ನಾಕೌಟ್ಗೆ ಸೂಪರ್ ಕಿಂಗ್ಸ್

ಚೆನ್ನೈ: ಸುರೇಶ್ ರೈನಾ (ಅಜೇಯ 100) ಸೂಪರ್ ಶತಕದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 15 ರನ್ಗಳ ಅಂತರದಿಂದ ಪರಾಭವಗೊಳಿಸಿತು. ಈ ಜಯದೊಂದಿಗೆ ಸತತ 7 ಪಂದ್ಯಗಳಲ್ಲಿ ಜಯ ಸಾಧಿಸಿದ ಚೆನ್ನೈ ತಂಡ ಪಂದ್ಯಾವಳಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತ್ತು. ನಂತರ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸೋಲನುಭವಿಸಿತು.
ಆರಂಭದಲ್ಲಿ ನಿಧಾನಗತಿಯ ರನ್ ಕಲೆ ಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪಡೆ, ನಂತರ ರೈನಾ ಮತ್ತು ಅಲ್ಬೀ ಮಾರ್ಕೆಲ್ (23) ಅಂತ್ಯದಲ್ಲಿ ಸ್ಫೋಕಟ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ 180 ರನ್ಗಳ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮ ಐದು ಓವರ್ಗಳಲ್ಲಿ ಚೆನ್ನೈ ತಂಡ 70 ರನ್ ಗಳಿಸಿದ್ದು ತಂಡದ ಮೊತ್ತ ಹಿಗ್ಗಲು ಕಾರಣವಾಯಿತು. ನಂತರ ಮೊನಚಾದ ಬೌಲಿಂಗ್ ಪ್ರದರ್ಶಿಸಿದ ಚೆನ್ನೈ ಬೌಲರ್ಗಳು ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
53 ಎಸೆತಗಳನ್ನು ಎದುರಿಸಿದ ಸುರೇಶ್ ರೈನಾ ಮೊತ್ತದಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು.
ಇದರೊಂದಿಗೆ ಆಡಿದ 11 ಪಂದ್ಯಗಳಿಂದ 18 ಅಂಕಗಳೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ನಾಕೌಟ್ ಹಂತ ತಲುಪಿದ ತಂಡ ಎಂಬ ಹೆಗ್ಗಳಿಕೆಗೆ ಧೋನಿ ಪಡೆ ಪಾತ್ರವಾಯಿತು.
ಪಂಜಾಬ್ ತಂಡದ ಪರ ಶಾನ್ ಮಾರ್ಷ್ (73) ಮತ್ತು ಡೇವಿಡ್ ಮಿಲ್ಲರ್ (51) ಆಕರ್ಷಕ ಪ್ರದರ್ಶನ ನೀಡುವ ಮೂಲಕ ತಂಡವನ್ನು ಜಯದ ಹಾದಿ ಹಿಡಿಸಿದ್ದರು. ಇಬ್ಬರ ಜತೆಯಾಟದಲ್ಲಿ 4ನೇ ವಿಕೆಟ್ಗೆ 95 ರನ್ ಕಲೆ ಹಾಕಿದ್ದರು.
ಅಂತಿಮ ಓವರ್ನಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 19 ರನ್ಗಳು ಬೇಕಾಗಿತ್ತು. ಆದರೆ, ಆ ಓವರ್ನಲ್ಲಿ ಅಚ್ಚರಿ ಬೌಲಿಂಗ್ ಪ್ರದರ್ಶಿಸಿದ ಡ್ವೈನ್ ಬ್ರಾವೊ ಕೇವಲ 3 ರನ್ ನೀಡಿ 3 ವಿಕೆಟ್ ಕಬಳಿಸಿದರು. ಹೀಗಾಗಿ ಗೆಲುವಿನ ಕನಸಲ್ಲಿದ್ದ ಪಂಜಾಬ್ ಸೋಲಿಗೆ ಶರಣಾಯಿತು.
