ಕ್ರೀಡೆ

ಯಾರಾಗಲಿದ್ದಾರೆ ಹೊಸ ಹೀರೋ?

ಯಾರಾಗಲಿದ್ದಾರೆ ಹೊಸ ಹೀರೋ?
Published On :

ಐಪಿಎಲ್ ಎಂದರೇ ಕೇವಲ ರೋಚಕತೆ, ಚಿಯರ್ ಗರ್ಲ್ಸ್‌ಗಳ ಕುಣಿತ, ಮನರಂಜನೆ, ತಾರೆಗಳ ಆಕರ್ಷಣೆಗಳಷ್ಟೇ ಅಲ್ಲ. ಇದರ ಜತೆಗೆ ಐಪಿಎಲ್ ಹೊಸ ದೇಶಿಯ ಪ್ರತಿಭೆಗಳನ್ನು ಹುಡುಕಿಕೊಡುವ ಪಂದ್ಯಾವಳಿಯಾಗಿದೆ.
2008ರಲ್ಲಿ ಕ್ರಿಕೆಟ್‌ಗೆ ಮನರಂಜನೆಯ ಮೂಲಕ ಹೊಸ ಸ್ವರೂಪ ನೀಡಿದ ಐಪಿಎಲ್ ಈ ಬಾರಿ ತನ್ನ ಆರನೇ ಆವೃತ್ತಿಯಲ್ಲಿ ಜನರಿಗೆ 2 ತಿಂಗಳ ಮನರಂಜನೆಯ ಪ್ಯಾಕೇಜ್ ನೀಡಲು ಸಿದ್ಧವಾಗಿದೆ. ಆರಂಭದ ಆವೃತ್ತಿಯಿಂದಲೂ ಈ ಪಂದ್ಯಾವಳಿಯಲ್ಲಿ ಎಲೆಮರೆ ಕಾಯಿಯಂತಿದ್ದ ಆಟಗಾರರು ಕೋಟ್ಯಾಂತರ ಅಭಿಮಾನಿಗಳ ಮುಂದೆ ತಮ್ಮ ಪ್ರತಿಭೆ ಮೂಲಕ ರಾತ್ರೋ ರಾತ್ರಿ ಹೀರೋಗಳಾಗಿ ಮಿಂಚಿದ್ದಾರೆ. ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಅಂತಾರಾಷ್ಟ್ರೀಯ ಆಟಗಾರರು ಹೆಚ್ಚಾಗಿ ಮಿಂಚಿದರಾದರೂ ಇವರ ನಡುವೆ ಸ್ವಪ್ನಿಲ್ ಆಸ್ನೋಡ್ಕರ್ ಹಾಗೂ ಶಿಖರ್ ಧವನ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು. ಜತೆಗೆ ಆಸೀಸ್‌ನ ಶಾನ್ ಮಾರ್ಷ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ಗಳಿಸುವ ಮೂಲಕ ಆಸೀಸ್ ರಾಷ್ಟ್ರೀಯ ತಂಡದ ಬಾಗಿಲು ತಟ್ಟಿದರು.
ಇನ್ನು ಎರಡನೇ ಆವೃತ್ತಿಯಲ್ಲಿ ಟಿ.ಸುಮನ್ ಹಾಗೂ ಬೆಂಗಳೂರಿನ ಮನಿಷ್ ಪಾಂಡೆ ತಮ್ಮ ಕೆಲವು ಅದ್ಭುತ ಪ್ರದರ್ಶನದಿಂದ ಅಭಿಮಾನಿಗಳ ಮನದಲ್ಲಿ ನೆಲೆಸಿದರು. 2010 ಆವೃತ್ತಿಯಲ್ಲಿ ಸೌರಬ್ ತಿವಾರಿ, ನಮನ್ ಓಜಾ, ಅಂಬಟಿ ರಾಯುಡು ಮುಂತಾದ ಯುವ ಆಟಗಾರರು ತಮ್ಮ ತಂಡಗಳನ್ನು ಹಲವು ಬಾರಿ ಗೆಲುವಿನ ದಡ ಸೇರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಕಳೆದೆರಡು ಆವೃತ್ತಿಯಲ್ಲಿ   ಪೌಲ್ ವೆಲ್ತಾಟಿ, ಮನ್ವಿಂದರ್ ಬಿಸ್ಲಾ, ಅಶೋಕ್ ಮನೇರಿಯಾ, ಶಿಖರ್ ಧವನ್ ಅಭಿಮಾನಿಗಳ ಹಾಗೂ ಕ್ರಿಕೆಟ್ ಪಂಡಿತರನ್ನು ಅಚ್ಚರಿ ಪಡಿಸಿದರು.
