ಕ್ರೀಡೆ

ಆರ್‌ಸಿಬಿ ಪ್ಲೇ ಆಫ್ ಹಾದಿ ದುರ್ಗಮ

Published On :

ಬೆಂಗಳೂರು: ಗಿಲ್‌ಕ್ರಿಸ್ಟ್ (ಅಜೇಯ 85) ಅದ್ಭುತ ಬ್ಯಾಟಿಂಗ್ ನೆರವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 174 ರನ್‌ಗಳಿಗೆ ಕಟ್ಟಿ ಹಾಕಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಕೇವಲ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸಿ ಜಯದ ಕೇಕೆ ಹಾಕಿತು.

ಒಂದೇ ಧಾಟಿಯಲ್ಲಿ ಆಡಿದ ತಂಡಗಳು: ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಚೇತೇಶ್ವರ ಪೂಜಾರ್ ವಿಕೆಟ್ ಕಳೆದುಕೊಂಡ ನಂತರ ಬಂದ ವಿರಾಟ್ ಕೊಹ್ಲಿ, ಗೇಯ್ಲ್ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್ ಕಟ್ಟಿದರು. ಪಂಜಾಬ್ ಇನಿಂಗ್ಸ್‌ನಲ್ಲೂ ಇದು ಪುನರಾವರ್ತನೆಯಾಯಿತು. ಆದರೆ, ಶ್ಯಾನ್ ಮಾರ್ಸ್ ವಿಕೆಟ್ ಕಳೆದುಕೊಂಡ ನಂತರ ಬಂದ ಅಜರ್ ಮೆಹ್ಮೂದ್, ಗಿಲ್‌ಕ್ರಿಸ್ಟ್ ಜತೆ ಆಕರ್ಷಕ ಇನಿಂಗ್ಸ್ ಕಟ್ಟಿದರು. ಆದರೆ, ಗಿಲ್‌ಕ್ರಿಸ್ಟ್ ಪಂಜಾಬ್‌ಗೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಆರ್‌ಸಿಬಿ ತಂಡ ಪ್ರಸಕ್ತ ಆವೃತ್ತಿಯಲ್ಲಿ ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಮೊದಲ ಸೋಲುಂಡಿತು.

ಪ್ಲೇ ಆಫ್ ಹಾದಿ ದುರ್ಗಮ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯಾವಳಿಯಲ್ಲಿ ಇದುವರೆಗೂ ಆಡಿರುವ 15 ಪಂದ್ಯಗಳಲ್ಲಿ 8ರಲ್ಲಿ ಮಾತ್ರ ಗೆದ್ದು 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ, ಸನ್‌ರೈಸರ್ಸ್ ಹೈದರಾಬಾದ್ ಆಡಿರುವ 14 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ತಂಡಕ್ಕೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿದ್ದು, ಅವೆರಡರಲ್ಲೂ ಗೆದ್ದರೆ ಅದು ಪ್ಲೇ ಆಫ್ ಹಂತ ಪ್ರವೇಶಿಸಲಿದೆ. ಆಗ ಆರ್‌ಸಿಬಿ ಪಂದ್ಯಾವಳಿಯಿಂದ ಹೊರಬೀಳಲಿದೆ.

ಆದರೆ, ಸನ್‌ರೈಸರ್ಸ್ ಒಂದರಲ್ಲಿ ಸೋತು ಇನ್ನೊಂದರಲ್ಲಿ ಗೆದ್ದರೆ, ಆಗ ಉತ್ತಮ ರನ್‌ರೇಟ್ ಹೊಂದಿರುವ ತಂಡ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ, ಆರ್‌ಸಿಬಿ ಉಳಿದಿರುವ ಒಂದು ಪಂದ್ಯದಲ್ಲೂ ಸೋತರೆ ಅದಕ್ಕೆ ಪ್ಲೇ ಆಫ್ ಹಾದಿ ಇನ್ನಷ್ಟು ದುರ್ಗಮವಾಗಲಿದೆ.
ಗಿಲ್ಲಿ- ಅಜರ್ ಮೋಡಿ: ಗಿಲ್‌ಕ್ರಿಸ್ಟ್ ಜತೆ ಅಜರ್ ಮೆಹ್ಮೂದ್ (61) ತಕ್ಕ ಸಾಥ್ ನೀಡಿದರು. ಇಬ್ಬರ ಜತೆಯಾಟದಲ್ಲಿ 2ನೇ ವಿಕೆಟ್‌ಗೆ 118 ರನ್ ಪೇರಿಸಿದ್ದರು. ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್‌ಕ್ರಿಸ್ಟ್ ಅಚ್ಚರಿ ಮೂಡಿಸಿದರು. 54 ಎಸೆತಗಳನ್ನು ಎದುರಿಸಿದ ಗಿಲ್ಲಿ ಮೊತ್ತದಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. 41 ಎಸೆತಗಳನ್ನು ಎದುರಿಸಿದ ಮೆಹ್ಮೂದ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು.
ಆರ್‌ಸಿಬಿ ಪರ ಜಹೀರ್ ಖಾನ್, ಜಯದೇವ್ ಉನಾದ್ಕತ್ ಹಾಗೂ ಮುತ್ತಯ್ಯ ಮುರಳೀಧರನ್ ತಲಾ 1 ವಿಕೆಟ್ ಪಡೆದರು.

