ಕ್ರೀಡೆ

ಸಾಧನೆಯ ಕೇರಿಯಲ್ಲಿ ಅಂಬೆಗಾಲು...

Published On :

ಬೆಂಗಳೂರು: ಆತನಲ್ಲಿರುವ ಹುಮ್ಮಸ್ಸು, ಆತ್ಮವಿಶ್ವಾಸವನ್ನು ನೀವೊಮ್ಮೆ ನೋಡಬೇಕು... ಎಂಥವರಿಗೂ ನಾವೂ ಆಡಬೇಕು, ಓಡಬೇಕು ಎಂಬ ಉತ್ಸಾಹ ಬರುತ್ತದೆ. ಅವನಲ್ಲಿನ ಕ್ರೀಡೋತ್ಸಾಹದ ಬಗ್ಗೆ ಖುಷಿಯಾಗುತ್ತದೆ. ಹೆಮ್ಮೆ ಮೂಡುತ್ತದೆ.
ನಿಮ್ಮಲ್ಲಿ ಆ ಹುಡುಗನ ಬಗ್ಗೆ ಹೀಗೆ, ಖುಷಿ, ಹೆಮ್ಮೆ ಮೂಡುವುದಕ್ಕೆ ಮತ್ತೊಂದು ಕಾರಣವಿದೆ. ಅದೇನೆಂದರೆ, ಆ ಹುಡುಗನಿಗೆ ಮಾತು ಸ್ಪಷ್ಟವಾಗಿ ಬಾರದು... ತೀವ್ರವಾಗಿ ತೊದಲುತ್ತಾನೆ. ಆತನ ಮಾತು ಎದುರಿದ್ದವರಿಗೆ ಅರ್ಥವಾಗೋದು ಕಷ್ಟ. ಅಷ್ಟೇ ಅಲ್ಲ, ಅಂಗಡಿಗೆ ಹೋಗಿ ಏನಾದರೂ ಕೊಂಡನೆಂದರೆ, ಎಷ್ಟು ದುಡ್ಡು ಕೊಡಬೇಕು... ಎಷ್ಟು ಚಿಲ್ಲರೆ ವಾಪಸ್ ಪಡೆಯಬೇಕು ಎಂಬ ಸಾಮಾನ್ಯ ಲೆಕ್ಕಾಚಾರವೂ ಆತನಿಗೆ ತಿಳಿಯದು....
ಹೌದು. ನೀವು ಅಂದುಕೊಂಡಿದ್ದು ನಿಜ. ಆ ಹುಡುಗ ಓರ್ವ ಬುದ್ಧಿಮಾಂದ್ಯ. ಹೆಸರು ಸಂತೋಷ್. ಬೆಂಗಳೂರಿನ ದಾಸರಳ್ಳಿಯವನು. ಸಾಮರ್ಥ್ಯದ ಕೊರತೆ ನಡುವೆ, ತನ್ನಲ್ಲಿನ ಕ್ರೀಡೋತ್ಸಾಹ ಮಾತ್ರದಿಂದಲೇ ಅಂತಾರಾಷ್ಟ್ರೀಯ ಮಟ್ಟವನ್ನೂ ಮುಟ್ಟಿದ್ದಾನೆ. 2011ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ವಿಶ್ವ ಸಮ್ಮರ್ ಗೇಮ್ಸ್‌ನ 3000 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದಾನೆ. ಅದೇ ಪಂದ್ಯಾವಳಿಯಲ್ಲಿ ನಡೆದಿದ್ದ ಹಾಫ್-ಮ್ಯಾರಥಾನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ. ಆ ಪಂದ್ಯಾವಳಿ ನಂತರ, ಅಥೆನ್ಸ್‌ನಲ್ಲೇ ನಡೆದಿದ್ದ ಯೂನಿಟಿ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಿದ್ದಾನೆ. ಅಷ್ಟೇ ಅಲ್ಲ, 2007ರಿಂದೀಚೆಗೆ ರಾಜ್ಯಮಟ್ಟದಲ್ಲಿ ನಡೆದ ಹಲವಾರು ಬೇಸಿಗೆ ಶಿಬಿರ ಹಾಗೂ ವಿಕಲಚೇತನರ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾನೆ. 2008ರಿಂದ ಇದುವರೆಗೆ ನಡೆದಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾನೆ.
