ಗಂಭೀರ್ ಪಡೆಗೆ ಮುಂಬೈ ಸವಾಲು
ಮುಂಬೈ: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಕರ್ಷಕ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಇದುವರೆಗೂ ತವರಿನಲ್ಲಿ ಅಂಗಣದಲ್ಲಿ 5ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ಎದುರಾಳಿ ಕೋಲ್ಕತಾ ತಂಡದಲ್ಲಿ ಇನ್ನಷ್ಟು ಆತಂಕ ಉಂಟುಮಾಡಿದೆ. ಈಗಾಗಲೇ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಮುಂಬೈ ಈ ಪಂದ್ಯದಲ್ಲೂ ಗೆದ್ದು ಇನ್ನಷ್ಟು ಮೇಲಕ್ಕೇರುವ ಕಾತರದಲ್ಲಿದೆ. ಆದರೆ, ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಜಯ ಸಾಧಿಸಿರುವ ಕೋಲ್ಕತಾ ತಂಡ ಸಹ ಜಯದ ತಡಕಾಟದಲ್ಲಿದೆ.
ಉಭಯ ತಂಡಗಳ ಬಲಾಬಲವನ್ನು ಪರೀಕ್ಷಿಸಿ ನೋಡಿದಾಗ, ಕೋಲ್ಕತಾಕ್ಕೆ ಪಂದ್ಯದಲ್ಲಿ ದೊಡ್ಡ ಸವಾಲು ಉಂಟಾಗಲಿದೆ. ಆದರೆ, ಕಳೆದ ವರ್ಷ ಇಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿದ್ದ ಕೋಲ್ಕತಾ ಜಯದ ಆಸೆಯನ್ನು ಇಟ್ಟುಕೊಂಡಿದೆ.
ನಾಯಕ ಗಂಭೀರ್ ಮಾತ್ರ ಇದುವರೆಗೂ ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, ಅವರೊಂದಿಗೆ ಜಾಕ್ ಕಾಲಿಸ್ ಕೊಂಚಮಟ್ಟಿಗೆ ತಕ್ಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇನ್ನೊಂದೆಡೆ ಮುಂಬೈ ತಂಡದ ಪರ ಸ್ಟಾರ್ ಬ್ಟಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಯಾರೂ ಅಮೋಘ ಬಾಟಿಂಗ್ ಪ್ರದರ್ಶಿಸಿಲ್ಲ. ಸಚಿನ್ ವೆಸ್ಟ್ ಇಂಡೀಸ್ನ ಡ್ವೇನ್ ಸ್ಮಿತ್ ಜತೆ ಆರಂಭಿಕರಾಗಿ ಅಂಗಣಕ್ಕಿಳಿಯುತ್ತಿದ್ದಾರೆ. ಪಾಂಟಿಂಗ್ ಬದಲಾಗಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಬ್ಟಾಟಿಂಗ್ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಹಾಗೂ ಲಂಕಾದ ಲಸಿತ್ ಮಾಲಿಂಗ್ ಅವರೊಂದಿಗೆ ಮುಂಬೈ ತಂಡ ಬೌಲಿಂಗ್ ವಿಭಾಗ ಸಹ ಆಕರ್ಷಕವಾಗಿದೆ.
ಶಾರೂಖ್ ವಿವಾದ: ಪಂದ್ಯಕ್ಕೂ ಮುನ್ನ ಕುತೂಹಲ ಕೆರಳಿಸಿರುವ ವಿಷಯವೆಂದರೆ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಶಾರೂಖ್ ಮೇಲೆ ನಿಷೇಧ ಹೇರಿರುವುದು. ಎಂಸಿಎ ಅಧಿಕಾರಿಗಳು ಶಾರೂಖ್ ಮೇಲಿನ ನಿಷೇಧ ತೆಗೆದು ಹಾಕಿಲ್ಲ. ಅವರು ಮೈದಾನ ಪ್ರವೇಶಿಸುವಂತಿಲ್ಲ ಎಂದು ಹೇಳಿಕೊಂಡಿವೆ. ನಾನು ಎಂಸಿಎ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಬಾರದಿತ್ತು. ಆದರೆ, ಈಗ ಮೈದಾನ ಪ್ರವೇಶಿಸಿದರೆ, ಅವರು ನನ್ನನ್ನೇನು ಶೂಟ್ ಮಾಡುವರೇ? ಎಂದು ಶಾರುಖ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

