ಕೌಲಾಲಂಪುರ: ದೀಪಿಕಾ ಪಳ್ಳಿಕಾಲ್ ಮತ್ತು ಸೌರವ್ ಘೋಸಾಲ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಸೋಲನುಭವಿಸುವ ಮೂಲಕ ಕೌಲಾಲಂಪುರ ಓಪನ್ ಸ್ಕ್ವಾಷ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ವಿಶ್ವದ ನಂ. 15 ಪಳ್ಳಿಕಾಲ್ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ, ವಿಶ್ವದ ನಂ.1 ಆಟಗಾರ್ತಿ ಇಂಗ್ಲೆಂಡ್ನ ಜೆನ್ನಿ ಡಂಕಾಲ್ಫ್ ವಿರುದ್ಧ 9-11, 5-11, 11-6, 4-11 ಸೆಟ್ಗಳ ಅಂತರದಿಂದ ಸೋಲನುಭವಿಸಿದರು.
ಇನ್ನು ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ಘೋಸಾಲ್, ಈಜಿಪ್ಟ್ನ ಟಾರೆಕ್ ಮೋಮೆನ್ ವಿರುದ್ಧ 6-11, 11-8, 11-5, 6-11, 5-11 ಸೆಟ್ಗಳ ಅಂತರದಿಂದ ಸೋಲನುಭವಿಸಿದರು.
ದೀಪಿಕಾ ಮತ್ತು ಡಂಕಾಲ್ಫ್ ಇಬ್ಬರೂ ಆಟಗಾರ್ತಿಯರು ಪಂದ್ಯದಲ್ಲಿ ನಾಲ್ಕೂ ಮೂಲೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು, ಬಲಿಷ್ಠ ಪ್ರದರ್ಶನ ನೀಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಡಂಕಾಲ್ಫ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ನಿಕೊಲ್ ಡೇವಿಡ್ ಅವರನ್ನು ಎದುರಿಸಲಿದ್ದಾರೆ.
ಇನ್ನು ವಿಶ್ವದ ನಂ. 19 ಆಟಗಾರ ಘೋಸಾಲ್ ಪಂದ್ಯದಲ್ಲಿ ಮೊದಲು 2-1 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಅಂತಿಮವಾಗಿ ಎದುರಾಮಿ ಮೊಮೆನ್ ವಿರುದ್ಧ ಕೈಚೆಲ್ಲಿದರು.
ಮೊದಲ ಸೆಟ್ನಲ್ಲಿ ಕೈಚೆಲ್ಲಿದ ನಂತರ ಘೋಸಾಲ್ ನಂತರ ಸತತ ಎರಡು ಸೆಟ್ಗಳಲ್ಲಿ ಜಯ ಕಂಡುಕೊಂಡರು. ಆದರೆ, ನಂತರ ಸತತ ಎರಡು ಸೆಟ್ಗಳಲ್ಲಿ ಕೈಚೆಲ್ಲಿದ್ದು, ಅವರಿಗೆ ಹಿನ್ನಡೆ ಉಂಟುಮಾಡಿತು.