ಪ್ಲೇ... PAUSE

ಚುಟುಕು ಕ್ರಿಕೆಟ್ ಅಂದರೆ ಹಾಗೆ. ಎಲ್ಲವೂ ಇನ್‌ಸ್ಟೆಂಟ್ ಕಾಫಿ ತರ. ಕ್ಷಣಾರ್ಧದಲ್ಲಿ ಕಂಡು ಕೇಳರಿಯದ ಆಟಗಾರನೊಬ್ಬ ಹೀರೋ ಆಗಿ ಮೆರೆದಿರುತ್ತಾನೆ. ಮರುದಿನವೇ ಮೂಲೆಗುಂಪಾಗುತ್ತಾನೆ. ಇಲ್ಲ ಕುಂಟುತ್ತಾ ತೆವಳುತ್ತಾ ತನ್ನ ಅಸ್ತಿತ್ವ ಸಾಬೀತುಪಡಿಸಲು ಒದ್ದಾಡುತ್ತಿರುತ್ತಾನೆ.
ಕ್ರಿಸ್ ಗೇಯ್ಲ್, ಡಿವಿಲಿಯರ್ಸ್, ಕಾಲಿಸ್, ಸುನಿಲ್ ನಾರಾಯಣ್, ಪೊಲಾರ್ಡ್ ಮತ್ತಿತರ ವಿದೇಶಿ ಆಟಗಾರರ ಆರ್ಭಟಗಳ ನಡುವೆಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ದೇಸಿ ಹುಡುಗರು ಅನೇಕ. ರಾಷ್ಟ್ರೀಯ ತಂಡದ ಕಾಯಂ ಆಟಗಾರರನ್ನು ಹೊರತುಪಡಿಸಿಯೂ ಆನೇಕ ಆಟಗಾರರನ್ನು ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡರು. 'ಇವ ನಮ್ಮವ' ಎಂದು ಕೇಕೆ ಹಾಕಿದರು. ಹಣ, ಜನಪ್ರಿಯತೆ ಎರಡೂ ಬೆನ್ನ ಹಿಂದೆ ಇದ್ದಿದ್ದರಿಂದ ಈ ಹುಡುಗರೂ ರಾಷ್ಟ್ರೀಯ ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಸಿಕ್ಕ ಐಪಿಎಲ್ ಅವಕಾಶಗಳಲ್ಲೇ ಮಿಂಚಿದರು. ಒಂದು ಬಾರಿ ಮಿಂಚಿದ ಆಟಗಾರನ ಮೇಲೆ ಸಹಜವಾಗಿಯೇ ನಿರೀಕ್ಷೆಗಳೂ ಹೆಚ್ಚಾಗಿರುತ್ತವೆನ್ನಿ. ಆದರೆ ಭರವಸೆ ಮೂಡಿಸಿದ ಕೆಲವು ಆಟಗಾರರು ಅತಿಯಾದ ಒತ್ತಡವೋ ಅಥವಾ ಇನ್ನಿತರ ಕಾರಣವೋ ಅಂತೂ ಸ್ಥಿರತೆ ಕಾಪಾಡಲು ಒದ್ದಾಡುತ್ತಿದ್ದಾರೆ.
ಮನ್ಪ್ರೀತ್ ಗೋನಿ
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿಯ ಬಲಗೈ ಬಂಟನಂತಿದ್ದ ಪಂಜಾಬ್‌ನ ಬಲಗೈ ಮಧ್ಯಮ ವೇಗಿ ಆ ವರ್ಷ ರಾಷ್ಟ್ರೀಯ ತಂಡದ ಕದ ಬಲವಾಗಿ ತಟ್ಟಿದ್ದ. ದುರದೃಷ್ಟವಶಾತ್ ಈ ಆಟಗಾರನಿಗೆ ರಾಷ್ಟ್ರೀಯ ತಂಡದಲ್ಲೂ ಜಾಗ ಸಿಗಲಿಲ್ಲ. ನಂತರದ ದಿನಗಳಲ್ಲಿ ಕಂಡ ವೈಫಲ್ಯದಿಂದಾಗಿ ಚೆನ್ನೈ ತಂಡದಿಂದ ಕಿಂಗ್ಸ್ ಇಲೆವೆನ್ ತಂಡಕ್ಕೆ ಹಾರಬೇಕಾದ ಪ್ರಸಂಗ ಎದುರಾಯಿತು. ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ 9 ವಿಕೆಟ್ ಗಳಿಸಿದ್ದರೂ ಎದುರಾಳಿ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿಲ್ಲ.
