ಕ್ರೀಡೆ

ಮುಂಬೈಗೆ ರಾಯಲ್ಸ್ ಎದುರಾಳಿ

Published On :

ಮುಂಬೈ: ಸನ್‌ರೈಸರ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿರುವ ಮುಂಬೈ ಇಂಡಿಯನ್ಸ್ ತಂಡ, ಬುಧವಾರ 3ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು ಈ ಎರಡೂ ತಂಡಗಳು ಅಗ್ರ 2 ಸ್ಥಾನದ ಮೇಲೆ ಕಣ್ಣಿಟ್ಟಿದೆ.
ಮುಂಬೈ, ಚೆನ್ನೈ ಹಾಗೂ ರಾಜಸ್ಥಾನ ತಂಡಗಳು ತಲಾ ಆಡಿರುವ 14 ಪಂದ್ಯಗಳಿಂದ 20 ಅಂಕಗಳನ್ನು ಗಳಿಸಿದ್ದು, ಕ್ರಮವಾಗಿ ಅಗ್ರ 3 ಸ್ಥಾನದಲ್ಲಿವೆ. ಅಲ್ಲದೆ ಈ ತಂಡಗಳ ನಡುವೆ ಅಗ್ರ 2 ಸ್ಥಾನಗಳಿಗೆ ಸ್ಫರ್ಧೆ ಏರ್ಪಟ್ಟಿದೆ.
ಪ್ಲೇ ಆಫ್ ಸುತ್ತಿನಲ್ಲಿ ಅಗ್ರ 2 ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಸೆಣೆಸಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಸಿದರೆ, ಸೋತ ತಂಡಕ್ಕೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಆಡುವ ಎರಡನೇ ಅವಕಾಶ ಸಿಗುತ್ತದೆ. ಹಾಗಾಗಿ ಈ ಮೂರೂ ತಂಡಗಳು ಅಗ್ರ 2ರಲ್ಲಿ ಸ್ಥಾನ ಗಿಟ್ಟಿಸಲು ಸೆಣೆಸಾಡಲಿವೆ.
ಈ ಕಾರಣದಿಂದಾಗಿ ಮುಂಬೈ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ಯಾರು ಗೆಲವು ಸಾಧಿಸುತ್ತಾರೊ ಅವರು ಅಗ್ರ ಎರಡರಲ್ಲಿ ಸ್ಥಾನಗಳಿಸಲಿದ್ದಾರೆ.
ಈ ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಅಭಿಮಾನಿಗಳು ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ ತಂಡದ ಬ್ಯಾಟಿಂಗ್ ಬತ್ತಳಿಕೆಯಲ್ಲಿ ಡ್ವೇನ್ ಸ್ಮಿತ್, ದಿನೇಶ್ ಕಾರ್ತಿಕ್, ಕೀರನ್ ಪೊಲಾರ್ಡ್, ರೋಹಿತ್ ಶರ್ಮಾರಂತಹ ಅಸ್ತ್ರಗಳಿವೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಆರ್ಭಟಿಸಿದ ಪೊಲಾರ್ಡ್ ಫಾರ್ಮ್‌ಗೆ ಮರಳಿರುವುದು ಮುಂಬೈ ತಂಡಕ್ಕೆ ನೂರಾನೆ ಬಲ ತಂದಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮಾಲಿಂಗಾ ಜತೆಗೆ ಮಿಚೆಲ್ ಜಾನ್ಸನ್ ಅವರ ಮಾರಕ ಸ್ವಿಂಗ್ ಬೌಲಿಂಗ್‌ಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ತತ್ತರಿಸುತ್ತಿದ್ದು, ಉಳಿದಂತೆ ಹರ್ಭಜನ್, ಪ್ರಗ್ಯಾನ್ ಓಜಾ ಸ್ಪಿನ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಸಾಂಘಿಕ ಪ್ರದರ್ಶನ ನೀಡುತ್ತಿರುವ ಮುಂಬೈ ಈ ಪಂದ್ಯವನ್ನು ತವರಿನಲ್ಲಿ ಆಡುತ್ತಿದ್ದು ತವರಿನ ಲಾಭ ಪಡೆಯಲಿದೆ.
ಇನ್ನು ತವರಿನ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಕೂಡ ಎಲ್ಲಾ ವಿಭಾಗದಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಇನ್ನಿಂಗ್ಸ್ ಆರಂಭಿಸುವ ರಹಾನೆ ಹಾಗೂ ದ್ರಾವಿಡ್ ಜೋಡಿ ಯಶಸ್ಸುಗಳಿಸಿದ್ದು, ಉಳಿದಂತೆ ವ್ಯಾಟ್ಸನ್, ಸಂಜು ಸ್ಯಾಮ್ಸನ್, ಬ್ರಾಡ್ ಹಾಡ್ಜ್, ಫಾಕ್ನರ್ ಬ್ಯಾಟಿಂಗ್ ಬಲವಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸಿದ್ಧಾರ್ತ್ ತ್ರಿವೇದಿ ಜತೆಗೆ ವ್ಯಾಟ್ಸನ್ ಹಾಗೂ ಫಾಕ್ನರ್ ವೇಗದ ಜವಾಬ್ದಾರಿಯನ್ನು ಹೊತ್ತುಕೊಂಡರೆ, ಕೂಪರ್ ಸ್ಪಿನ್ ಮೊಡಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಅಗ್ರ 2 ಸ್ಥಾನಗಳಿಗೆ ಕಣ್ಣಿಟ್ಟಿರುವ ಎರಡೂ ತಂಡಗಳು ಯಾವ ರೀತಿ ತಂತ್ರಕ್ಕೆ ಪ್ರತಿತಂತ್‌ರ ಹೆಣೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.