ಕ್ರೀಡೆ

ರಾಜಸ್ಥಾನ ರಾಯಲ್ಸ್‌ಗೆ ಕಿಂಗ್ಸ್ ಸೆಡ್ಡು

Published On :

ಜೈಪುರ: ಈ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೆಣೆಸಾಡಲಿದೆ.
ಎರಡೂ ತಂಡಗಳು ತಲಾ 13 ಪಂದ್ಯಗಳನ್ನಾಡಿದ್ದು, ಚೆನ್ನೈ ತಂಡ 10ರಲ್ಲಿ ಜಯ ಸಾಧಿಸಿದರೆ ರಾಜಸ್ಥಾನ ತಂಡ 9 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಹಾಗಾಗಿ ಈ ಪಂದ್ಯ ಎರಡು ಮದಗಜಗಳ ಹೋರಾಟ ಎಂದೇ ಪರಿಗಣಿಸಬಹುದಾಗಿದೆ.
ಈ ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನದಿಂದ ಕೂಡಿದ್ದು, ತಮ್ಮದೇ ಆದ ತಂತ್ರಗಾರಿಕೆಯಿಂದ ಯಶಸ್ಸು ಕಂಡಿವೆ.
ಇತ್ತಂಡಗಳ ಆಟಗಾರರ ಬಲಾಬಲವನ್ನು ನೋಡುವುದಾದರೆ. ಚೆನ್ನೈ ತಂಡದಲ್ಲಿ ಮೈಕ್ ಹಸ್ಸಿ ಹಾಗೂ ಸುರೇಶ್ ರೈನಾ ಅವರ ಬ್ಯಾಟಿಂಗ್ ಫಾರ್ಮ್ ಎದುರಾಳಿ ಬೌಲಿಂಗ್ ಪಡೆಗೆ ದೊಡ್ಡ ಸವಾಲಾಗಿದೆ. ಒಂದು ವೇಳೆ ರಾಜಸ್ಥಾನ ಈ ಎರಡೂ ಬ್ಯಾಟ್ಸ್‌ಮನ್‌ಗಳ ವಿಕೆಟ್ ಬೇಗನೆ ಪಡೆದರೂ, ನಂತರ ಬದ್ರಿನಾಥ್, ನಾಯಕ ಧೋನಿ, ಬ್ರಾವೊ, ಜಡೇಜಾರಂತಹ ಆಟಗಾರರನ್ನು ಹೊಂದಿದೆ.
ಇನ್ನು ರಾಜಸ್ಥಾನ ತಂಡದಲ್ಲಿ ಅಜಿಕ್ಯ ರಹಾನೆ ಹಾಗೂ ರಾಹುಲ್ ದ್ರಾವಿಡ್ ಅವರ ಆರಂಭಿಕ ಜೋಡಿ ಯಶಸ್ವಿಯಾಗುತ್ತಿದ್ದು, ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮನಸೆಳೆಯುವ ಆಟ ಪ್ರದರ್ಶಿಸುತ್ತಿದ್ದಾರೆ. ಇನ್ನು ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್ ಹಾಗೂ ಕೆವಿನ್ ಕೂಪರ್ ಸ್ಫೋಟಕವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಚೆನ್ನೈ ತಂಡದಲ್ಲಿ ಮೋಹಿತ್ ಶರ್ಮಾ ಆರಂಭದಲ್ಲೇ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ನೀಡುತ್ತಿದ್ದು, ಮಧ್ಯಮ ಓವರ್‌ಗಳಲ್ಲಿ ಬ್ರಾವೊ, ಜಡೇಜಾ, ಅಶ್ವಿನ್ ಉತ್ತಮವಾಗಿ ರನ್ ನಿಯಂತ್ರಿಸುತ್ತಿದ್ದಾರೆ.
ರಾಜಸ್ಥಾನ ತಂಡದ ಪರ ಸಿದ್ಧಾರ್ಥ್ ತ್ರಿವೇದಿ, ವ್ಯಾಟ್ಸನ್, ಫಾಕ್ನರ್, ಚಂಡಿಲಾ, ಕೂಪರ್ ಸಂಘಟಿತ ದಾಳಿ ನಡೆಸುತ್ತಿದ್ದಾರೆ. ಇದುವರೆಗೂ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಜಸ್ಥಾನ ತಂಡ ತವರಿನಲ್ಲಿ ಇದು ಕೊನೆ ಪಂದ್ಯವಾಗಿದ್ದು, ತವರಿನಲ್ಲಿನ ತಮ್ಮ ಅಭಿಯಾನವನ್ನು ಗೆಲವಿನ ಮೂಲಕ ಅಂತ್ಯಗೊಳಿಸುವ ಲೆಕ್ಕಾಚರದಲ್ಲಿದೆ. ಇತ್ತ ಚೆನ್ನೈ ತಂಡ ಅಂಕಪಟ್ಟಿಯಲ್ಲಿರುವ ಪ್ರಬಲ ತಂಡದ ವಿರುದ್ಧ ಜಯಗಳಿಸಿ ತಮ್ಮ ಸಾಮರ್ಥ್ಯವನ್ನು ಮತ್ತೇ ಸಾಬೀತುಪಡಿಸಲು ಎದುರು ನೋಡುತ್ತಿದೆ.ಒಟ್ಟಾರೆಯಾಗಿ ಈ ಎರಡೂ ತಂಡಗಳು ಸಂಘಟಿತ ಪ್ರದರ್ಶನ ತೋರುತ್ತಿದ್ದು, ಈ ಪಂದ್ಯದಲ್ಲಿ ಯಾವ ರೀತಿ ಸೆಣೆಸಾಡಲಿದೆ ಎಂಬುದನ್ನು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.