ಪಾಲ್ ವಾಲ್ತಾಟಿ
2011ರ ಆವೃತ್ತಿವರೆಗೂ ಕಿಂಗ್ಸ್ ಇಲೆವೆನ್ ತಂಡದಲ್ಲಿ ಇಂಥ ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಇದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಆ ಬಾರಿ ಮಿಂಚಿನ ಶತಕ ಬಾರಿಸಿದ್ದ ಆಗ್ರ ಕ್ರಮಾಂಕದ ದಾಂಡಿಗ ಕಳೆದ ವರ್ಷ ಫಾರ್ಮ್ ಕಂಡುಕೊಳ್ಳಲು ಒದ್ದಾಡಿದ. ಇತ್ತೀಚಿನ 8 ಪಂದ್ಯಗಳಲ್ಲಿ ಈತ ಕ್ರಮವಾಗಿ ಗಳಿಸಿದ 13, 1, 0, 8, 6, 2, 6 ರನ್‌ಗಳೇ ಈತನ ವೈಫಲ್ಯವನ್ನು ಸಾರುತ್ತವೆ. ಕಿಂಗ್ಸ್ ಇಲೆವೆನ್ ಅಗ್ರ ಆಲ್ರೌಂಡರ್ ಪರ್ವಿಂದರ್ ಆವಾನಾ, ಪಿಯೂಷ್ ಚಾವ್ಲಾ ಅವರದ್ದೂ ಇದೇ ಕಥೆ.
ಯೂಸುಫ್ ಪಠಾಣ್
ಪ್ರಥಮ ಐಪಿಎಲ್‌ನಲ್ಲಿ ರಾಜಸ್ಥಾನಕ್ಕೆ ವಿಜಯಮಾಲೆ ತೊಡಿಸಿದ್ದ ಸ್ಫೋಟಕ ದಾಂಡಿಗ ಯೂಸುಫ್ ಪಠಾಣ್ ನಿರಂತರವಾಗಿ ಉತ್ತಮ ಆಟ ಪ್ರದರ್ಶಿಸುವಲ್ಲಿ ಎಡವುತ್ತಿದ್ದಾರೆ. ಈ ಬಾರಿ ಕ್ರಮವಾಗಿ 0, 27, 3, 13, 25, 19, 0, 3, 20, 49 ರನ್ ಹೊಡೆದಿರುವ ಹಿರಿಯ ಪಠಾಣ ಸಾಹೇಬರು ಎಂದಿದ್ದರೂ ಬೌಲರ್‌ಗಳಿಗೆ ಸಿಂಹಸ್ವಪ್ನವೇ ಸರಿ.
ಮನ್ವಿಂದರ್ ಬಿಸ್ಲಾ
ಕಳೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಹೀರೋ ಆಗಿ ಕಂಗೊಳಿಸಿದ್ದ ಮನ್ವಿಂದರ್ ಬಿಸ್ಲಾ ಕೆಲವೊಂದು ಪಂದ್ಯಗಳಲ್ಲಿ ಮಿಂಚಿದ್ದಾರೆ. ಹರ್ಯಾಣ ಮೂಲದ ಈ ವಿಕೆಟ್ ಕೀಪರ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರಾದರೂ ಕೋಲ್ಕತಾ ನೈಟ್‌ರೈಡರ್ಸ್‌ಗೆ ಗೆಲವು ತಂದುಕೊಡುವಲ್ಲಿ ಸೋಲುತ್ತಿದ್ದಾರೆ. ಈ ಬಾರಿ ಕ್ರಮವಾಗಿ 4, 1, 1, 28, 0, 51, 12, 4, 29 ರನ್ ಬಾರಿಸಿರುವ ಬಿಸ್ಲಾ ಉಳಿದಿರುವ ಪಂದ್ಯಗಳಲ್ಲಿ ಗಂಭೀರ್‌ಗೆ ಸಾಥ್ ನೀಡುವುರೊಂದಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಾರಾ? ಗೊತ್ತಿಲ್ಲ. ಕೋಲ್ಕತಾ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಕೂಡಾ ಅಭಿಮಾನಿಗಳಿಗ ನಿರಾಸೆ ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು.
ಅಜಿತ್ ಚಾಂಡಿಲ
ಕಳೆದ ವರ್ಷ ರಾಹುಲ್ ದ್ರಾವಿಡ್ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಿ ಗೋಚರಿಸಿದ್ದ ರಾಜಸ್ಥಾನ್ ರಾಯಲ್ಸ್‌ನ ಅಜಿತ್ ಆಡಿರುವ 10 ಪಂದ್ಯಗಳಲ್ಲಿ 9 ವಿಕೆಟ್ ಗಳಿಸಿದ್ದರೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.
ಶಾಬಾಜ್ ನದೀಂ
ಡೆಲ್ಲಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಜಾರ್ಖಂಡ್‌ನ ಚಾಣಾಕ್ಷ ಸ್ಪಿನ್ನರ್ ಎಂಥ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿ ಹಾಕುವಷ್ಟು ಸಮರ್ಥ. ಈವರೆಗೆ ಪಂದ್ಯಗಳಿಂದ 7 ವಿಕೆಟ್ ಗಳಿಸಿರುವ ನದೀಂ ಎದುರಾಳಿಯ ರನ್ ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸತತ ಪಂದ್ಯಗಳನ್ನು ಸೋಲುತ್ತಿರುವ ಡೆಲ್ಲಿ ತಂಡ ನದೀಂನಿಂದ ಮತ್ತಷ್ಟು ಆಟವನ್ನು ಬಯಸುತ್ತಿದೆ.
-ಗಣೇಶ್ ಪ್ರಸಾದ್ ಕುಂಬ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


