ಕ್ವಾರ್ಟರ್ ಫೈನಲ್ಗೆ ಸಿಂಧು

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು, ಮಲೇಷ್ಯಾ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಬುಧವಾರ ನಡೆದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಹಾಂಕಾಂಗ್ನ ಚೆನಾ ಜಿಯಾಯುವಾನ್ ಅವರನ್ನು 21-13, 19-21, 21-13 ಅಂತರದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಕಾಲಿಟ್ಟರು.
ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಅವರು, ಹಾಂಕಾಂಗ್ನ ಮತ್ತೊಬ್ಬ ಆಟಗಾರ್ತಿ ಚೆವುಂಗ್ ಗಾನ್ ಅವರನ್ನು ಎದುರಿಸಲಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಸಿಂಧು ಅವರು, ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರು. ಮೊದಲ ಸೆಟ್ನಲ್ಲಿ, ಎದುರಾಳಿಯ ಮೇಲೆ ಬೇಗನೇ ಪ್ರಬುದ್ಧತೆ ಸಾಧಿಸಿದ ಅವರು, ಹಂತ ಹಂತವಾಗಿ ಅಂಕಗಳನ್ನು ಪಡೆಯುತ್ತಾ ಸಾಗಿದರು. ಆದರೆ, ಚೆನಾ ಅವರೂ ಹಿಂದೆ ಬೀಳಲಿಲ್ಲ. ಅಲ್ಲಲ್ಲಿ, ಮಿಂಚಿನ ಆಟವಾಡಿದ ಅವರು, ಸಿಂಧುಗೆ ಪ್ರಬಲ ಪೈಪೋಟಿ ನೀಡಲು ಮುಂದಾದರು. ಆದರೆ, ಸಿಂಧು ಅವರ ಆಕ್ರಮಣಕಾರಿ ಹೋರಾಟದ ಎದುರು ಚೆನಾ ಅವರ ಆಟ ನಡೆಯಲಿಲ್ಲ. ಅಂತಿಮವಾಗಿ, ಮೊದಲ ಸೆಟ್ನಲ್ಲಿ ಚೆನಾ, 13-21ರ ಅಂತರದಲ್ಲಿ ಸೋಲು ಕಂಡರು.
ಮೊದಲ ಸೆಟ್ನಲ್ಲಿ ಸೋಲು ಕಂಡ ಚೆನಾ, ದ್ವಿತೀಯ ಸೆಟ್ನಲ್ಲಿ ಸಿಂಧು ವಿರುದ್ಧ ಉತ್ತಮ ಹೋರಾಟ ತೋರಿದರು. ಸಿಂಧು ಅವರು ತೀವ್ರವಾಗಿ ಪ್ರತಿರೋಧ ತೋರಿದರಾದರೂ, ಚೆನಾ ಅವರ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಈ ಸೆಟ್ನಲ್ಲಿ ಸಿಂಧು, 19-21 ಅಂತರದ ಅಲ್ಪ ಅಂತರದಲ್ಲಿ ಶರಣಾಗಬೇಕಾಯಿತು.
ಆದರೆ, ಮೂರನೇ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಸಿಂಧು, ಮೊದಲ ಸೆಟ್ನಲ್ಲಿ ಆಡಿದಂತೆಯೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಅತ್ತ, ಚೆನ್ ಅವರ ಆಟವೂ ಜೋರಾಗಿತ್ತು. ಆದರೆ, ಕೆಲವು ಹಂತಗಳಲ್ಲಿ ಚೆನಾ ಎಸಗಿದ ತಪ್ಪುಗಳ ಲಾಭ ಹಾಗೂ ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ಬೇಗಬೇಗನೇ ಅಂಕಗಳನ್ನು ಗಳಿಸಿ ಸಿಂಧು ಮುಂದೆ ಸಾಗಿದರು. ಅಂತಿಮವಾಗಿ, ಈ ಸೆಟ್ನಲ್ಲಿ ಸಿಂಧು 21-13 ಅಂತರದ ಜಯ ಕಂಡರಲ್ಲದೇ, ಪಂದ್ಯದಲ್ಲೂ ಜಯಗಳಿಸಿ, ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಮೂವರು ಪ್ರೀ-ಕ್ವಾರ್ಟರ್ಗೆ: ಬುಧವಾರ ನಡೆದ ಪುರುಷರ ವಿಭಾಗದ ಪಂದ್ಯಗಳಲ್ಲಿ ಜಯಗಳಿಸಿದ ಭಾರತದ ಮೂವರು, ಪ್ರೀ-ಕ್ವಾರ್ಟರ್ ಹಂತಕ್ಕೆ ಕಾಲಿಟ್ಟಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಆರ್.ಎಂ.ವಿ. ಗುರುಸಾಯಿದತ್, ಸಮೀರ್ ವರ್ಮಾ ಹಾಗೂ ಕೆ. ಶ್ರೀಕಾಂತ್ ಜಯಗಳಿಸಿ, ಪ್ರೀ-ಕ್ವಾರ್ಟರ್ ಹಂತಕ್ಕೆ ಲಗ್ಗೆಯಿಟ್ಟರು. ಗುರುಸಾಯಿದತ್ ಅವರು, ಮಲೇಷ್ಯಾದ ಜಿಯಾಪ್ ಚಿನ್ ಗೊಹ್ ಅವರನ್ನು 21-8, 21-9 ಅಂತರದಲ್ಲಿ ಸೋಲಿಸಿದರೆ, ವರ್ಮಾ ಅವರು, ಮಲೇಷ್ಯಾದ ವೇಯ್ ಫೆಂಗ್ ಚಾಂಗ್ ಅವರನ್ನು 21-15, 16-21, 21-19ರ ಅಂತರದಲ್ಲಿ ಪರಾಭವಗೊಳಿಸಿದರು. ಇನ್ನು, ಕೆ. ಶ್ರೀಕಾಂತ್ ಅವರು, ಥಾಯ್ಲೆಂಡ್ನ ಅವಿಹಿಂಗ್ಸ್ಯಾನನ್ ಅವರ ವಿರುದ್ಧ 21-9, 21-19 ಅಂತರದಲ್ಲಿ ಜಯಗಳಿಸಿದರು.
