ಕ್ರೀಡೆ

ದ್ವಿತೀಯ ಸುತ್ತಿಗೆ ಭಾರತ

Published On :

ನವದೆಹಲಿ: ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮಹಿಳೆಯರ ತಂಡ ಪಂದ್ಯಾವಳಿಯ ದ್ವಿತೀಯ ಸುತ್ತನ್ನು ಪ್ರವೇಶಿಸಿದೆ. ಭಾನುವಾರ ನಡೆದ ಮೊದಲ ಸುತ್ತಿನ ಎರಡೂ ಪಂದ್ಯಗಳಲ್ಲಿ ಭಾರತದ ವನಿತೆಯರು, ಶ್ರೀಲಂಕಾ ಹಾಗೂ ಕೆನಡಾ ತಂಡಗಳನ್ನು ಸೋಲಿಸಿ, ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿದರು.
ಗ್ರೂಪ್ 'ಸಿ' ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ, ಶ್ರೀಲಂಕಾವನ್ನು 3-0 ಅಂತರದಿಂದ ಜಯ ದಾಖಲಿಸಿದ್ದ ಭಾರತ, ಕೆನಡಾ ವಿರುದ್ಧದ ಎರಡನೇ ಪಂದ್ಯದಲ್ಲೂ ಅದೇ ಅಂತರದಿಂದ ಜಯ ಸಾಧಿಸಿದರು.
ಶ್ರೀಲಂಕಾ ಹಾಗೂ ಭಾರತ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮೌಮ ದಾಸ್ ಹಾಗೂ ಇಶಾರಾ ಮದುರಂಗಿ ನಡುವೆ ಹಣಾಹಣಿ ಏರ್ಪಟ್ಟಿತು. ಮೊದಲ ಸೆಟ್‌ನಲ್ಲಿ 13-15ರ ಅಂತರದಲ್ಲಿ ಸೋಲು ಕಂಡ ಮೌಮ, ಆನಂತರ ಪುಟಿದೆದ್ದು ಎದುರಾಳಿ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾದರು. ಇದರಿಂದ ಭಾರತ, ಲಂಕಾ ಎದುರು ಆಡಬೇಕಿದ್ದ ಮೂರು ಪಂದ್ಯಗಳಲ್ಲಿ ಒಂದನ್ನು ಜಯಿಸಿ, 1-0 ಮುನ್ನಡೆಯನ್ನು ಕಂಡುಕೊಂಡಿತು.
ಆನಂತರ, ಲಂಕಾ-ಭಾರತ ಹಣಾಹಣಿಯಲ್ಲಿ ಕೆ. ಶಾಮಿನಿ ಹಾಗೂ ನುವಾನಿ ವಿಥಾಂಜೆ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನುವಾನಿ ಅವರು 11-7, 14-12, 11-8 ಅಂತರದಲ್ಲಿ ಜಯ ಸಾಧಿಸಿದರು.
ಇದರಿಂದ, ಭಾರತ 2-0ರ ಮುನ್ನಡೆ ಸಾಧಿಸಿತು.
ಭಾರತ- ಶ್ರೀಲಂಕಾ ಸರಣಿಯ ಕೊನೆಯ ಪಂದ್ಯ ನೇಹಾ ಅಗರ್ವಾಲ್ ಹಾಗೂ ರಿಡ್ಮಿ ಕರದಾನಾರಾಚ್ಚಿ ನಡುವೆ ನಡೆಯಿತು. ಈ ಪಂದ್ಯದಲ್ಲಿ, 11-4, 11-6, 11-5 ಅಂತರದಲ್ಲಿ ನೇಹಾ ಜಯ ಸಾಧಿಸಿದರು. ಇದರಿಂದ, ಭಾರತ ಮಹಿಳೆಯರ ತಂಡ, ಲಂಕಾ ವಿರುದ್ಧದ ಪಂದ್ಯಗಳಲ್ಲಿ 3-0 ಅಂತರದ ಜಯ ಸಾಧಿಸಿತು.
ಕೆನಡಾ ವಿರುದ್ಧ ಹಣಾಹಣಿ: ಇನ್ನು, ಕೆನಡಾ ವಿರುದ್ಧದ ಹಣಾಹಣಿಯಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳು ಮಾತ್ರ ನಡೆದವು. ಈ ಎರಡೂ ಪಂದ್ಯಗಳಲ್ಲಿ ಭಾರತೀಯರೇ ಜಯ ಸಾಧಿಸಿದ್ದರು. ಮೂರನೇ ಪಂದ್ಯದಲ್ಲಿ ಎದುರಾಳಿ ಆಟಗಾರ್ತಿ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಆತಿಥೇಯ ತಂಡವಾದ ಭಾರತದ ಆಟಗಾರ್ತಿಗೆ ವಾಕ್-ಓವರ್ ಸಿಕ್ಕಿತು.
ಕೆನಡಾ- ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಕೆ. ಶಾಮಿನಿ ಹಾಗೂ ಯೆನ್ ಸರಾ ಸೆಣೆಸಿದರು. ಈ ಪಂದ್ಯದಲ್ಲಿ ಶಾಮಿನಿ ಅವರು ಸರಾ ವಿರುದ್ಧ 11-5, 11-5, 11-7 ಅಂತರದಲ್ಲಿ ಜಯ ಸಾಧಿಸಿದರು.
ಇನ್ನು, ದ್ವಿತೀಯ ಪಂದ್ಯದಲ್ಲಿ ಮೌಮ ಅವರು ಫು ಅವರ ವಿರುದ್ಧ ಕಣಕ್ಕಿಳಿದರು. ಈ ಪಂದ್ಯದಲ್ಲಿ ಮೌಮ ಅವರು  ಜಯ ಸಾಧಿಸಿದರು.