ಹೀಗೆ, ಅಂತಾರಾಷ್ಟ್ರೀಯ ಮಟ್ಟದ ವಿಕಲಚೇತನರ ಪಂದ್ಯಾವಳಿಯಲ್ಲಿ ಭಾರತಕ್ಕೊಂದು ಗೌರವ ತಂದಿದ್ದರೂ, ಈತ ಎಲ್ಲೆಲ್ಲೂ ಸುದ್ದಿಯಾಗಲಿಲ್ಲ. ಅದನ್ನೂ ಈತ ಬಯಸಲೂ ಇಲ್ಲ. ಹೀಗೆ, ಎಲೆಮರೆ ಕಾಯಾಗಿದ್ದವನು... ಈಗ ಮೇ 19ರಂದು ನಡೆಯಲಿರುವ ವಿಶ್ವ 10 ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಓಡಲು ಸಜ್ಜಾಗಿದ್ದಾನೆ.
ಈ ಬಾರಿ ವಿಶ್ವ 10 ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಭಾಗವಹಿಸಲಿರುವ ವಿಕಲಚೇತನರಿಗಾಗಿ 'ಚಾಂಪಿಯನ್ಸ್ ವಿತ್ ಡಿಸಬಿಲಿಟಿ' ಎಂಬ ವಿಶೇಷವಾದೊಂದು ವಿಭಾಗವೇ ಇದೆ. ಆದರೆ, ಇದರಲ್ಲಿ ಸಂತೋಷ್ ಭಾಗವಹಿಸುತ್ತಿಲ್ಲ. ಅದಕ್ಕೆ ಬದಲಾಗಿ, ಎಲ್ಲರೂ ಭಾಗವಹಿಸುತ್ತಿರುವ ಜನರಲ್ ವಿಭಾಗದಲ್ಲೇ 10 ಕಿ.ಮೀ. ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. 'ಮುಂದೇನಾಗಬೇಕು ಎಂದು ಬಯಸಿದ್ದೀಯ ?' ಎಂದು ಕೇಳಿದರೆ, 'ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೊಂದು ಚಿನ್ನದ ಪದಕ ತಂದುಕೊಡಬೇಕೆಂಬ ಆಸೆಯಿದೆ' ಎಂದು ಅಸ್ಪಷ್ಟವಾಗಿ ನುಡಿಯುತ್ತಾನೆ.
ಎಲ್ಲ ಮಕ್ಕಳಂತೆ ಮಾಮೂಲಿಯಾಗಿ ಕಲಿಯಲು ಅವಕಾಶವಾಗದಿದ್ದ ಈತ, ಇದೀಗ ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಕಟ್ಟಿದ್ದಾನೆ. ಓದುವ ಆಸಕ್ತಿಯೊಂದಿಗೆ, ಕ್ರೀಡೆಯಲ್ಲೂ ತೊಡಗಿಸಿಕೊಂಡು ಸಾಧನೆ ಮಾಡಬೇಕೆನ್ನುವ ಹಂಬಲವಿದೆ. ಆದರೆ, ಸಾಧನೆಗೆ ಆರ್ಥಿಕ ಮುಗ್ಗಟ್ಟಿರುವುದರಿಂದ ಸೂಕ್ತ ಪ್ರಾಯೋಜಕತ್ವ ದೊರಕಿದರೆ, ಸಾಧನೆ ಮಾಡುವ ಮಹದಾಸೆ ಈತನಿಗಿದೆ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 'ಏಷ್ಯನ್ ಪೆಸಿಫಿಕ್ ರೀಜನಲ್ ಗೇಮ್ಸ್‌'ಗೂ ತೆರಳುತ್ತಿರುವ ಸಂತೋಷ್, ಚಿನ್ನದ ಪದಕದ ಅದಮ್ಯ ಬಯಕೆ ಹೊಂದಿದ್ದಾನೆ.

- ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.