ಕಳೆದ 5 ಆವೃತ್ತಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ದಿಢೀರನೇ ಹೀರೋಗಳಾಗಿ ಮಿಂಚಿದ್ದಾರೆ. ಇನ್ನು ಐಪಿಎಲ್ 6ನೇ ಆವೃತ್ತಿಗೆ ಕ್ಷಣಗಣನೇ ಆರಂಭವಾಗಿರುವ ಹಿನ್ನಲೆಯಲ್ಲಿ ಈ ಬಾರಿ ಯಾವ ಆಟಗಾರರು ಅಭಿಮಾನಿಗಳ ಹೊಸ ಹೀರೋಗಳಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಬಾರಿ ವಿವಿಧ ಪ್ರಾಂಚೈಸಿ ತಂಡಗಳಲ್ಲಿ ಹೊಸ ಪ್ರತಿಭೆಗಳು ಆಯ್ಕೆಯಾಗಿದ್ದು, ಅವರಲ್ಲಿ ಕೆಲವರು ಈ ಬಾರಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ.
ಈ ಬಾರಿ ಪುಣೆ ತಂಡದ ಪರ್ವೇಜ್ ರಸೂಲ್, ಆರ್‌ಸಿಬಿ ತಂಡದ ಸನ್ನಿ ಸೋಹೆಲ್, ಕರುಣ್ ನಾಯರ್, ವಿಜಯ್ ಜೋಲ್, ಮಾಯಾಂಕ್ ಅಗರ್ವಾಲ್, ಚೆನೈ ಸೂಪರ್ ಕಿಂಗ್ಸ್‌ನ ಬಾಬಾ ಅಪರಾಜಿತ್, ಡೆಲ್ಲಿ ಡೇರ್‌ಡೆವಿಲ್ಸ್‌ನ ಉನ್ಮುಕ್ತ್ ಚಂದ್, ಮುಂಬೈ ಇಂಡಿಯನ್ಸ್‌ನ ಅಬು ನಚೀಮ್, ಆದಿತ್ಯ ತಾರೆ, ರಾಜಸ್ತಾನ್ ರಾಯಲ್ಸ್‌ನ ಹರ್ಮಿತ್ ಸಿಂಗ್, ಅಶೋಕ್ ಮನೇರಿಯಾ, ಸನ್‌ರೈಸರ್ರ್ಸ್‌ನ ಹನುಮ ವಿಹಾರಿ, ಬಿಪ್ಲಬ್ ಸಮಂತ್ರೆ ಈ ಬಾರಿ ಗಮನ ಸೆಳೆಯುವ ನಿರೀಕ್ಷೆಗಳಿವೆ
ಈ ಎಲ್ಲಾ ಆಟಗಾರರಲ್ಲಿ ಕೆಲವರು ರಣಜಿ ಋುತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಕೆಲವರು ಕಳೆದ ಐಪಿಎಲ್‌ನಲ್ಲಿ ಸಿಕ್ಕ ಕೆಲವೇ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈ ಬಾರಿ ಗಮನ ಸೆಳೆಯುವ ಸಾಧ್ಯತೆಗಳಿವೆ. ಇದರ ಜತೆಗೆ ಮುಂದಿನ ವರ್ಷ ಎಲ್ಲಾ ತಂಡಗಳಿಗೂ ಹೊಸ ಬಿಡ್ಡಿಂಗ್ ನಡೆಯಲಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡಿದವರು ಮುಂದಿನ ವರ್ಷ ಮಿಲಿಯನ್ ಡಾಲರ್ ಆಟಗಾರರಾಗಲಿದ್ದಾರೆ.
ಒಟ್ಟಾರೆಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ಕಂಡು ಬರುವ ಹೊಸ ಪ್ರತಿಭೆಗಳಲ್ಲಿ ಯಾರು ಹೀರೋಗಳಾಗಿ ಮೆರೆಯುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

- ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.