ತುಳಸಿ, ತನ್ವಿ, ಅರುಂಧತಿಗೆ ನಿರಾಸೆ: ಏತನ್ಮಧ್ಯೆ, ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನಿತರ ಪಂದ್ಯಗಳಲ್ಲಿ ಭಾರತದ ಆಟಗಾರ್ತಿಯರಾದ ಪಿ.ಸಿ. ತುಳಸಿ, ಅರುಂಧತಿ ಪಂಟವಾನೆ ಹಾಗೂ ತನ್ವಿ ಲಾಲ್ ಸೋಲು ಕಂಡು ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದ್ದಾರೆ. ಪಿ.ಸಿ. ತುಳಸಿ ಅವರು, ಚೀನಾದ ಯಾವೊ ಕ್ಸು ಅವರ ವಿರುದ್ಧದ ಪಂದ್ಯದಲ್ಲಿ 18-21, 5-21 ಅಂತರದಲ್ಲಿ ಸೋಲು ಕಂಡರು. ಅತ್ತ, ಮತ್ತೊಂದು ಪಂದ್ಯದಲ್ಲಿ, ಅರುಂಧತಿ ಪಂಟವಾನೆ, ಇಂಡೋನೇಷ್ಯಾದ ಮಾರಿಯಾ ಫೆಬೆ ಕುಸುಮತ್ಸುರಿ ವಿರುದ್ಧ 13-21, 21-10, 21-14 ಅಂತರದಲ್ಲಿ ಪರಾಭವ ಹೊಂದಿದರು. ತನ್ವಿ ಲಾಲ್ ಹಾಗೂ ಜಪಾನ್ನ ಇಟೊ ಕಾನಾ ನಡುವಿನ ಪಂದ್ಯದಲ್ಲಿ, ತನ್ವಿ ಅವರು, 21-8, 21-14ರ ಅಂತರದಲ್ಲಿ ಸೋಲು ಕಂಡರು.
ಪ್ರಣಯ್ಗೂ ಸೋಲು: ಅತ್ತ, ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ವರೆಗೂ ಸಾಗಿ ಭರವಸೆ ಮೂಡಿಸಿದ್ದ ಉದಯೋನ್ಮುಖ ಆಟಗಾರ ಪ್ರಣಯ್ ಅವರು ಪುರುಷರ ಸಿಂಗಲ್ಸ್ ವಿಭಾಗದ ತಮ್ಮ ದ್ವಿತೀಯ ಸುತ್ತಿನಲ್ಲಿ ಸೋಲು ಕಂಡಿದ್ದಾರೆ. ಮಂಗಳವಾರ ನಡೆಯಬೇಕಿದ್ದ ಮೊದಲ ಸುತ್ತಿನ ಪಂದ್ಯದಿಂದ ಎದುರಾಳಿ ಹಿಂದೆ ಸರಿದ ಹಿನ್ನೆಲೆಯಲ್ಲಿ, ದ್ವಿತೀಯ ಸುತ್ತಿಗೆ ವಾಕ್ -ಓವರ್ ಪಡೆದಿದ್ದ ಅವರು, ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜೈನುದ್ದೀನ್ ಇಸ್ಕಾಂದಾರ್ ಝುಲ್ಕರ್ನೇನ್ ವಿರುದ್ಧ 15-21, 21-14, 21-15ರ ಅಂತರದಲ್ಲಿ ಸೋಲು ಕಂಡರು.
ಮಿಶ್ರ ಡಬಲ್ಸ್ನಲ್ಲೂ ಸೋಲು: ಪುರುಷರ ಸಿಂಗಲ್ಸ್ ಹಾಗೂ ಮಹಿಳೆಯ ಸಿಂಗಲ್ಸ್ನ ಕೆಲ ಪಂದ್ಯಗಳಲ್ಲಿ ನಿರಾಸೆ ಕಂಡ ಭಾರತ, ಮಿಶ್ರ ಡಬಲ್ಸ್ ವಿಭಾಗದಲ್ಲೂ ಮತ್ತೊಂದು ನಿರಾಸೆ ಕಂಡಿತು. ಬುಧವಾರ ನಡೆದ ಈ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತದ ಜೋಡಿಯಾದ ಸಂಜೀತ್ ಎಸ್ ಹಾಗೂ ಜಗದೀಶ್ ಯಾದವ್, ಇಂಡೋನೇಷ್ಯಾದ ಜೋಡಿ ಹರ್ದಿ ಹರ್ದಿಯಾಂತೋ ಹಾಗೂ ಅಗ್ರಿಪಿನ್ನಾ ಪ್ರಿಮಾ ರಹಮಾಂತೊ ವಿರುದ್ಧ 21-16, 21-17 ಅಂತರದಲ್ಲಿ ಸೋಲು ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


