯಿಂಗ್, ಆರಂಭದಲ್ಲೇ ಸೈನಾರೊಂದಿಗೆ 3-3ರ ಸಮಬಲ ಸಾಧಿಸಿ, ಅವರ ವಿರುದ್ಧ ಸವಾಲಾಗಿ ನಿಲ್ಲುವ ಮುನ್ಸೂಚನೆ ನೀಡಿದರು.
ಆದರೆ, ಸೈನಾ ಇದಕ್ಕೆ ಮಣಿಯಲಿಲ್ಲ. ದ್ವಿತೀಯ ಗೇಮ್ನ ಪ್ರತಿಯೊಂದು ಹಂತದಲ್ಲೂ ಯಾವುದೇ ತಪ್ಪು ಎಸಗದಂತೆ ಎಚ್ಚರಿಕೆಯ ಆಟವಾಡಿದ ಸೈನಾ, ಯಿಂಗ್ ವಿರುದ್ಧ ಮುನ್ನಡೆ ಸಾಧಿಸುತ್ತಲೇ ಹೋದರು.
ಆದರೆ, ಯಿಂಗ್ ಅವರೂ ಸೈನಾಗೆ ಸೆಡ್ಡು ಹೊಡೆಯುತ್ತಾ ಸೇರಿಗೆ ಸವ್ವಾಸೇರು ಆಟ ಪ್ರದರ್ಶಿಸುತ್ತಾ ಸಾಗಿದರು. ಆದರೆ, ಸೈನಾ ಅವರ ಆಕ್ರಮಣಕಾರಿ ಆಟದ ಮುಂದೆ ಯಿಂಗ್ ಆಟ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.
ಒಂದು ಹಂತದಲ್ಲಿ 13-6ರ ಮುನ್ನಡೆ ಕಂಡುಕೊಂಡಿದ್ದ ಸೈನಾ, ನೋಡು ನೋಡುತ್ತಲೇ ಈ ಅಂತರವನ್ನು 20-10ಕ್ಕೆ ಕೊಂಡೊಯ್ದರು. ಅಂತಿಮವಾಗಿ, 21-12 ಅಂತರದಲ್ಲಿ ದ್ವಿತೀಯ ಗೇಮ್ ಅನ್ನೂ ಗೆದ್ದುಕೊಂಡ ಅವರು, ಪಂದ್ಯದಲ್ಲೂ ಜಯಶಾಲಿಯಾದರು. ಭಾರತದ ಇತರ ಶಟ್ಲರ್ಗಳು ಈಗಾಗಲೇ ಸ್ವಿಸ್ ಓಪನ್ನಿಂದ ಹೊರಬಂದಿದ್ದು, ಭಾರತ ಈಗ ಪ್ರಶಸ್ತಿಗಾಗಿ ಸೈನಾ ಅವರ ಮೇಲೆಯೇ ಭರವಸೆ ಇಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


