ಜಾರ್ಖಂಡ್ ತಂಡ ಮಣಿಸಿದ ಕರ್ನಾಟಕ
ಬೆಂಗಳೂರು: ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಕರ್ನಾಟಕ ತಂಡ 3-1 ಗೋಲುಗಳ ಅಂತರದಿಂದ ಜಯಗಳಿಸಿತು.
ಎರಡೂ ತಂಡಗಳು ಪರಸ್ಪರ ತೀವ್ರ ಹಣಾಹಣಿ ನಡೆಸಿದ್ದರಿಂದಾಗಿ, ಪಂದ್ಯ ಆರಂಭದಿಂದಲೂ ಪೈಪೋಟಿಯಿಂದ ಕೂಡಿತ್ತು. ಪಂದ್ಯದ 21ನೇ ನಿಮಿಷದಲ್ಲಿ ಕರ್ನಾಟಕದ ನಾಯಕ ದೀಪಕ್ ಬೆಜವಾಡ್ ಅವರು ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಕರ್ನಾಟಕ ಗೋಲು ದಾಖಲಿಸಿದ ಕೆಲವೇ ನಿಮಿಷಗಳಲ್ಲಿ, ಜಾರ್ಖಂಡ್ ತಂಡವೂ ಗೋಲು ದಾಖಲಿಸುವ ಮೂಲಕ, ಪಂದ್ಯದಲ್ಲಿ ಸಮಬಲ ಸಾಧಿಸಿತು. ಈ ಗೋಲು ಗಳಿಸಿಕೊಟ್ಟದ್ದು, ದೀಪಕ್ ಸೊರಂಗ್.
ಮೊದಲಾರ್ಧ ಮುಗಿಯುವವರೆಗೂ ಇತ್ತಂಡಗಳಿಂದ ಇತರ ಯಾವುದೇ ಗೋಲು ದಾಖಲಾಗದ ಕಾರಣ, ಮೊದಲಾರ್ಧ 1-1ರ ಸಮಬಲದಲ್ಲೇ ಮುಕ್ತಾಯವಾಯಿತು.
ಇನ್ನು, ದ್ವಿತೀಯಾರ್ಧದಲ್ಲಿ, ಕರ್ನಾಟಕ ತಂಡ, ಜಾರ್ಖಂಡ್ ವಿರುದ್ಧ ಉತ್ತಮ ಆಟವನ್ನು ಪ್ರದರ್ಶಿಸಿತು. ಪ್ರತೀ ಹಂತದಲ್ಲೂ ಆಕ್ರಮಣಕಾರಿ ಆಟವನ್ನು ಆಡಿದ ಕರ್ನಾಟಕದ ಹುಡುಗರು, ಎದುರಾಳಿಗಳ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.
ಪಂದ್ಯದ 36ನೇ ನಿಮಿಷದಲ್ಲಿ ಕರ್ನಾಟಕದ ಎನ್.ಎಸ್. ರಾಜೇಶ್ ಅವರು, ಗೋಲು ಗಳಿಸುವ ಮೂಲಕ, ಕರ್ನಾಟಕಕ್ಕೆ 2-1 ಅಂತರದ ಮುನ್ನಡೆಯನ್ನು ತಂದರು.
ಇದಾದ ನಂತರ, ಪಂದ್ಯದ 40ನೇ ನಿಮಿಷದಲ್ಲಿ, ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಕರ್ನಾಟಕಕ್ಕೆ ಲಭ್ಯವಾಯಿತು.
ಈ ಪೆನಾಲ್ಟಿ ಕಾರ್ನರ್ ಜವಾಬ್ದಾರಿ ಹೊತ್ತ ನಾಯಕ ದೀಪಕ್ ಬೆಜವಾಡ್, ಗೋಲು ಗಳಿಸುವಲ್ಲಿ ಯಶಸ್ವಿಯಾದರು.
ಇದರಿಂದಾಗಿ, ಕರ್ನಾಟಕ 3-1ರ ಮುನ್ನಡೆಯನ್ನು ಕಂಡುಕೊಂಡಿತು.
ಅತ್ತ, ಕರ್ನಾಟಕದ ಆಟದೆದುರು ಮುಂಕಾದಂತೆ ಕಂಡ ಜಾರ್ಖಂಡ್ ಪರವಾಗಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲಿ ಎರಡು ಗೋಲುಗಳನ್ನು ಗಳಿಸಿದ ನಂತರ, ಪಂದ್ಯದ ಅಂತ್ಯದವರೆಗೂ 3-1ರ ಅಂತರವನ್ನೇ ಕರ್ನಾಟಕ ತಂಡ ಕಾಪಾಡಿಕೊಂಡು ಬಂದಿತು.
ಅಂತಿಮವಾಗಿ, ಕರ್ನಾಟಕ ತಂಡ 3-1 ಅಂತರದಲ್ಲಿ ಜಯಗಳಿಸಿತು.
ಕರ್ನಾಟಕ ತನ್ನ ಮುಂದಿನ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಬುಧವಾರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