ಚೆನ್ನೈ ಪರ ಮೊನಚಾದ ಬೌಲಿಂಗ್ ಪ್ರದರ್ಶಿಸಿದ ಇನ್ನೊಬ್ಬ ಬೌಲರ್ ಮೋಹಿತ್ ಶರ್ಮಾ, ಪಂಜಾಬ್ನ ಆರಂಭಿಕರಾದ ಲೂಕ್ ಪೊಮರ್ಸ್ಬ್ಯಾಚ್ (7) ಮತ್ತು ಮಂದೀಪ್ ಸಿಂಗ್ (15) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಆ್ಯಡಂ ಗಿಲ್ಕ್ರಿಸ್ಟ್ ತಂಡದಿಂದ ಹೊರಗುಳಿಯುವ ಮೂಲಕ ಡೇವಿಡ್ ಹಸ್ಸಿ ನಾಯಕತ್ವದಲ್ಲಿ ಪಂಜಾಬ್ ಪಡೆ, ಚೆನ್ನೈ ತಂಡದ ವಿರುದ್ಧ ಆಕರ್ಷಕ ಪ್ರದರ್ಶನವನ್ನೇ ನೀಡಿತ್ತು. ಆದರೆ, ಅಂತಿಮ ಓವರ್ಗಳಲ್ಲಿ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡಿದ್ದು ತಂಡಕ್ಕೆ ಮಾರಕವಾಗಿ ಪರಿಣಮಿಸಿತು.
ರೈನಾ ಪ್ರಸಕ್ತ 6ನೇ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್ಮನ್ ಎನಿಸಿದರು. ಇದಕ್ಕೂ ಮುನ್ನ ಕ್ರಿಸ್ ಗೇಯ್ಲ್ ಮತ್ತು ಶಾನ್ ವ್ಯಾಟ್ಸನ್ ಶತಕ ದಾಖಲಿಸಿದ್ದರು.
ಸ್ಕೋರ್ ಬೋರ್ಡ್
ಚೆನ್ನೈ ಸೂಪರ್ ಕಿಂಗ್ಸ್ 186/4 (20 ಓವರ್)
ಸಾಹಾ ಸಿ ಮಾರ್ಷ್ ಬಿ ಅವಾನ 18(18), ಹಸ್ಸಿ ಸ್ಟಂಪ್ ಗುರುಕೀರ್ತ್ ಬಿ ಚಾವ್ಲಾ 35(29), ರೈನಾ ಅಜೇಯ 100(53), ಧೋನಿ ರನೌಟ್ (ಸತೀಶ್/ಗುರುಕೀರ್ತ್) 2(2), ಮಾರ್ಕೆಲ್ ಸಿ ಮಿಲ್ಲರ್ ಬಿ ಅವಾನ 23 (16), ಜಡೇಜಾ ಅಜೇಯ 5(2), ಇತರೆ 3.
ವಿಕೆಟ್ ಪತನ: 1-27, 2-82, 3-92, 4-166
ಬೌಲಿಂಗ್: ಪ್ರವಿಣ್ 4-0-38-0, ಡೇವಿಡ್ 4-0-31-0, ಅವಾನ 4-0-29-2, ಚಾವ್ಲಾ 4-0-32-1, ಗೋನಿ 2-0-29-0, ಸತೀಶ್ 2-0-26-0
ಕಿಂಗ್ಸ್ ಇಲೆವೆನ್ ಪಂಜಾಬ್ 171/6(20 ಓವರ್)
ಪೊಮರ್ಸ್ಬ್ಯಾಚ್ ಬಿ ಮೊಹಿತ್ 7 (9), ಮಂದೀಪ್ ಸಿಂಗ್ ಸಿ ರೈನಾ ಬಿ ಮೊಹಿತ್ 15(15), ಮಾರ್ಷ್ ಬಿ ಬ್ರಾವೊ 73(51), ಡೇವಿಡ್ ಸಿ ಬ್ರಾವೊ ಬಿ ಅಶ್ವಿನ್ 22(16), ಮಿಲ್ಲರ್ ಅಜೇಯ 51(26), ಗುರುಕೀರ್ತ್ ಸಿ ಹಸ್ಸಿ ಬಿ ಬ್ರಾವೊ 0(1), ಸತೀಶ್ ಎಲ್ಬಿಡಬ್ಲ್ಯೂ ಬಿ ಬ್ರಾವೊ 0(1), ಇತರೆ 3.
ವಿಕೆಟ್ ಪತನ: 1-13, 2-36, 3-73, 4-168, 5-168, 6-171
ಬೌಲಿಂಗ್: ಮಾರ್ಕೆಲ್ 4-0-20-0, ಮೊಹಿತ್ 4-0-31-2, ಅಶ್ವಿನ್ 4-0-33-1, ಮೊರಿಸ್ 3-0-31-0, ರೈನಾ 1-0-19-0, ಬ್ರಾವೊ 4-0-34-3
ಪಂದ್ಯಶ್ರೇಷ್ಠ: ಸುರೇಶ್ ರೈನಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


