ಕ್ರೀಡೆ

ರಾರಾಜಿಸುವುದೇ ರಾಜಸ್ಥಾನ್?

Published On :

ಜೈಪುರ: ಫ್ಲೇಆಫ್ ಸುತ್ತಿನ ಸನಿಹದಲ್ಲಿರುವ ರಾಹುಲ್ ದ್ರಾವಿಡ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಭಾನುವಾರ ಸೋಲಿನ ಸುಳಿಯಲ್ಲಿ ಕಂಗೆಟ್ಟಿರುವ ಪುಣೆ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡದ ವಿರುದ್ಧ 8 ವಿಕೆಟ್‌ಗಳಿಂದ ಸೋಲನುಭವಿಸಿರುವ ರಾಜಸ್ಥಾನ ತಂಡ ಮುಂಬರುವ ಪಂದ್ಯದಲ್ಲಿ ಗೆಲವು ಸಾಧಿಸುವ ಮೂಲಕ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ.
ಇನ್ನು ಪಂದ್ಯಾವಳಿಯಲ್ಲಿ ಗೆಲವಿನ ಸಿಹಿಗಿಂತ ಸೋಲಿನ ಕಹಿಯನ್ನು ಹೆಚ್ಚಾಗಿ ಸವಿದಿರುವ ಪುಣೆ ವಾರಿಯರ್ಸ್ ತಂಡ ಪ್ಲೇ ಆಫ್ ಕನಸನ್ನು ಕೈಬಿಟ್ಟಿದ್ದು, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗೌರವ ಉಳಿಸಿಕೊಳ್ಳುವ ತವಕದಲ್ಲಿದೆ. ಈ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವ ರಾಜಸ್ಥಾನ ತಂಡ ಪುಣೆ ತಂಡವನ್ನು ಎದುರಿಸುತ್ತಿದ್ದು, ಮತ್ತೇ ಜಯದ ಹಾದಿಗೆ ಮರಳಲು ಉತ್ತಮ ಅವಕಾಶ ಹೊಂದಿದೆ. ಈ ಅವಕಾಶವನ್ನು ರಾಜಸ್ಥಾನ ತಂಡ ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಲಿದೆ ಎಂಬುದು ಕಾದುನೋಡಬೇಕು.
ರಾಜಸ್ಥಾನ ತಂಡದಲ್ಲಿ ಶೇನ್ ವ್ಯಾಟ್ಸನ್, ಹಾಡ್ಜ್, ಸಂಜು ಸ್ಯಾಮ್ಸನ್, ಕೂಪರ್, ಫಾಕ್ನರ್ ತಂಡದ ಬ್ಯಾಟಿಂಗ್ ಬಲವಾದರೆ, ಸಿದ್ಧಾರ್ತ್ ತ್ರಿವೇದಿ, ಫಾಕ್ನರ್, ವ್ಯಾಟ್ಸನ್, ಚವಾಣ್ ಬೌಲಿಂಗ್ ಸಾಮರ್ಥ್ಯವಾಗಿದ್ದಾರೆ.
ಇನ್ನು ಪುಣೆ ತಂಡವನ್ನು ನೋಡುವುದಾದರೆ ಕಳೆದ ಪಂದ್ಯದಲ್ಲಿ ಉತ್ತಪ್ಪ ಉತ್ತಮ ಲಯ ಕಂಡುಕೊಂಡಿರುವುದು ತಂಡಕ್ಕೆ ಬಲ ನೀಡಿದರೆ, ಫಿಂಚ್, ಸುಮನ್, ಸ್ಮಿತ್, ಯುವರಾಜ್ ಸ್ಥಿರ ಪ್ರದರ್ಶನ ನೀಡಬೇಕು. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇವರಿಗೆ ಇತರರಿಂದ ತಕ್ಕ ಸಾಥ್ ದೊರೆತಿಲ್ಲ. ಅಲ್ಲದೇ ಅಶೋಕ್ ದಿಂಡಾ ಅತಿ ದುಬಾರಿಯಾಗಿರುವುದು ಬೌಲಿಂಗ್ ವಿಭಾಗಕ್ಕೆ ಪೆಟ್ಟು ನೀಡಿದೆ.
ಹಾಗಾಗಿ ಈ ಪಂದ್ಯದಲ್ಲಿ ರಾಜಸ್ಥಾನ ತಂಡ ಗೆಲ್ಲುವ ಫೇವರಿಟ್ ಎನಿಸಿದ್ದು, ಪುಣೆ ತಂಡದ ವಿರುದ್ಧ ಜಯ ಸಾಧಿಸಿ ಪ್ಲೇಆಫ್ ಸುತ್ತಿಗೆ ಪ್ರವೇಶಿಸಲು ರಾಜಸ್ಥಾನ ತಂಡಕ್ಕೆ ಉತ್ತಮ ಅವಕಾಶ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.