ಪುರುಷರ ತಂಡವೂ ದ್ವಿತೀಯ ಸುತ್ತಿಗೆ

ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಪುರುಷರ ತಂಡ, ಮೊದಲ ಸುತ್ತಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸಿ, ಪುರುಷರ ವಿಭಾಗದ ದ್ವಿತೀಯ ಸುತ್ತಿಗೆ ಕಾಲಿಟ್ಟಿದೆ.
ಆಸೀಸ್ ವಿರುದ್ಧ ಜಯ: ಮೊದಲ ಪಂದ್ಯದಲ್ಲಿ ಭಾರತದ ಅಂತೋನಿ ಅಮೃತ್‌ರಾಜ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ಪೊವೆಲ್ ಸೆಣೆಸಿದರು. ಈ ಪಂದ್ಯದಲ್ಲಿ ಅಂತೋನಿ ಅಮೃತ್‌ರಾಜ್ ಅವರು 11-7, 11-8, 11-8 ಅಂತರದ ಜಯ ಸಾಧಿಸಿದರು. ಆನಂತರದ ಪಂದ್ಯದಲ್ಲಿ ಅಜಂತ ಶರತ್ ಕಮಲ್ ಹಾಗೂ ಕನೆ ಟೌನ್‌ಸೆಂಡ್ ನಡುವೆ ಕದನ ನಡೆಯಿತು. ಈ ಪಂದ್ಯದಲ್ಲಿ ಅಜಂತ ಶರತ್ ಕಮಲ್ ಜಯ ಸಾಧಿಸುವ ಮೂಲಕ ಭಾರತಕ್ಕೆ 2-0ಯ ಮುನ್ನಡೆಯನ್ನು ತಂದುಕೊಟ್ಟರು. ಮೂರನೇ ಪಂದ್ಯದಲ್ಲಿ ಸೌಮ್ಯಜಿತ್ ಘೋಷ್ ಅವರು ಪೊವೆಲ್ ವಿರುದ್ಧ ಜಯ ಸಾಧಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಜಯ: ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದ ಭಾರತದ ಆಟಗಾರರು, ಆನಂತರ, ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲವು ಸಾಧಿಸಿದರು. ಮೊದಲ ಪಂದ್ಯದಲ್ಲಿ ಅಮಲ್‌ರಾಜ್ ಅವರು, ಲ್ಯೂಕ್ ಅಬ್ರಹಾಮ್ ಅವರ ವಿರುದ್ಧ ಗೆಲವು ಸಾಧಿಸಿದರೆ, ಘೋಷ್ ಅವರು, ಕಾಗಿಲ್ ಅವರ ವಿರುದ್ಧ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ಶರತ್ ಅವರೂ ಗೆಲವಿನ ನಗುಬೀರಿದರು. ಇದರಿಂದ, ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ತಂಡ, 3-0 ಅಂತರದಲ್ಲಿ ಗೆಲವು ಸಾಧಿಸಿ, ಪಂದ್ಯಾವಳಿಯ ದ್ವಿತೀಯ ಸುತ್ತಿಗೆ ಕಾಲಿಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.