ದುಬೈ: ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಟಾಪ್10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತಂಡ ವಿಭಾಗದಲ್ಲಿ ಭಾರತ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ. 731 ಅಂಕಗಳನ್ನು ಹೊಂದಿರುವ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲಿದ್ದರೆ, 719 ಅಂಕಗಳನ್ನು ಹೊಂದಿರುವ ಸುರೇಶ್ ರೈನಾ 9ನೇ ಸ್ಥಾನದಲ್ಲಿದ್ದಾರೆ. 810 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ವಿಕೆಟ್ ಕೀಪರ್ ಮತ್ತು ನಾಯಕ ಬ್ರೆಂಡಾನ್ ಮೆಕಲಂ ಅಗ್ರ ಸ್ಥಾನದಲ್ಲಿದ್ದಾರೆ. ಯುವರಾಜ್ ಸಿಂಗ್ (14) ಮತ್ತು ಗೌತಮ್ ಗಂಭೀರ್ (18) ಟಾಪ್20 ಪಟ್ಟಿಯಲ್ಲಿರುವ ಭಾರತದ ಇತರ ಇಬ್ಬರು ಬ್ಯಾಟ್ಸ್ಮನ್ಗಳಾಗಿದ್ದಾರೆ. ತಂಡಗಳ ವಿಭಾಗದಲ್ಲಿ ಟಿ20 ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ಅಗ್ರ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಎರಡನೇ ಸ್ಥಾನಲ್ಲಿ ಮತ್ತು ಭಾರತ ಮೂರನೇ ಸ್ಥಾನದಲ್ಲಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಟಾಪ್20 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಬೌಲರ್ ಎನಿಸಿದ್ದಾರೆ. ವೆಸ್ಟ್ ಇಂಡೀಸ್ನ ಸುನಿಲ್ ನಾರಾಯಣ ಅಗ್ರ ಸ್ಥಾನದಲ್ಲಿದ್ದಾರೆ.