ಕ್ರೀಡೆ

ಫೈನಲ್‌ಗೆ ಸಿಎಸ್‌ಕೆ

ಫೈನಲ್‌ಗೆ ಸಿಎಸ್‌ಕೆ
Published On :

ನವದೆಹಲಿ: ಮೈಕಲ್ ಹಸ್ಸಿ ಹಾಗೂ ಸುರೇಶ್ ರೈನಾ ಅವರ ಮುರಿಯದ ಶತಕದ ಜತೆಯಾಟ ಹಾಗೂ ಬ್ರಾವೊ ಮತ್ತು ಜಡೇಜಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 48 ರನ್‌ಗಳ ಸೋಲು ಅನುಭವಿಸಿದೆ.
ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಸಿಎಸ್‌ಕೆ ಫೈನಲ್‌ಗೆ ಪ್ರವೇಶಿಸಿದ್ದು, ಮುಖಭಂಗ ಅನುಭವಿಸಿರುವ ಮುಂಬೈ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಮೈಕಲ್ ಹಸ್ಸಿ ತಂಡಕ್ಕೆ 52 ರನ್‌ಗಳ ಜತೆಯಾಟ ನೀಡುವ ಮೂಲಕ ಉತ್ತಮ ಆರಂಭ ನೀಡಿದರು. ಮೊದಲ ಎಸೆತದಲ್ಲೆ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಈ ಜೋಡಿ ಪ್ರತಿ ಓವರ್‌ನಲ್ಲೂ ಬೌಂಡರಿಗಳನ್ನು ಗಳಿಸಿದರು.
ಈ ವೇಳೆ 23 ರನ್‌ಗಳಿಸಿದ ಮುರಳಿ ವಿಜಯ್, ಪೊಲಾರ್ಡ್ ಎಸೆತದಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ರೈನಾ ಹಸ್ಸಿ ಜತೆ ಸೇರಿ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ನಂತರ ಕ್ರಮೇಣ ರನ್‌ಗತಿ ಹೆಚ್ಚಿಸಿದ ಈ ಜೋಡಿ 140 ರನ್‌ಗಳ ಜತೆಯಾಟವಾಡಿತು. ಮುಂಬೈ ತಂಡದ ಪರ ಪೊಲಾರ್ಡ್ 28 ರನ್ ನೀಡಿ 1 ವಿಕೆಟ್ ಪಡೆದರು.
ಸಿಎಸ್‌ಕೆ ನೀಡಿದ ಬೃಹತ್ ಸವಾಲು ಬೆನ್ನಟ್ಟಿದ ಮುಂಬೈ ತಂಡ 18.4 ಓವರ್‌ಗಳಲ್ಲಿ 144 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಡ್ವೇನ್ ಸ್ಮಿತ್ ಉತ್ತಮ ಹೋರಾಟ ನಡೆಸಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಸ್ಮಿತ್ 68 ರನ್ ಗಳಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅವರು 6 ಬೌಂಡರಿ, 5 ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು ಮತ್ತೋರ್ವ ಆರಂಭಿಕ ಆದಿತ್ಯ ತಾರೆ ಕೇವಲ 7 ರನ್‌ಗಳಿಸಿದರು. ನಂತರ ಬಂದ ಕಾರ್ತಿಕ್ 11 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ನಾಯಕ ಶರ್ಮಾ 8 ರನ್ ಗಳಿಸಿ ಮೊರಿಸ್‌ಗೆ ವಿಕೆಟ್ ಒಪ್ಪಿಸಿದರೆ, ಪೊಲಾರ್ಡ್ 24 ರನ್‌ಗಳಿಸಿ ಜಡೇಜಾ ಎಸೆತದಲ್ಲಿ ಹಸ್ಸಿಗೆ ಕ್ಯಾಚಿತ್ತರು. ರಾಯುಡು 15 ರನ್‌ಗಳಿಸಿ ಮೊಹಿತ್‌ಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಬಾಲಂಗೋಚಿಗಳಾದ ಹರ್ಭಜನ್ (0), ಜಾನ್ಸನ್ (6), ಮಾಲಿಂಗಾ (0), ಓಜಾ (0), ಪಟೇಲ್(0) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.  ಇನ್ನು ಸಿಎಸ್‌ಕೆ ತಂಡದ ಪರ ಜಡೇಜಾ ಹಾಗೂ ಬ್ರಾವೊ ತಲಾ 3 ವಿಕೆಟ್ ಪಡೆದರೆ, ಮೊಹಿತ್ 2 ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿ ಅಜೇಯ 86 ರನ್‌ಗಳಿಸಿದ ಹಸ್ಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಕೋರ್ ಬೋರ್ಡ್

ಚೆನ್ನೈ ಸೂಪರ್ ಕಿಂಗ್ಸ್ 192/1 (20 ಓವರ್)
ಹಸ್ಸಿ ಅಜೇಯ 86(58), ವಿಜಯ್ ಸಿ ಸ್ಮಿತ್ ಬಿ ಪೊಲಾರ್ಡ್ 23(20), ರೈನಾ ಅಜೇಯ 82(42), ಇತರೆ 1
ವಿಕೆಟ್ ಪತನ: 1-52
ಬೌಲಿಂಗ್: ಜಾನ್ಸನ್ 4-0-40-0, ಮುನಾಫ್ 3-0-32-0, ಹರ್ಭಜನ್ 4-0-26-0, ಮಾಲಿಂಗಾ , ಓಜಾ 2-0-20-0, ಪೊಲಾರ್ಡ್ 3-0-28-1

ಮುಂಬೈ ಇಂಡಿಯನ್ಸ್ 144 (20 ಓವರ್)
ಸ್ಮಿತ್ ಸಿ ರೈನಾ ಬಿ ಜಡೇಜಾ 68(28), ತಾರೆ ಸಿ ವಿಜಯ್ ಬಿ ಮಾರ್ಕೆಲ್ 7(7), ಕಾರ್ತಿಕ್ ಎಲ್‌ಬಿಡಬ್ಲ್ಯೂ ಬಿ ಜಡೇಜಾ 11(18), ಶರ್ಮಾ ಸಿ ಬ್ರಾವೊ ಬಿ ಮೊರಿಸ್ 8(15), ಪೊಲಾರ್ಡ್ ಸಿ ಹಸ್ಸಿ ಬಿ ಜಡೇಜಾ 24(16), ರಾಯುಡು ಸಿ ಮೊರಿಸ್ ಬಿ ಮೊಹಿತ್ 15(14), ಹರ್ಭಜನ್ ಸಿ ವಿಜಯ್ ಬಿ ಬ್ರಾವೊ 0(4), ಜಾನ್ಸನ್ ಸಿ ರೈನಾ ಬಿ ಬ್ರಾವೊ 6(7), ಮಾಲಿಂಗಾ ಸಿ ಹಸ್ಸಿ ಬಿ ಬ್ರಾವೊ 0(2), ಇತರೆ 5
ವಿಕೆಟ್ ಪತನ: 1-12, 2-87, 3-95, 4-101, 5-127, 6-128, 7-139, 8-140, 9-144, 10-144
ಬೌಲಿಂಗ್: ಮೊಹಿತ್ 3.4-0-32-2, ಮಾರ್ಕೆಲ್ 3-0-26-1, ಮೊರಿಸ್ 3-0-26-1, ಅಶ್ವಿನ್ 2-0-17-0, ಜಡೇಜಾ 4-0-31-3, ಬ್ರಾವೊ 3-0-9-3

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.