ಕ್ರೀಡೆ

ಇಂದು ವಾರಿಯರ್ಸ್, ಕೆಕೆಆರ್ ಕದನ

Published On :

ರಾಂಚಿ: ಸತತ ಎರಡು ಗೆಲವಿನ ಹುಮ್ಮಸ್ಸಿನಲ್ಲಿರುವ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್‌ರೈಡರ್ಸ್ ತಂಡ, ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯ ಕೊನೆಯ ಎರಡು ಸ್ಥಾನಗಳಲ್ಲಿರುವ ಈ ಎರಡೂ ತಂಡಗಳು ಕಳೆದ ವಾರವಷ್ಟೇ ಸೆಣೆಸಿದ್ದವು. ಆಗ, ಕೆಕೆಆರ್ ಗೆಲವು ಸಾಧಿಸಿತ್ತು. ಇದೀಗ, ಎರಡನೇ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.
ಆದರೆ, ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ಈ ಎರಡೂ ತಂಡಗಳ ಪಂದ್ಯ ಅಷ್ಟಾಗಿ ಯಾವುದೇ ಪ್ರಾಮುಖ್ಯತೆ ಪಡೆದುಕೊಂಡಿಲ್ಲವಾದರೂ, (ಆಯಾ ತಂಡಗಳ ಅಭಿಮಾನಿಗಳನ್ನು ಹೊರತುಪಡಿಸಿ), ಪಂದ್ಯದ ಮುನ್ನೋಟವನ್ನು ಔಪಚಾರಿಕವಾಗಿ ಹೇಳಬೇಕಾಗಿದೆಯಷ್ಟೇ.
ಕಳೆದ  ಪಂದ್ಯದಲ್ಲಿ, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಗಳಿಸಿದ್ದ ಗೆಲುವಿನಲ್ಲಿ ಸುನಿಲ್ ನಾರಾಯಣ್ ಹಾಗೂ ಆಲ್ರೌಂಡರ್ ಜಾಕ್ ಕಾಲಿಸ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ, ಪುಣೆ ವಿರುದ್ಧದ ಪಂದ್ಯದಲ್ಲೂ ಅವರ ಮೇಲೇ ನಾಯಕ ಗಂಭೀರ ಹೆಚ್ಚಿನ ವಿಶ್ವಾಸ ಇಡಲಿದ್ದಾರೆ.
ಅತ್ತ, ಪುಣೆ ಪಾಲಿಗೆ ಈ ಪಂದ್ಯದಲ್ಲಿ ಗೆಲವು ಸಾಧಿಸುವುದು ಅಷ್ಟು ಪ್ರಮುಖವಲ್ಲದಿದ್ದರೂ, ಗೆಲವಿನೊಂದಿಗೆ ಈ ಬಾರಿಯ ಐಪಿಎಲ್‌ಗೆ ಗುಡ್‌ಬೈ ಹೇಳಲು ಅದು ನಿರೀಕ್ಷಿಸುತ್ತಿದೆ. ಈವರೆಗೆ ತಾನು ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿರುವ ಅದು, ಐಪಿಎಲ್-6ರಲ್ಲಿ ಪ್ಲೇ-ಆಫ್ ಹಂತಕ್ಕಷ್ಟೇ ತೃಪ್ತಿಪಡಬೇಕಿದೆ.
ಎಂದಿನಂತೆ, ಈ ಬಾರಿಯೂ ಪುಣೆ ತಂಡ ತನ್ನಲ್ಲಿನ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದೆ. ಈ ಎರಡೂ ತಂಡಗಳು ಮೇ 9ರಂದು ಮುಖಾಮುಖಿಯಾಗಿದ್ದಾಗ ಯುವರಾಜ್ ಸಿಂಗ್ ಉತ್ತಮವಾಗಿ ಆಡಿರಲಿಲ್ಲ. ಅಂದು ಅವರು ವೈಯಕ್ತಿಕವಾಗಿ ಗಳಿಸಿದ್ದು ಕೇವಲ ಒಂದು ರನ್. ಆದರೆ, ಈ ಬಾರಿ ಅವರು ಉತ್ತಮವಾಗಿ ಆಡಬಹುದೆಂಬ ನಿರೀಕ್ಷೆ ಅವರ ಅಭಿಮಾನಿಗಳದ್ದು. ಈ ಆವೃತ್ತಿಯಲ್ಲಿ ಇದುವರೆಗೆ ಅವರು ಆಡಿರುವ 11 ಪಂದ್ಯಗಳಲ್ಲಿ ಗಳಿಸಿರುವುದು 205 ರನ್.
ಆದರೆ, ಪುಣೆ ತಂಡಕ್ಕೆ ನಿಜಕ್ಕೂ ಆಸರೆಯಾಗಿರುವುದು ಆರಂಭಿಕ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್. ಇವರಿಬ್ಬರೊಂದಿಗೆ, ಇವರೆಗೆ ಮೂರು ಅರ್ಧ ಶತಕಗಳನ್ನು ದಾಖಲಿಸಿರುವ ಎರೋನ್ ಫಿಂಚ್ ಅವರೂ ತಂಡದ ಮತ್ತೊಬ್ಬ ಭರವಸೆ ಆಟಗಾರ.
ಆದರೆ, ಆಸೀಸ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ಬೆನ್ನುನೋವಿನ ಕಾರಣದಿಂದ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿರುವದು ತಂಡದ ಹಿನ್ನೆಡೆಯಾಗಿದೆ. ಇನ್ನು, ಪುಣೆಯ ಬೌಲಿಂಗ್ ಪಡೆ ಹೇಳಿಕೊಳ್ಳುವಂಥಾ ಯಶಸ್ಸನ್ನು ಪಡೆದಿಲ್ಲ. ವೇಗಿ ಅಶೋಕ್ ದಿಂಡಾ ಕೂಡ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿಲ್ಲ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.