ಇಂದೋರ್: ದುರ್ಬಲ ಬ್ಯಾಟಿಂಗ್ ಪ್ರದರ್ಶಿಸಿದ ಆರ್. ವಿನಯ್ ಕುಮಾರ್ ನಾಯಕತ್ವದ ಕರ್ನಾಟಕ ತಂಡ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದ ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ 10 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಉತ್ತರಪ್ರದೇಶ ತಂಡ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ನಂತರ ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿ ಕೈಚೆಲ್ಲಿತು. ಉತ್ತರಪ್ರದೇಶದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಮೊಹ್ಮದ್ ಕೈಫ್ (70) ಅರ್ಧ ಶತಕ ಗಳಿಸಿ, ತಂಡದ ಮೊತ್ತ 160 ಗಡಿ ದಾಟಲು ನೆರವಾದರು. 54 ಎಸೆತಗಳನ್ನು ಎದುರಿಸಿದ ಕೈಫ್ ಮೊತ್ತದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಆರಂಭಿಕ ಆಟಗಾರ ಗೌರವ್ ತೋಮರ್ (25) ಮತ್ತು ಟಿ. ಎಂ ಶ್ರೀವಾಸ್ತವ್ (22) ಯುಪಿ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು.
ಕರ್ನಾಕಟದ ಪರ ಸ್ಟುವರ್ಟ್ ಬಿನ್ನಿ, ಆರ್. ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್ ತಲಾ 2 ವಿಕೆಟ್ ಪಡೆದರೆ, ಕೆ. ಗೌತಮ್ 1 ವಿಕೆಟ್ ಪಡೆದರು. ಇನ್ನು ಕರ್ನಾಟಕದ ಪರ ಸ್ಟುವರ್ಟ್ ಬಿನ್ನಿ (39), ಕೆ.ಎಲ್ ರಾಹುಲ್ (34) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕರುಣ್ ನಾಯರ್ (29) ಮತ್ತು ರಾಬಿನ್ ಉತ್ತಪ್ಪ (20) ಮಾತ್ರ ಎರಡಂಕಿ ದಾಟುವಲ್ಲಿ ಯಶಸ್ವಿಯಾದರು. ಯಾರೊಬ್ಬರೂ ಅರ್ಧ ಶತಕ ದಾಖಲಿಸದಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಉತ್ತರಪ್ರದೇಶದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಪ್ರವೀಣ್ ಕುಮಾರ್ ಮತ್ತು ಪ್ರಶಾಂತ್ ಗುಪ್ತಾ ತಲಾ 2 ವಿಕೆಟ್ ಪಡೆದರೆ, ಇಮ್ತಿಯಾಜ್ ಅಹ್ಮದ್ ಮತ್ತು ಆರ್.ಪಿ ಸಿಂಗ್ ತಲಾ 1 ವಿಕೆಟ್ ಪಡೆದರು. ಸೂಪರ್ ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಆಡಿರುವ ಕರ್ನಾಕಟ 1ರಲ್ಲಿ ಗೆದ್ದಿದ್ದು, ಇನ್ನೊಂದರಲ್ಲಿ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 2 ವಿಕೆಟ್ ಅಂತರದಿಂದ ಜಯ ಸಾಧಿಸಿತ್ತು. ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು, ಪಶ್ಚಿಮ ಬಂಗಾಳ ಮತ್ತು ಬರೋಡಾ ತಂಡಗಳನ್ನು ಎದುರಿಸಲಿದೆ. ಅಂತಿಮ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.