ಗೇಯ್ಲ್- ಕೊಹ್ಲಿ ವ್ಯರ್ಥ ಹೋರಾಟ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಕ್ರಿಸ್ ಗೇಯ್ಲ್ (77) ಮತ್ತು ವಿರಾಟ್ ಕೊಹ್ಲಿ (57) ಉತ್ತಮ ಜತೆಯಾಟ ಆಡುವ ಮೂಲಕ ತಂಡಕ್ಕೆ ಆಶ್ರಯವಾಗಿದ್ದರು. ಇಬ್ಬರ ಜತೆಯಾಟದಲ್ಲಿ 2ನೇ ವಿಕೆಟ್‌ಗೆ 136 ರನ್ ಕಲೆ ಹಾಕಿದ್ದರು. ಆದರೆ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರು ಹೀಗಾಗಿ ದೊಡ್ಡ ಮೊತ್ತದತ್ತ ಸಾಗಿದ್ದ ಆರ್‌ಸಿಬಿ 174 ರನ್‌ಗಳಿಗೆ ತೃಪ್ತಿಪಟ್ಟಿತ್ತು.
19ನೇ ಓವರ್‌ನ ಮೊದಲ ಎಸೆತ ಎದುರಿಸಲು ಮುಂದಾದ ಗೇಯ್ಲ್ ಕ್ರೀಸ್‌ನಲ್ಲಿ ಆಯತಪ್ಪಿ ಬಿದ್ದರು. ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಅದರೆ, 3ನೇ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಂತರ ಬಂದ ಎಬಿ ಡಿವಿಲಿಯರ್ಸ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆದರೆ, ನಂತರದ ಎಸೆತದಲ್ಲೇ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದರು.
ಪಂಜಾಬ್ ಪರ ಆಕರ್ಷ ಬೌಲಿಂಗ್ ಪ್ರದರ್ಶಿಸಿದ ಅವಾನಾ 3 ವಿಕೆಟ್, ಅಜರ್ ಮೆಹ್ಮೂದ್ 2 ವಿಕೆಟ್ ಪಡೆದುಕೊಂಡರು.

ಸ್ಕೋರ್ ಬೋರ್ಡ್
ಆರ್‌ಸಿಬಿ: 174/5 (20 ಓವರ್)
ಪೂಜಾರ ಸಿ ಮಿಲ್ಲರ್ ಬಿ ಅವಾನ 19(20), ಗೇಯ್ಲ್ ಬಿ ಅವಾನ 77(53), ಕೊಹ್ಲಿ ಎಲ್‌ಬಿಡಬ್ಲ್ಯೂ ಬಿ ಅಜರ್ 57(43), ಡಿವಿಲಿಯರ್ಸ್ ಬಿ ಅವಾನ 6(2), ಹೆನ್ರಿಕೇಸ್ ಅಜೇಯ 0(1), ರಾಹುಲ್ ಸಿ ಮಂದೀಪ್ ಬಿ ಅಜರ್ 8(4), ಇತರೆ 7
ವಿಕೆಟ್ ಪತನ: 1-22, 2-158, 3-164, 4-166, 5-174
ಬೌಲಿಂಗ್: ಅಜರ್ 4-0-24-2, ಸಂದೀಪ್ 4-0-36-0, ಅವಾನ 4-0-39-3, ಚಾವ್ಲಾ 4-0-27-0, ಗೋನಿ 4-0-47-0
ಕಿಂಗ್ಸ್ ಇಲೆವೆನ್ ಪಂಜಾಬ್ 176/3 (18.1 ಓವರ್)
ಗಿಲ್‌ಕ್ರಿಸ್ಟ್ ಅಜೇಯ 85(54), ಮಾರ್ಷ್ ಬಿ ಜಹೀರ್ 8(4), ಅಜರ್ ಸಿ ಡಿವಿಲಿಯರ್ಸ್ ಬಿ ಉನಾದ್ಕತ್ 61(41), ಮಿಲ್ಲರ್ ಬಿ ಮುರಳಿಧರನ್ 2(4), ಸತೀಶ್ ಅಜೇಯ 12(6), ಇತರೆ 8
ವಿಕೆಟ್ ಪತನ: 1-24, 2-142, 3-162
ಬೌಲಿಂಗ್: ಜಹೀರ್ 4-0-30-1, ಹೆನ್ರಿಕೇಸ್ 2.1-0-29-0, ಉನಾದ್ಕತ್ 4-0-34-1, ಮುರಳಿಧರನ್ 4-0-44-1, ವಿನಯ್ 4-0-35-0

ಪಂದ್ಯಶ್ರೇಷ್ಠ: ಗಿಲ್ ಕ್ರಿಸ್ಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.