ಬೆಂಗಳೂರು: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಐಪಿಎಲ್ 6ನೇ ಆವೃತ್ತಿಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ವೇಗಿ ಜಹೀರ್ ಖಾನ್, ಗುರುವಾರ ರಾಯಲ್ ಚಾಲೆಂಜರ್ಸ್ ತಂಡದ ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಬುಧವಾರ ತಂಡವನ್ನು ಸೇರಿಕೊಂಡು ಕೋಚ್ ರೇ ಜೆನ್ನಿಂಗ್ಸ್ ಉಪಸ್ಥಿತಿಯಲ್ಲಿ ಕಠಿಣ ತಾಲೀಮು ನಡೆಸಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯ ದೈಹಿಕ ತಜ್ಞ ಆಶಿಶ್ ಕೌಶಿಕ್ ಅವರನ್ನು ಭೇಟಿ ಮಾಡಿದ ಜಹೀರ್, ತಮ್ಮ ಫಿಟ್ನೆಸ್ ಪರೀಕ್ಷೆಗೊಳಗಾದರು. ಈ ಕುರಿತು ಮಾಹಿತಿ ನೀಡಿದ ಆರ್‌ಸಿಬಿ ತಂಡದ ಅಧಿಕಾರಿಯೊಬ್ಬರು, ಇದು ಸಾಮಾನ್ಯ ಫಿಟ್ನೆಸ್ ಪರಿಕ್ಷೆಯಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಇದೇ ವೇಳೆ ತಂಡದ ಅಭ್ಯಾಸದಲ್ಲಿ ಮುರಳಿ ಕಾರ್ತಿಕ್ ಹೆಚ್ಚು ಹೊತ್ತು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು. ಇವರ ಜತೆಗೆ ಪಂಕಜ್ ಸಿಂಗ್, ವಿಜಯ್ ಜೊಲ್, ಶೆಲ್ಡನ್ ಜಾಕ್ಸನ್, ಅಭಿನವ್ ಮುಕುಂದ್, ಹರ್ಶದ್ ಪಟೇಲ್, ಅರುಣ್ ಕಾರ್ತಿಕ್, ಸೈಯದ್ ಮಹಮದ್ ಮತ್ತು ಕೆ.ಪಿ ಅಪ್ಪಣ್ಣ ಸಹ ಅಭ್ಯಾಸ ನಡೆಸಿದರು.