ಡೆವಿಲ್ಸ್ಗೆ ಆರ್ಸಿಬಿ ಬೃಹತ್ ಸವಾಲು
ದೆಹಲಿ: ವಿರಾಟ್ ಕೊಹ್ಲಿ (99) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಡೇರ್ಡೆವಿಲ್ಸ್ಗೆ 184 ರನ್ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಆರ್ಸಿಬಿ ನಿಗದಿತ ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 183 ರನ್ ಕಲೆ ಹಾಕಿತು.
58 ಎಸೆತಗಳನ್ನು ಎದುರಿಸಿದ ಕೊಹ್ಲಿ ಮೊತ್ತದಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. ಇನಿಂಗ್ಸ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ರನೌಟ್ ಆದ ಕೊಹ್ಲಿ ಕೇವಲ 1 ರನ್ನಿಂದ ಶತಕ ವಂಚಿತರಾದರು. ಆರಂಭಿಕರ ವೈಫಲ್ಯದ ನಂತರ ನಿಧಾನಗತಿಯ ಇನಿಂಗ್ಸ್ ಕಟ್ಟಿದ ಕೊಹ್ಲಿ, ಅಂತ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟುವಂತೆ ನೋಡಿಕೊಂಡರು.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಡೆಲ್ಲಿ ಡೇರ್ಡೆವಿಲ್ಸ್ ಇನಿಂಗ್ಸ್ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಅಂಣಕ್ಕಿಳಿದ ಚೇತೇಶ್ವರ ಪೂಜಾರ (17) ಮತ್ತು ಕ್ರಿಸ್ ಗೇಯ್ಲ್ (4) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾದರು. ಆರ್ಸಿಬಿಯ ಭರವಸೆ ಬ್ಯಾಟ್ಸ್ಮನ್ ಗೇಯ್ಲ್ 2ನೇ ಓವರ್ನ ಅಂತಿಮ ಎಸೆತದಲ್ಲಿ ಇರ್ಫಾನ್ ಪಠಾಣ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ನಂತರ ಬಂದ ವಿರಾಟ್ ಕೊಹ್ಲಿಯೊಂದಿಗೆ ಹೊಂದಿಕೊಂಡು ಆಡುತ್ತಿದ್ದ ಪೂಜಾರ್ ಸಹ 5ನೇ ಓವರ್ನಲ್ಲಿ ಸಿದ್ದಾರ್ಥ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದು ಆರ್ಸಿಬಿ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ತಂದಿತು.
ಪೂಜಾರ್ ವಿಕೆಟ್ ಒಪ್ಪಿಸಿದ ನಂತರ ಬಂದ ಮೊಯ್ಸಿಸ್ ಹೆನ್ರೀಕೆಸ್ (26) ಅವರೊಂದಿಗೆ ಕೊಹ್ಲಿ ತಕ್ಕ ಜತೆಯಾಟ ಪ್ರದರ್ಶಿಸುತ್ತಿದರು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್ಗೆ 57 ರನ್ಗಳನ್ನು ಕಲೆ ಹಾಕಿದರು. 14ನೇ ಓವರ್ನಲ್ಲಿ ಶಭಾಜ್ ನದೀಂ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿದ ಹೆನ್ರಿಕೇಸ್ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಆರ್ಸಿಬಿ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕವಿತ್ತು.
ಆದರೆ, ನಂತರ ಬಂದ ಡಿವಿಲಿಯರ್ಸ್ (32), ಕೊಹ್ಲಿ ಜತೆ ಸೇರಿ ಅದ್ಭುತ ಜತೆಯಾಟ ಪ್ರದರ್ಶಿಸಿದರು. ಇಬ್ಬರ ಮುರಿಯದ ಜತೆಯಾಟದಲ್ಲಿ 94 ರನ್ ಕಲೆ ಹಾಕಿದರು. ಇದು ತಂಡ ಬೃಹತ್ ಮೊತ್ತ ಪೇರಿಸಲು ನೆರವಾಯಿತು. 17 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು.
ಈ ಇಬ್ಬರು ಬ್ಯಾಟ್ಸ್ಮನ್ಗಳು ಕೊನೆಯ 5 ಓವರ್ಗಳಲ್ಲಿ 84 ರನ್ ಕಲೆ ಹಾಕಿದರು. ಡೆಲ್ಲಿ ಡೇರ್ಡೆವಿಲ್ಸ್ ಪರ ಇರ್ಫಾನ್ ಪಠಾಣ್, ಸಿದ್ದಾರ್ಥ್ ಕೌಲ್ ಹಾಗೂ ಶಭಾಜ್ ನದೀಂ ತಲಾ ಒಂದು ವಿಕೆಟ್ ಕಬಳಿಸಿದರು.
ಸ್ಕೋರ್ ಬೋರ್ಡ್
ಆರ್ಸಿಬಿ 183/4 (20 ಓವರ್)
ಪೂಜಾರ ಬೌಲ್ಡ್ ಕೌಲ್ 17 (17), ಗೇಯ್ಲ್ 4 (7), ಕೊಹ್ಲಿ ರನೌಟ್ ರೋಹ್ರರ್/ಜಾಧವ್ 99 (58), ಹೆನ್ರೀಕೆಸ್ ಸಿ ಮತ್ತು ಬಿ ನದೀಂ 26 (22), ಡಿವಿಲಿಯರ್ಸ್ 32 (17), ಇತರೆ 5.ವಿಕೆಟ್ ಪತನ: 1-6, 2-32, 3-89, 183/4.ಬೌಲಿಂಗ್: ಮಾರ್ಕೆಲ್ 4-0-35-0, ಪಠಾಣ್ 4-0-24-1, ಕೌಲ್ 4-0-36-1, ಯಾದವ್ 4-0-65-0, ನದೀಂ 4-0-23-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

