ಅಂಜಪರವಂಡ ಮಡಿಲಿಗೆ ಪ್ರತಿಷ್ಠಿತ ಮಾದಂಡ ಕಪ್
ಗೋಣಿಕೊಪ್ಪಲು: ಸತತ ಹ್ಯಾಟ್ರಿಕ್ ಸಾಧನೆಯೊಂದಿಗೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ಪಳಂಗಂಡ ತಂಡವನ್ನು ಸೋಲಿಸಿ, 2-0 ಗೋಲುಗಳ ಅಂತರದಿಂದ ಅಂಜಪರವಂಡ ತಂಡವು ಈ ಬಾರಿಯ ಪ್ರತಿಷ್ಠಿತ ಮಾದಂಡ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮನೆಯಪಂಡ ಕಪ್, ಮಚ್ಚಾಮಾಡ ಕಪ್, ಐಚೆಟ್ಟಿರ ಕಪ್ ಪ್ರಶಸ್ತಿ ಗೆದ್ದಿದ್ದ ಪಳಂಗಂಡ ತಂಡವು ಮಾದಂಡ ಹಾಕಿ ಕಪ್ ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ, ಮಾಜಿ ಒಲಂಪಿಯನ್, ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ.ಎ.ಬಿ. ಸುಬ್ಬಯ್ಯ ಅಂಜಪರವಂಡ ಪರ ಹೊಡೆದ ಅದ್ಭುತ ಗೋಲಿನಿಂದ ತಮ್ಮ ಎಂದಿನ ನೈಪುಣ್ಯತೆ ಮೆರೆದರು.
1 ಲಕ್ಷ ನಗದು, ಟ್ರೋಫಿ: ಮೈದಾನದ ಬಹುತೇಕ ಕ್ರೀಡಾಭಿಮಾನಿಗಳ ಬೆಂಬಲದೊಂದಿಗೆ ಅಂಜಪರವಂಡ ಮುನ್ನಡೆ ಆಟಗಾರರು ಪಳಂಗಂಡ 'ಡಿ' ಆವರಣದೊಳಗೆ ಸತತ ದಾಳಿ ಸಂಘಟಿಸುವ ಮೂಲಕ 2-0 ಅಂತರದಿಂದ ವಿಜಯಶಾಲಿಯಾಗಿ 1 ಲಕ್ಷ ನಗದು ಹಾಗೂ ಟ್ರೋಫಿ ಗೆದ್ದು ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು.
ಅಂಜಪರವಂಡ ಅಭಿನ್ ಚಿಟ್ಟಿಯಪ್ಪ, ರೋಷನ್ ಮಾದಪ್ಪ, ದೀಪಕ್, ಕಾರ್ಯಪ್ಪ ಅವರ ಭದ್ರಕೋಟೆಯನ್ನು ಭೇದಿಸಿ ಗೋಲು ಹೊಡೆಯಲು ಪಳಂಗಂಡ ಸ್ಟಾರ್ ಆಟಗಾರ ಅಮರ್ ಅಯ್ಯಮ್ಮ, ಅಜಯ್ ಅಯ್ಯಪ್ಪ ಅವರಿಗೆ ಅಸಾಧ್ಯವಾಯಿತು. ಒಟ್ಟು 7 ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಗೋಲಿ ಸುಬ್ಬಯ್ಯ ಅವರು ಕಲ್ಲು ಬಂಡೆಯಂತೆ ಚೆಂಡನ್ನು ತಡೆದು 'ಡಿ' ಆವರಣದ ಹೊರಕ್ಕೆ ಅಟ್ಟುತ್ತಿರುವಂತೆ ಮೈದಾನದೆಲ್ಲೆಡೆ ಚಪ್ಪಾಳೆ, ಶಿಳ್ಳೆ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಪಂದ್ಯದ 12ನೇ ನಿಮಿಷ ಅಂಜಪರವಂಡ ಅಭಿನ್ ಚಿಟ್ಟಿಯಪ್ಪ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಹೊಡೆದರು. ಇದಾದ ನಂತರ, ಸೋಲರಿಯದ- ದಣಿವರಿಯದ ಪಳಂಗಂಡ ತಂಡವು ಎದುರಾಳಿಗೆ ಗೋಲು ಹೊಡೆದು ಪಂದ್ಯವನ್ನು ಸಮನಾಗಿಸಲು ಸತತ ಪ್ರಯತ್ನ ಮಾಡಿದರೂ, ಅಂಜಪರವಂಡ ಆಟಗಾರರು ಚಾಕಚಕ್ಯತೆಯಿಂದ ಚೆಂಡನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಳ್ಳುತ್ತಿದ್ದರು.
64ನೇ ನಿಮಿಷ ಮತ್ತೊಂದು ಗೋಲು: ಆಟ ಮುಂದುವರಿದು, ಅಂಜಪರವಂಡ ಮತ್ತೊಂದು ಗೋಲು ದಾಖಲಿಸಲು 64ನೇ ನಿಮಿಷದವರೆಗೂ ಕಾಯಬೇಕಾಯಿತು. ಅಂಜಪರವಂಡ ರೋಷನ್ ಮಾದಪ್ಪ 64ನೇ ನಿಮಿಷ ಫೀಲ್ಡ್ ಗೋಲು ಹೊಡೆದು ತಂಡಕ್ಕೆ 2-0 ಮುನ್ನಡೆ ಸಾಧಿಸಿದರು. ಅಂಜಪರವಂಡ ತಂಡಕ್ಕೆ ಒಟ್ಟು 3 ಪೆನಾಲ್ಟಿ ಕಾರ್ನರ್ ಲಭ್ಯವಾಯಿತು.
2008ರಲ್ಲಿ ಅಳಮೇಂಗಡ ಕಪ್ ಗೆದ್ದಿದ್ದ ಅಂಜಪರವಂಡ ತಂಡ ಇದೀಗ ದ್ವಿತೀಯ ಬಾರಿಗೆ ಮಾದಂಡ ಕಪ್ ಪ್ರಶಸ್ತಿಯನ್ನು ಗೆದ್ದು ಸಾಧನೆ ಮಾಡಿತು.
ಎರಡೂ ತಂಡಗಳಿಗೆ ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ, ಮೀಡಿಯಾ ಯುನೈಟೆಡ್ನ ಚೇರಂಡ ಕಿಶನ್, ಟಾಟಾ ಕಾಫಿ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಎ.ಎಂ. ಚಿಟ್ಟಿಯಪ್ಪ, ಮಾದಂಡ ಕಪ್ ಹಾಕಿ ಪಂದ್ಯಾವಳಿ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ ವಿತರಿಸಿದರು.
- ಟಿ.ಎಲ್.ಶ್ರೀನಿವಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

